Asianet Suvarna News Asianet Suvarna News

ರೈತರಿಂದ ಬೆಂಗಳೂರಲ್ಲಿ 10 ಸಾವಿರ ಟ್ರ್ಯಾಕ್ಟರ್‌ ರ‍್ಯಾಲಿ: ತಡೆಯೊಡ್ಡಿದರೆ ಹೆದ್ದಾರಿ ಬಂದ್!

ರೈತರಿಂದ ನಾಳೆ ಬೆಂಗಳೂರಲ್ಲಿ 10 ಸಾವಿರ ಟ್ರ್ಯಾಕ್ಟರ್‌ ರಾರ‍ಯಲಿ| ಕೃಷಿ ಕಾಯ್ದೆ ವಿರುದ್ಧ ಗಣರಾಜ್ಯೋತ್ಸವ ದಿನ ಪ್ರತಿಭಟನೆ| ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗೆ ರಾಜ್ಯದಲ್ಲೂ ಭಾರಿ ಬೆಂಬಲ| ಹೋರಾಟಕ್ಕೆ ತಡೆಯೊಡ್ಡಿದರೆ ಹೆದ್ದಾರಿ ಬಂದ್‌ ಮಾಡುವುದಾಗಿ ರೈತರಿಂದ ಎಚ್ಚರಿಕೆ

Karnataka farmers plan massive tractor rally in Bengaluru on Republic Day pod
Author
Bangalore, First Published Jan 25, 2021, 7:16 AM IST

ಬೆಂಗಳೂರು(ಜ.25): ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರೈತರು ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತ ಪೆರೇಡ್‌ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌, ಟ್ರಕ್‌ಗಳೊಂದಿಗೆ ರೈತರ ಬೃಹತ್‌ ಪರೇಡ್‌ ಹಮ್ಮಿಕೊಳ್ಳಲಾಗಿದೆ.

ರೈತರ ಸಂಕಷ್ಟವನ್ನು ಆಡಳಿತ ವರ್ಗಕ್ಕೆ ಮುಟ್ಟಿಸುವ ಟ್ಯಾಬ್ಲೊಗಳ ಜೊತೆ ಹೆಜ್ಜೆ ಹಾಕಲಿರುವ ರಾಜ್ಯದ ಮೂಲೆ-ಮೂಲೆಯಿಂದ ಆಗಮಿಸಲಿರುವ ಅಸಂಖ್ಯಾತ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಲಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ರಾಜಧಾನಿ ದೆಹಲಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಮುಖ್ಯ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪ್ರಮುಖರು ಭಾಷಣ ಮುಗಿಸಿದ ನಂತರವಷ್ಟೇ ರಾಷ್ಟ್ರಧ್ವಜ, ರೈತ ಸಂಘದ ಬಾವುಟ ಕಟ್ಟಿದ ಸಾವಿರಾರು ವಾಹನಗಳಲ್ಲಿ ರೈತರು ಬೆಂಗಳೂರು ಪ್ರವೇಶ ಮಾಡುತ್ತಾರೆ. ಅಧಿಕೃತ ಸರ್ಕಾರಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ರೀತಿಯಲ್ಲೂ ತೊಂದರೆ ಉಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೈಸ್‌ ರಸ್ತೆ ಜಂಕ್ಷನ್‌ನಿಂದ ಪರೇಡ್‌:

ರೈತರ ಪರೇಡ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಹಾಗೂ ವಾಹನಗಳು ಭಾಗವಹಿಸಲಿವೆ. ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬೆಂಗಳೂರಿನ ಸುತ್ತಮುತ್ತಲಿನ ರೈತರು ಹಾಗೂ ಪ್ರಮುಖವಾಗಿ ತುಮಕೂರು ರಸ್ತೆ ನೈಸ್‌ ಜಂಕ್ಷನ್‌ನಿಂದ ಪರೇಡ್‌ ಪ್ರಾರಂಭ ಮಾಡಲಿದ್ದಾರೆ. ಟ್ರ್ಯಾಕ್ಟರ್‌ಗಳು, ಟ್ರಕ್‌ಗಳು ಹಾಗೂ ಕೃಷಿಗೆ ನೆರವಾಗುವ ಎಲ್ಲಾ ರೀತಿಯ ವಾಹನಗಳೊಂದಿಗೆ ಸಾವಿರಾರು ರೈತರು ಪರೇಡ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪರೇಡ್‌ ತಡೆದರೆ ಹೆದ್ದಾರಿ ಬಂದ್‌:

