ಶಿಗ್ಗಾಂವಿ(ಸೆ.23):ಅನುದಾನ ಸಹಿತ ಶಾಲೆಯಲ್ಲಿ 12 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತಿಯಾದರೂ ಸರ್ಕಾರ ನಿವೃತ್ತಿ ನಂತರದ ಸೌಲಭ್ಯಗಳನ್ನು ನೀಡದೆ ಇರುವುದರಿಂದ ಜೀವನ ಸಾಗಿಸುವುದು ದುಸ್ತರವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ನಿವೃತ್ತ ಶಿಕ್ಷಕಿ ಸುಮಂಗಳಾ ಪರ್ವತಗೌಡ ಪಾಟೀಲ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

1989ರಲ್ಲಿ ಅನುದಾನ ರಹಿತ ಬಂಕಾಪುರದ ಕೀರ್ತಿ ಪ್ರೌಢಶಾಲೆಯಲ್ಲಿ ಕನ್ನಡ ವಿಷಯ ಬೋಧನಾ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ್ದು 17 ವರ್ಷ ಸೇವೆ ಸಲ್ಲಿಸಿದೆ. ಬಳಿಕ ಈ ಶಾಲೆ ಅನುದಾನ ಸಹಿತವಾದ ಬಳಿಕ 2018ರ ವರೆಗೆ (12 ವರ್ಷ 7 ತಿಂಗಳು) ಸರ್ಕಾರಿ ವೇತನ ಪಡೆದು ನಿವೃತ್ತಿಯಾಗಿದ್ದಾರೆ. ಆದರೆ ಸರ್ಕಾರ ನಿವೃತ್ತಿ ಬಳಿಕ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ನೋಡಿಕೊಳ್ಳಲು ಪತಿ ಬಿಟ್ಟು ಯಾರು ಇಲ್ಲ. ಕೂಲಿ ಮಾಡಿ ಜೀವನ ಸಾಗಿಸಲು ಶಕ್ತಿಯೂ ಇಲ್ಲ. ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ಹೀಗಾಗಿ ನಿವೃತ್ತಿ ಸೌಲಭ್ಯ ಪಡೆಯಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಸರ್ಕಾರ ತಕ್ಷಣ ನಿವೃತ್ತಿ ಸೌಲಭ್ಯ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ನಿವೃತ್ತ ಶಿಕ್ಷಕನಿಂದ ದಯಾಮರಣಕ್ಕೆ ಪತ್ರ

ಎಲ್ಲ ರಾಜ್ಯಗಳಲ್ಲೂ ಪಿಂಚಣಿ ಸೌಲಭ್ಯವಿದ್ದರೂ ನಮ್ಮ ರಾಜ್ಯದಲ್ಲಿ ಇಲ್ಲ. ತಕ್ಷಣ ಸರ್ಕಾರ ಅನುದಾನಿತ ಶಾಲಾ-ಕಾಲೇಜುಗಳು ಪಿಂಚಣಿ ವಂಚಿತರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿರುವ ಸುಮಂಗಳಾ, ನನ್ನ ಕುಟುಂಬಕ್ಕೆ ದಯಾಮರಣದ ಅನುಮತಿ ನೀಡಬೇಕೆಂಧು ರಾಷ್ಟ್ರಪತ್ರಿ ಅವರಿಗೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 60 ಸಾವಿರಕ್ಕಿಂತ ಹೆಚ್ಚು ಅನುದಾನಿ ಶಾಲಾ-ಕಾಲೇಜುಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳು ವಯೋ ನಿವೃತ್ತಿ ಹೊಂದಿದ್ದು, ಅವರ ಬದುಕು ನಿರ್ವಹಣೆಗೆ ಸರ್ಕಾರ ಅವರ ಸೇವಾ ಅವಧಿ ಪರಿಗಣಿಸಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಈ ಕುರಿತು ಸಾಕಷ್ಟುಬಾರಿ ಹೋರಾಟ ಮಾಡಿದ್ದೇವೆ. ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗೆ ಮನವಿ ಮಾಡಿದ್ದು ಭರವಸೆ ಮಾತ್ರ ಸಿಕ್ಕಿದೆ. ತಕ್ಷಣ ಸರ್ಕಾರ ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ಅವರು ತಿಳಿಸಿದ್ದಾರೆ.