Asianet Suvarna News Asianet Suvarna News

ನೇತ್ರ ವಿಜ್ಞಾನದಲ್ಲಿ ಹೊಸ ಸಂಶೋಧನೆ ನಡೆಯಲಿ: ರಾಜ್ಯಪಾಲ

ನೇತ್ರವಿಜ್ಞಾನದಲ್ಲಿ ಹೊಸ ಸಂಶೋಧನೆ, ಚರ್ಚೆಗಳು ನಡೆಯಬೇಕು. ಎಲ್ಲರೂ ದೃಷ್ಟಿದೋಷದಿಂದ ವಿಮುಕ್ತರಾಗಿ, ಸ್ವ ದೃಷ್ಟಿಯಿಂದ ಜಗತ್ತು ನೋಡುವಂತಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

Research is needed in Ophthalmology says governor gehloth rav
Author
First Published Dec 11, 2022, 12:26 PM IST

ಹುಬ್ಬಳ್ಳಿ (ಡಿ.11) : ನೇತ್ರವಿಜ್ಞಾನದಲ್ಲಿ ಹೊಸ ಸಂಶೋಧನೆ, ಚರ್ಚೆಗಳು ನಡೆಯಬೇಕು. ಎಲ್ಲರೂ ದೃಷ್ಟಿದೋಷದಿಂದ ವಿಮುಕ್ತರಾಗಿ, ಸ್ವ ದೃಷ್ಟಿಯಿಂದ ಜಗತ್ತು ನೋಡುವಂತಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸಂಜೆ ಕರ್ನಾಟಕ ನೇತ್ರ ತಜ್ಞರ ಸಂಘದ ವತಿಯಿಂದ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 41ನೇ ರಾಜ್ಯಮಟ್ಟದ ನೇತ್ರ ತಜ್ಞರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಹದ ಅಂಗಗಳಲ್ಲಿ ನೇತ್ರ ಪ್ರಮುಖ ಅಂಗವಾಗಿದೆ. ಅನೇಕ ಕಾರಣಗಳಿಂದ ದೃಷ್ಟಿಹೀನವಾಗಿರುವವರನ್ನು ಗುರುತಿಸಿ ದೃಷ್ಟಿದೋಷದಿಂದ ವಿಮುಖಗೊಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ನೇತ್ರ ವಿಜ್ಞಾನದಲ್ಲಿ ಸಂಶೋಧನೆ ಅಗತ್ಯವಾಗಿದೆ. ನೇತ್ರಚಿಕಿತ್ಸೆಯಲ್ಲಿ ಉತ್ತಮಸೇವೆ ಮಾಡಿದವರನ್ನು ಗೌರವಿಸಿದ್ದು ಸಂತಸದ ವಿಷಯ. ಡಾ. ಎಂ.ಎಂ. ಜೋಶಿ 4-5 ದಶಕಗಳ ಕಾಲ ನೇತ್ರ ವೈದ್ಯಕೀಯದಲ್ಲಿ ತೊಡಗಿಕೊಂಡು, ಸಮಾಜದ ಆರೋಗ್ಯಕ್ಕೆ ಶ್ರಮಿಸಿದ್ದಾರೆ ಎಂದರು.

 

ಏಕರೂಪ ವಿವಾಹ ವಯೋಮಿತಿ: ಕೇಂದ್ರದ ಅನಿಸಿಕೆ ಕೇಳಿದ ಸುಪ್ರೀಂಕೋರ್ಟ್‌

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಸಾಕಷ್ಟುಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಮೆಡಿಕಲ್‌ ಟೂರಿಸ್‌ಂ ಹಬ್‌ ಆಗಿ ಹೊರಹೊಮ್ಮಲಿದೆ. ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ಇಂದು ಭಾರತ ತೋರಿಸಿಕೊಡುತ್ತಿದೆ. ವಿಶ್ವಕ್ಕೆ ಹೋಲಿಕೆ ಮಾಡಿದರೆ ಭಾರತ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.

ವಿಶ್ವದ 5ನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದಿದೆ. ಕೋವಿಡ್‌ ಆನಂತರ ವ್ಯಾಪಾರ ಮತ್ತು ಸೇವಾ ವಲಯದಲ್ಲಿ ಗಣನೀಯ ಸಾಧನೆ ಕಂಡಿದೆ. ವಿಕ್ರಮ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದ ಬೇಡಿಕೆಗಳನ್ನು ಭಾರತ ಪೂರ್ಣಗೊಳಿಸುತ್ತಿದೆ. ಜಗತ್ತಿನ ನಾಯಕತ್ವ ವಹಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಬೆಳೆಯುತ್ತಿದೆ ಎಂದರು.

