ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರ ವಾದಿಸುತ್ತಿದ್ದ ವಕೀಲ ಸುನಿಲ್ ಕುಮಾರ್ ಅವರು ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಹಿರಿಯ ವಕೀಲ ಹಶ್ಮತ್ ಪಾಷಾ ಪ್ರವೇಶಿಸಿದ್ದು, ಈ ಬದಲಾವಣೆಯು ಪ್ರಕರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಬೆಂಗಳೂರು: ನಟ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಭಾಗಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗ ತೀವ್ರ ಕುತೂಹಲಕಾರಿ ತಿರುವು ಸಿಕ್ಕಿದೆ. ಪ್ರಕರಣದ ಆರಂಭದಿಂದಲೂ ಆರೋಪಿಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಪ್ರಮುಖ ವಕೀಲರಾದ ಸುನಿಲ್ ಕುಮಾರ್ ಅವರು ಈ ಹೈಪ್ರೊಫೈಲ್ ಕೇಸ್‌ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಈ ಕುರಿತು ಅವರು ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡುವ ಮೂಲಕ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣದಿಂದ ವಕೀಲ ಸುನಿಲ್ ಕುಮಾರ್ ಹಿಂದೆ ಸರಿದಿದ್ದೇಕೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಯ (Trial) ಹಂತದಲ್ಲೂ ತಾವಿನ್ನು ಮುಂದುವರಿಯುವುದಿಲ್ಲ ಎಂದು ವಕೀಲ ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಹೈಕೋರ್ಟ್ ಮುಂದೆಯೇ ಕೇಸ್‌ನಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದ ಅವರು, ಈಗ ಬೆಂಗಳೂರಿನ 59ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯಕ್ಕೆ ಅಧಿಕೃತವಾಗಿ ಮೆಮೋ ಸಲ್ಲಿಕೆ ಮಾಡಿದ್ದಾರೆ.

ಸುನಿಲ್ ಕುಮಾರ್ ಅವರು ಈ ಪ್ರಕರಣದಲ್ಲಿ ಕೇವಲ ನಟ ದರ್ಶನ್ ಮಾತ್ರವಲ್ಲದೆ, ದರ್ಶನ್ ಆಪ್ತರಾದ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿಯೂ ವಕಾಲತ್ತು ವಹಿಸಿದ್ದರು. ಈಗ ಈ ಮೂವರ ವಿಚಾರದಲ್ಲೂ ತಾವು ವಕಾಲತ್ತಿನಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿ, ತಮ್ಮ ಕಚೇರಿಯ ಕಿರಿಯ ವಕೀಲರ ಮೂಲಕ ಕೋರ್ಟ್‌ಗೆ ಮೆಮೋ ರವಾನಿಸಿದ್ದಾರೆ.

ಹಿರಿಯ ವಕೀಲ ಹಶ್ಮತ್ ಪಾಷಾ ಎಂಟ್ರಿ!

ವಕೀಲ ಸುನಿಲ್ ಕುಮಾರ್ ಹಿಂದೆ ಸರಿದ ಬೆನ್ನಲ್ಲೇ, ಪ್ರಕರಣಕ್ಕೆ ಹಿರಿಯ ವಕೀಲ ಹಶ್ಮತ್ ಪಾಷಾ ಅವರ ಪ್ರವೇಶವಾಗಿದೆ. ನಿಮ್ಮ ಪರವಾಗಿ ಹಿರಿಯ ವಕೀಲರಾದ ಹಶ್ಮತ್ ಪಾಷಾ ಅವರು ವಕಾಲತ್ತು ಹಾಕಿದ್ದಾರೆ ಎಂಬ ವಿಷಯವನ್ನು 59ನೇ ಸೆಷನ್ಸ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ಅವರ ಗಮನಕ್ಕೆ ತಂದಿತು. ನ್ಯಾಯಾಧೀಶರ ಮಾತುಗಳನ್ನು ಆಲಿಸಿದ ದರ್ಶನ್, ಓಕೆ , ನಾನೂ ಕೂಡ ಈ ಬಗ್ಗೆ ನನ್ನ ಕುಟುಂಬಸ್ಥರ ಬಳಿ ಮಾತನಾಡಿ ಮುಂದಿನ ನಿರ್ಧಾರವನ್ನು ಹೇಳುತ್ತೇನೆ ಎಂದು ಕೋರ್ಟ್‌ಗೆ ತಿಳಿಸಿದರು.

ದಾಖಲೆಗಳ ಹಸ್ತಾಂತರಕ್ಕೆ ನ್ಯಾಯಾಲಯದ ಸೂಚನೆ

ಇದೇ ವೇಳೆ ನ್ಯಾಯಾಲಯವು, ಈ ಹಿಂದಿನ ವಕೀಲರ ಬಳಿ ಇರುವ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಕಾನೂನು ದಾಖಲೆಗಳು ಹಾಗೂ ಚಾರ್ಜ್‌ಶೀಟ್ ಪ್ರತಿಗಳನ್ನು ನೂತನ ವಕೀಲರಿಗೆ ಹಸ್ತಾಂತರಿಸುವಂತೆ ಸೂಚನೆ ನೀಡಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸುನಿಲ್ ಕುಮಾರ್ ಅವರ ಜೂನಿಯರ್ ವಕೀಲ ಶೋಬಿತ್, ನಾವು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ದಾಖಲೆಗಳನ್ನು ದರ್ಶನ್ ಕುಟುಂಬಸ್ಥರಿಗೆ ತಲುಪಿಸಿದ್ದೇವೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಪ್ರಕರಣದ ವಿಚಾರಣೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ವಕಾಲತ್ತು ವಹಿಸಿಕೊಂಡಿರುವುದು ಕಾನೂನು ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.