ಈಗಾಗಲೇ ದೆಹಲಿಯಲ್ಲಿ ರೈತರ ಪರೇಡ್‌ಗೆ ಅನುಮತಿ ನೀಡಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿಯೂ ರೈತರ ಪರೇಡ್‌ಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಎನ್ನುವ ಭರವಸೆ ಇದೆ. ರೈತರ ಪರೇಡ್‌ ತಡೆಯುವ ಪ್ರಯತ್ನ ನಡೆಸಿದರೆ ಹೆದ್ದಾರಿಗಳು ಬಂದ್‌ ಆಗಲಿವೆ ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ರೈತರ ಜತೆ ಈವರೆಗೂ 11 ಬಾರಿ ನಡೆಸಿರುವ ಸಭೆ ವಿಫಲವಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಎರಡು ವರ್ಷ ಜಾರಿ ಮಾಡಲ್ಲ ಎಂದರೆ, ನಂತರ ಜಾರಿ ಮಾಡುತ್ತಾರೆ ಎಂದೇ ಅರ್ಥ. ಹಾಗಾಗಿ ಕಾಯ್ದೆ ವಾಪಸ್‌ ಪಡೆಯುವವರೆಗೂ ಹೋರಾಟ ನಡೆಯಲಿದೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಬೆನ್ನು ತಟ್ಟಿಸಿಕೊಳ್ಳುವ ತವಕದಲ್ಲಿ ಯಡಿಯೂರಪ್ಪ ಅವರು ಭೂ ಸ್ವಾಧೀನ ಕಾಯಿದೆ, ಕೃಷಿ ಮಾರುಕಟ್ಟೆಕಾಯಿದೆ, ಭೂ ಸುಧಾರಣೆ ಕಾಯಿದೆಗಳ ತಿದ್ದುಪಡಿ ತಂದಿದ್ದಾರೆ. ಗೋಹತ್ಯೆ ಕಾಯಿದೆಯನ್ನು ಜಾನುವಾರು ಹತ್ಯೆ ನಿಷೇಧ ಕಾಯ್ದೆಯಾಗಿ ಮಾರ್ಪಡಿಸಿದ್ದಾರೆ. ದೆಹಲಿ ಸರ್ಕಾರವು ರೈತರೊಂದಿಗೆ ನಡೆಸಿದ ಹಲವು ಸುತ್ತಿನ ಮಾತುಕತೆ ವಿಫಲವಾಗಿದೆ. ವಿವಾದಿತ ಕಾಯಿದೆಗಳನ್ನು ಸಂಪೂರ್ಣ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಶಾಂತಿಯುತ ಹೋರಾಟ:

ಜ.26ರಂದು ಅತ್ಯಂತ ಶಾಂತಿಯುತವಾಗಿ ರೈತರು ಪರೇಡ್‌ ನಡೆಸಲಿದ್ದಾರೆ. ಸರ್ಕಾರದ ಅಧಿಕೃತ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇನ್ನು ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವುದು, ಅತಿಕ್ರಮ ಪ್ರವೇಶ ಮಾಡುವುದು ಸೇರಿ ಯಾವುದೇ ಚಟುವಟಿಕೆ ಇರುವುದಿಲ್ಲ. ಅತ್ಯಂತ ಶಾಂತಿಯುತ ರೀತಿಯಲ್ಲಿ ಹೋರಾಟ ನಡೆಸುತ್ತೇವೆ ಎಂದು ಚಂದ್ರಶೇಖರ್‌ ತಿಳಿಸಿದರು.

ಟ್ರ್ಯಾಕ್ಟರ್‌ ರಾರ‍ಯಲಿಯ ಮಾರ್ಗ

ರೈತರು ಟ್ರ್ಯಾಕ್ಟರ್‌ನೊಂದಿಗೆ ನೈಸ್‌ ರಸ್ತೆ ಜಂಕ್ಷನ್‌ನಿಂದ ಹೊರಟು ಗೊರಗುಂಟೆಪಾಳ್ಯ ಕ್ರಾಸ್‌, ಯಶವಂತಪುರ ಮತ್ತು ಮಲ್ಲೇಶ್ವರದ ಮಾರಮ್ಮ ವೃತ್ತ, ಶೇಷಾದ್ರಿಪುರ ಪೊಲೀಸ್‌ ಠಾಣೆ, ಆನಂದರಾವ್‌ ವೃತ್ತ, ಶೇಷಾದ್ರಿ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನವನ ತಲುಪಲಿದ್ದಾರೆ.

ಬೆಂಗಳೂರಲ್ಲಿ ಮಾತ್ರ ಪರೇಡ್‌

ಜನವರಿ 26ರಂದು ನಡೆಯಲಿರುವ ರೈತರ ಪರೇಡ್‌ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ. ರಾಜ್ಯದ ಮೂಲೆ-ಮೂಲೆಯಿಂದ ರೈತರು ಬೆಂಗಳೂರಿನ ಪರೇಡ್‌ನಲ್ಲೇ ಬಂದು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಿಸಿಕೊಂಡ ನಂತರ ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳುವ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಚಂದ್ರಶೇಖರ್‌ ತಿಳಿಸಿದರು.

ದಿಲ್ಲಿ ರೀತಿ ನಮಗೂ ಅನುಮತಿ ನೀಡಿ

ದೆಹಲಿಯಲ್ಲಿ ರೈತರ ಪರೇಡ್‌ಗೆ ಅನುಮತಿ ನೀಡಲಾಗಿದೆ. ಬೆಂಗಳೂರಿನಲ್ಲೂ ರೈತರ ಪರೇಡ್‌ಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಎನ್ನುವ ಭರವಸೆ ಇದೆ. ಅಡ್ಡಿಪಡಿಸಿದರೆ ಹೆದ್ದಾರಿ ಬಂದ್‌ ಮಾಡುತ್ತೇವೆ.

- ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

ಟ್ರ್ಯಾಕ್ಟರ್‌ ತಂದರೆ ಜಪ್ತಿ: ಪೊಲೀಸರು

ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್‌ ಪರೇ​ಡ್‌ಗೆ ಅವ​ಕಾ​ಶ ಇಲ್ಲ. ನಗ​ರದ ಒಳಕ್ಕೆ ಟ್ರ್ಯಾಕ್ಟ​ರ್‌ ತಂದರೆ ಸ್ಥಳ​ದಲ್ಲೇ ಜಪ್ತಿ ಮಾಡ​ಲಾ​ಗು​ವುದು. ಬಳಿಕ ಕೋರ್ಟ್‌ ಮೂಲಕ ಬಿಡಿ​ಸಿ​ಕೊ​ಳ್ಳ​ಬೇ​ಕಾ​ಗು​ತ್ತದೆ.

- ಕಮಲ್‌ ಪಂತ್‌, ಬೆಂಗಳೂರು ಪೊಲೀಸ್‌ ಆಯುಕ್ತ

Follow Us:
Download App:
  • android
  • ios