ವಿಶ್ವಮಟ್ಟದಲ್ಲಿ ಉತ್ತಮ ವೈದ್ಯರ ಅಗತ್ಯವಿದೆ. ಅದನ್ನು ಪೂರೈಸುವ ಕೆಲಸ ಭಾರತ ಮಾಡುತ್ತಿದೆ. ಭಾರತದ ವೈದ್ಯರೇ ಬೇಕೆಂದು ವಿದೇಶದವರು ಕೇಳುತ್ತಿದ್ದಾರೆ. ಆ ಮಟ್ಟಿಗೆ ಭಾರತದ ವೈದ್ಯಕೀಯ ಕ್ಷೇತ್ರ ಬೆಳೆದಿದೆ. ಅದರಂತೆ ಇಲ್ಲಿನ ಶುಶ್ರೂಷಕರು, ಎಂಜಿನಿಯರ್‌ಗೂ ಹೆಚ್ಚಿನ ಬೇಡಿಕೆ ಇದೆ. ಭಾರತದ ಸಂಸ್ಕೃತಿ, ಕೌಟುಂಬಿಕ ಪದ್ಧತಿ, ಆಚಾರ-ವಿಚಾರವೇ ಇದಕ್ಕೆ ಕಾರಣವಾಗಿದೆ ಎಂದು ಜೋಶಿ ತಿಳಿಸಿದರು.

ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿದೆ. ಈಗಾಗಲೇ ಮೂರು ಜಿಲ್ಲೆಗೆ ಒಂದರಂತೆ ವೈದ್ಯಕೀಯ ಕಾಲೇಜು ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಂಧತ್ವ ಮುಕ್ತ ಭಾರತ ನಿರ್ಮಾಣಕ್ಕೆ ಸರ್ಕಾರ ದೃಢ ಸಂಕಲ್ಪ ಮಾಡಿದೆ. ವೈದ್ಯಕೀಯ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ ಎಂದರು.

ಸಂಘದ ಕಾರ್ಯದರ್ಶಿ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಕರ್ನಾಟಕ ನೇತ್ರ ತಜ್ಞರ ಸಂಘ 3 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ನೇತ್ರ ಚಿಕಿತ್ಸೆ ಕುರಿತು ನಿರಂತರ ಶಿಬಿರ, ಸೆಮಿನಾರ್‌, ಸಂಶೋಧನೆಗಳು ನಡೆಯುತ್ತಿವೆ. ಅಂಧತ್ವಮುಕ್ತ ರಾಜ್ಯ ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದರು.

 

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಇದೇ ವೇಳೆ ಡಾ. ರವಿ ನಾಡಿಗೇರ ಅವರಿಗೆ ಜೀವಮಾನ ಸಾಧನೆ, ಡಾ. ಎನ್‌.ಎಸ್‌. ಮುರಳೀಧರಗೆ ಡಾ. ಎಂ.ಎಂ. ಜೋಶಿ ಒರಿಯಂಟೇಷನ್‌ ಅವಾರ್ಡ್‌ ನೀಡಿ ಸನ್ಮಾನಿಸಲಾಯಿತು. ಸಾಧಕ ವೈದ್ಯರಾದ ಡಾ. ಕವಿತಾ ವಿ., ಡಾ. ಪೂಜಾ ಖಾಮರ, ಡಾ. ಶ್ವೇತಾ ಎಸ್‌., ಡಾ. ಎಚ್‌.ಎಸ್‌. ಮೋಹನ ಅವರನ್ನು ಗೌರವಿಸಲಾಯಿತು. ರಾಜ್ಯ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಎಸ್‌.ಬಿ. ಪಾಟೀಲ, ಪದ್ಮಶ್ರೀ ಪುರಸ್ಕೃತ ಡಾ. ಎಂ.ಎಂ. ಜೋಶಿ, ಅಖಿಲ ಭಾರತ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ. ಲಲಿತ ವರ್ಮಾ, ಸಂಘಟನಾ ಸಮಿತಿ ಅಧ್ಯಕ್ಷ ಡಾ. ಎ.ಎಸ್‌. ಕುಲಕರ್ಣಿ, ಚೈತ್ರಾ ಜಯದೇವ ಉಪಸ್ಥಿತರಿದ್ದರು.

Follow Us:
Download App:
  • android
  • ios