ಬೆಂಗಳೂರು(ಅ.30): ಉಪ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ನ.1ರಿಂದ 4ರವರೆಗೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟಕ್ಕೆ ನಿರ್ಬಂಧದ ಜೊತೆಗೆ ನಿಷೇಧಾಜ್ಞೆಯನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಜಾರಿಗೊಳಿಸಿದ್ದಾರೆ.

ಯಶವಂತಪುರ, ಆರ್‌ಎಂಸಿ ಯಾರ್ಡ್‌, ರಾಜಗೋಪಾಲ ನಗರ, ಪೀಣ್ಯ, ನಂದಿನಿ ಲೇಔಟ್‌, ಮಹಾಲಕ್ಷ್ಮೀ ಲೇಔಟ್‌, ಜಾಲಹಳ್ಳಿ, ಗಂಗಮ್ಮನಗುಡಿ, ರಾಜರಾಜೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಅನ್ನಪೂಣೇಶ್ವರಿ ನಗರ ಹಾಗೂ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟ ಇರುವುದಿಲ್ಲ. ಅದೇ ರೀತಿ ನ.3ರಂದು ಮತದಾನ ಮುಗಿದ ನಂತರವು ಒಂದು ದಿನ ಮಟ್ಟಿಗೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರೆಯಲಿದೆ. ನ.4ರಂದು ಸಂಜೆ 5ಕ್ಕೆ ನಿಷೇಧಾಜ್ಞೆ ಹಿಂಪಡೆಯಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮದ್ಯಪ್ರಿಯರಿಗೆ ಶಾಕ್, ಬೆಂಗಳೂರಲ್ಲಿ ಎರಡು ದಿನ ಎಣ್ಣೆ ಸಿಗಲ್ಲ!

ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿ ಐದಕ್ಕಿಂತ ಜನರು ಗುಂಪು ಸೇರುವಂತಿಲ್ಲ. ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಪಂಗಡಗಳು ಮೆರವಣಿಗೆ ಅಥವಾ ಪ್ರತಿಭಟನೆ ನಡೆಸುವಂತಿಲ್ಲ. ಶಸ್ತ್ರಾಸ್ತ್ರ ಹಾಗೂ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ.