ಹಾಸನ(ಆ.25): ಸರ್ಕಾರದ ನಿಯಮಾವಳಿಯಂತೆ ಅತಿವೃಷ್ಟಿಯಿಂದ ಮನೆಗಳಿಗೆ ಆಗಿರುವ ಹಾನಿಯನ್ನು ಮೂರು ರೀತಿಯಲ್ಲಿ ವಿಭಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ನಾನಾ ತಾಲೂಕು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದದಲ್ಲಿ ಮಾತನಾಡಿದರು.

ಮನೆ ಶೇ.10ರಷ್ಟು ಹಾನಿಯಾಗಿದ್ದಲ್ಲಿ 25 ಸಾವಿರ ರು., ಶೇ.75ರಷ್ಟುಹಾನಿಯಾಗಿದ್ದಲ್ಲಿ 1ಲಕ್ಷ ರು., ಶೇ.100ರಷ್ಟುಹಾನಿಯಾಗಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರು. ಪರಿಹಾರ ವಿತರಿಸಲಾಗುತ್ತಿದೆ. ಅತಿವೃಷ್ಠಿಯಿಂದ ಹಾನಿಗೆ ಒಳಗಾದವರು ಸೂಕ್ತ ಪರಿಹಾರ ಪಡೆಯಲು ಸರಿಯಾದ ದಾಖಲೆಗಳನ್ನು ಒದಗಿಸುವುದು ಅಗತ್ಯ ಎಂದರು.

JDSಗೆ ಆರ್ಥಿಕ ಪೆಟ್ಟು, ಬೈ ಎಲೆಕ್ಷನ್‌ಗೆ ಜನರ ಸಹಕಾರ ಕೇಳಿದ ಗೌಡ್ರು

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೆ ತುತ್ತಾಗಿರುವ ಮನೆಗಳ ಬಗ್ಗೆ ವಿವಿಧ ತಾಲೂಕು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ನಿರಾಶ್ರಿತರಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಈಗಾಗಲೇ 10 ಸಾವಿರ ರು. ನೀಡಲಾಗುತ್ತಿದ್ದು, ಪರಿಹಾರವನ್ನು ಯಾವುದೇ ಹಣ ಅಥವಾ ಚೆಕ್‌ಗಳ ಮೂಲಕ ನೀಡಲಾಗುವುದಿಲ್ಲ. ಬದಲಾಗಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ನೀಡಲಾಗುವುದು ಎಂದರು.

ಸುರಕ್ಷಿತ ಸ್ಥಳಗಳಲ್ಲಿ ನಿವೇಶನ ಗುರುತಿಸಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ನಿರಾಶ್ರಿತರು ಪ್ರವಾಹ ಪೀಡಿತ ಸ್ಥಳಗಳಿಂದ ಸುರಕ್ಷಿತ ಸ್ಥಳಗಳ ಮನೆಗಳಿಗೆ ಬರಲು ಸಿದ್ಧರಿರಬೇಕು. ಇಲ್ಲದಿದ್ದಲ್ಲಿ ಪರಿಹಾರಕ್ಕೆ ಅವರು ಅನರ್ಹರಾಗಿರುತ್ತಾರೆ. ಇದರ ಬಗ್ಗೆ ಫಲಾನುಭವಿಗಳಿಗೆ ಮನದಟ್ಟು ಮಾಡುವಂತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪ್ರತಿ ವರ್ಷವೂ ಮಳೆಯಿಂದ ಹಾನಿ: ಮಲೆನಾಡಿಗೆ ವಿಶೇಷ ಪ್ಯಾಕೇಜ್‌!

ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹಾನಿಗೀಡಾಗಿರುವ ಕಚ್ಚಾ ಹಾಗೂ ಪಕ್ಕಾ ಮನೆಗಳನ್ನು ವಿಂಗಡಿಸಿ ಅದರ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ತ್ವರಿತವಾಗಿ ಸಲ್ಲಿಸಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಹಾನಿಯ ಬಗ್ಗೆಯೂ ಸಮೀಕ್ಷೆ ನಡೆಸಿ ಮಾಹಿತಿ ನೀಡಬೇಕು ಎಂದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌ ನಾಗರಾಜ್‌, ತಹಶೀಲ್ದಾರರಾದ ಮೇಘನಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್‌, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್‌, ನಗರಾಭಿವೃದ್ಧಿಕ ಕೋಶದ ಯೋಜನಾ ನಿರ್ದೇಶಕ ಆರ್‌.ಕೃಷ್ಣಮೂರ್ತಿ ಇತರರು ಇದ್ದರು.