Asianet Suvarna News Asianet Suvarna News

ಸಾವಯವ ಕೃಷಿಕ ಡಾ.ನಾರಾಯಣ ರೆಡ್ಡಿ ಇನ್ನಿಲ್ಲ

ದೇಶ ವಿದೇಶಗಳಲ್ಲಿ ಸಾವಯವ ಕೃಷಿ ಹಾಗೂ ಗಿಡ-ಮರಗಳ ಮಹತ್ವದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅರಿವು ಮೂಡಿಸುತ್ತಿದ್ದ ನಾಡೋಜ ಡಾ.ನಾರಾಯಣ ರೆಡ್ಡಿ ದೊಡ್ಡಬಳ್ಳಾಪುರದಲ್ಲಿ ಕೊನೆಯುಸಿರೆಳೆದಿದ್ದಾರೆ.

Renowned organic farmer Dr Narayana Reddy dies at 80
Author
Bengaluru, First Published Jan 14, 2019, 1:49 PM IST

ದೊಡ್ಡಬಳ್ಳಾಪುರ: ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಾವಯವ ಕೃಷಿಕ ನಾಡೋಜ ಎಲ್.ನಾರಾಯಣ ರೆಡ್ಡಿ ಕೊನೆಯುಸಿರೆಳೆದಿದ್ದಾರೆ.

ಕೃಷಿ ಎಂದರೆ ಬರೀ ಆಹಾರ ಉತ್ಪಾದನೆಯಲ್ಲ. ಅದು ಜೀವನ ಕ್ರಮ ಎಂಬ ಸಂದೇಶ ಸಾರಿದ ಈ ಮಹಾನ್ ಚಿಂತಕರಿಗೆ 80 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ. ಸೋಮವಾರ ಮಧ್ಯಾಹ್ನ ವರ್ತೂರು ಬಳಿಯ ತರಹುಳಿಸೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ನಿವಾಸಿಯಾಗಿದ್ದ ನಾರಾಯಣರೆಡ್ಡಿ ರೈತರಿಗೆ ಮಾರ್ಗದರ್ಶಿಯಾಗಿದ್ದರು. ಜಪಾನಿನ ಮಸನವೋ ಫುಕುವೋಕಾ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು, ಯಶಸ್ವಿಯಾಗಿ ಎಲ್ಲೆಡೆ ಇದರ ಮಹತ್ವವನ್ನು ಸಾರುತ್ತಿದ್ದರು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾವಯವ ಸಮಗ್ರ ಕೃಷಿ ಮಾಡಿದ ಮೊದಲಿಗರು ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದರು. 

ಕಡಿಮೆ ನೀರಿನಲ್ಲಿ ಭತ್ತ ಬೆಳೆದು, ಅಧಿಕ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ರೆಡ್ಡಿಯವರು ಸ್ವಾವಲಂಬಿ ಕೃಷಿ ಹಾಗೂ ಕೃಷಿಕನ ಮಹತ್ವದ ಬಗ್ಗೆ ತಿಳಿ ಹೇಳುತ್ತಿದ್ದರು. ಸದಾ ಪರಿಸರ ಕಾಳಜಿ ಬಗ್ಗೆಯೇ ಒಲವು ತೋರುತ್ತಿದ್ದ ಡಾ.ರೆಡ್ಡಿಯವರು ಎಲ್ಲೆಡೆ ಗಿಡ ನೆಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.

ಹಲವು ದೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದ ಡಾ.ರೆಡ್ಡಿಯವರ ಕೃಷಿ ಸಾಧನೆಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದ್ದವು. ಹಂಪಿ ವಿವಿಯ ನಾಡೋಜ ಗೌರವವಕ್ಕೂ ಪಾತ್ರರಾಗಿದ್ದಾರೆ. 

Follow Us:
Download App:
  • android
  • ios