ಬೆಂಗಳೂರು(ಜ.25): ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಜ.26ರ ರಾಜ್ಯಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸುರಕ್ಷಿತ ಹಾಗೂ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ಈ ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪಾಸ್‌ ಹೊಂದಿರುವ ಗಣ್ಯರು, ಅತಿಗಣ್ಯರು ಹಾಗೂ ವಿಶೇಷ ಆಹ್ವಾನಿತರು ಸೇರಿ 500 ಮಂದಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಈ ಬಾರಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ನಾಡಗೀತೆ, ರೈತ ಗೀತೆ, ಪೊಲೀಸ್‌, ಮಿಲಿಟರಿ ಪಡೆಗಳಿಂದ ಪರೇಡ್‌, ರಾಜ್ಯಪಾಲರಿಂದ ರಾಜ್ಯದ ಜನತೆಗೆ ಸಂದೇಶ, ರಾಷ್ಟ್ರಗೀತೆ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾತ್ರ ಇರಲಿದೆ. ಒಟ್ಟಾರೆ 40 ನಿಮಿಷದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಯಲಿದೆ.

ಈ ಸಂಬಂಧ ಭಾನುವಾರ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಸ್ವರೂಪ ಹಾಗೂ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಮಂಗಳವಾರ (ಜ.26) ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದಾರೆ. 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆ ಬಳಿಕ ಪರೇಡ್‌ ವಂದನೆ ಸ್ವೀಕರಿಸಿ ನಾಡಿನ ಜನತೆಗೆ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ರೈತರಿಂದ ಬೆಂಗಳೂರಲ್ಲಿ 10 ಸಾವಿರ ಟ್ರ್ಯಾಕ್ಟರ್‌ ರ‍್ಯಾಲಿ: ತಡೆಯೊಡ್ಡಿದರೆ ಹೆದ್ದಾರಿ ಬಂದ್!

ಈ ಬಾರಿಯ ಪರೇಡ್‌ನಲ್ಲಿ ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಎಆರ್‌, ಕೆಎಸ್‌ಐಎಸ್‌ಎಫ್‌, ಸಂಚಾರ ಪೊಲೀಸ್‌, ಮಹಿಳಾ ಪೊಲೀಸ್‌, ಟ್ರಾಫಿಕ್‌ ವಾರ್ಡನ್‌, ಅಗ್ನಿಶಾಮಕದಳ, ಡಾಗ್‌ ಸ್ವಾ$್ಕಡ್‌ ಮತ್ತು ಬ್ಯಾಂಡ್‌ ಸೇರಿದಂತೆ 21 ತುಕಡಿಗಳ 750 ಮಂದಿ ಭಾಗವಹಿಸಲಿದ್ದಾರೆ. ದೂರದರ್ಶನದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ಹೇಳಿದರು.
ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ನಗರ ಸಂಚಾರ ಪೊಲೀಸ್‌ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ಪೊಲೀಸ್‌ ಬಿಗಿ ಬಂದೋಬಸ್‌್ತ

ಕಾರ್ಯಕ್ರಮದ ಭದ್ರತೆಗಾಗಿ 7 ಮಂದಿ ಡಿಸಿಪಿಗಳು, 16 ಎಸಿಪಿಗಳು, ಕೆಎಸ್‌ಆರ್‌ಪಿಎ 12 ತುಕಡಿ, ಸಿಎಆರ್‌ನ 9 ತುಕಡಿ, ಗರುಡಾ ಪಡೆ, ಕ್ಷಿಪ್ರ ಕಾರ್ಯ ಪಡೆ ಸೇರಿದಂತೆ 1,100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮೈದಾನ ಹಾಗೂ ಆಕಟ್ಟಿನ ಸ್ಥಳಗಳಲ್ಲಿ ನಗಾವಹಿಸಲು 70 ಸಿಸಿ ಟಿವಿಗಳು ಹಾಗೂ ಎರಡು ಬ್ಯಾಗೇಜ್‌ ಸ್ಕಾ್ಯನರ್‌ ಅಳವಡಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆ್ಯಂಬುಲೆನ್ಸ್‌ಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಇರಲಿದ್ದಾರೆ. ನಗರದ ಹಲವು ಆಸ್ಪತ್ರೆಗಳಲ್ಲಿ ಸಾಕಷ್ಟುಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾಹಿತಿ ನೀಡಿದರು.

ಈ ವಸ್ತುಗಳಿಗೆ ನಿಷೇಧ

ಕಾರ್ಯಕ್ರಮ ವೀಕ್ಷಣೆಗೆ ಬರುವವರು ಮೈದಾನದೊಳಗೆ ಹೆಲ್ಮೆಟ್‌, ಕರಪತ್ರಗಳು, ಕ್ಯಾಮರಾ, ನೀರಿನ ಬಾಟಲ್‌, ಸಿಗರೇಟ್‌, ಬೆಂಕಿಪೊಟ್ಟಣ, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ಪಟಾಕಿ, ಬಾವುಟ, ಮದ್ಯದ ಬಾಟಲ್‌, ಮಾದಕ ವಸ್ತುಗಳು, ತಿಂಡಿ, ತಿನಿಸು ತರುವುದನ್ನು ನಿಷೇಧಿಸಲಾಗಿದೆ.