ಹಾಸನ(ಆ. 23): ಪ್ರತಿ ಮಳೆಗಾಲದಲ್ಲೂ ನೆರೆಯಿಂದ ತೊಂದರೆಗೆ ಸಿಲುಕುತ್ತಿರುವ ಮಲೆನಾಡು ಭಾಗಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವುದರ ಜೊತೆಗೆ ಶಾಶ್ವತ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸಕಲೇಶಪುರದಲ್ಲಿ ಭರವಸೆ ನೀಡಿದ್ದಾರೆ.

ಗುರುವಾರ ತಾಲೂಕಿನ ಹಾನುಬಾಳು, ಹುರುಡಿ ಮತ್ತಿತರ ಕಡೆ ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ತುರ್ತಾಗಿ ನೆರೆ ಪರಿಹಾರಕ್ಕಾಗಿ 380 ಕೋಟಿ ಬಿಡುಗಡೆ ಮಾಡಿದ್ದು, 750 ಕೋಟಿ ಪಿಡಿ ಖಾತೆಯಲ್ಲಿ ಇದೆ ಎಂದರು.

‘ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ದೊಡ್ಡವರು’

ರಾಜ್ಯದಲ್ಲಿ ಜನರ ಸಂಕಷ್ಟಕ್ಕೆ ಸರ್ಕಾರದ ಸ್ಪಂದನ ಆಶಾದಾಯಕವಾಗಿದೆ. ರೈತರ ಖಾತೆಗೆ ಈಗಾಗಲೇ 10 ಸಾವಿರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ಜಮೆ ಮಾಡಲಾಗುವುದು ಎಂದರು. ನೆರೆ ಹಾವಳಿ ಪ್ರದೇಶದ ಮನೆ ಕಳೆದುಕೊಂಡವರಿಗೆ 50 ಸಾವಿರಗಳನ್ನು ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಭಾಗಶಃ ಹಾನಿ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದು ಅಲ್ಲದೇ, ಸಂಪೂರ್ಣವಾಗಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಜಿಲ್ಲಾಡಳಿತ ಎಲ್ಲ ಬಗೆಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.

5 ಎಕರೆಯೊಳಗಿನ ಪ್ರದೇಶಕ್ಕೆ ಪರಿಹಾರ:

ಕೇಂದ್ರ ಪ್ರಕೃತಿ ವಿಕೋಪ ಪುನರ್ವಸತಿ ನಿಧಿ (ಎನ್‌ಡಿಆರ್‌ಎಫ್‌) ಸುತ್ತೋಲೆಯಲ್ಲಿ ಮಳೆಯಿಂದ ಹಾನಿ ಸಂಭವಿಸಿದ 5 ಏಕರೆ ಮೇಲಿನ ತೋಟಗಾರಿಕೆ ಹಾಗೂ ಕೃಷಿ ಪ್ರದೇಶಕ್ಕೆ ಪರಿಹಾರ ನೀಡುವ ಅವಕಾಶ ಇಲ್ಲ. 5 ಏಕರೆಗೆ ಒಳಗಿನ ಪ್ರದೇಶಕ್ಕೆ ಸರ್ಕಾರದಿಂದ ಪರಿಹಾರ ನೀಡಬಹುದಾಗಿದೆ. ಗುಡ್ಡ ಕುಸಿತದ ಪ್ರದೇಶಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

'ಒಂದೇ ತಾಲೂಕಿಗೆ 850 ಕೋಟಿ, ಇದೇನು ಶಿಕಾರಿಪುರ ಬಜೆಟ್ಟಾ..?'

ಹಲವು ಗ್ರಾಮದಲ್ಲಿ ಹೆಚ್ಚಿನ ಮಳೆಯ ಕಾರಣ ಗುಡ್ಡಕುಸಿತಗೊಂಡು ಮನೆಗಳೆ ಮುಚ್ಚಿಹೊಗಿದೆ. ಇಲ್ಲಿ ಪ್ರತಿ ವರ್ಷ ಈ ಒಂದು ಸಮಸ್ಯೆ ಸಾಮಾನ್ಯವಾಗಿದೆ. ಇದಕ್ಕಾಗಿ ಪ್ರತ್ಯೇಕ ಪ್ಯಾಕೇಜ್‌ನಲ್ಲಿ ಪರಿಹಾರ ಕ್ರಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಮಾಡಲಾಗುವುದು.

ಅತಿವೃಷ್ಟಿಕಾರಣ ಮಳೆನಾಡು ಭಾಗವಾದ ಸಕಲೇಶಪುರದ ಬಹುತೇಕ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ಇಲ್ಲಿ ಮತ್ತೆ ರಸ್ತೆ ಕಾಮಗಾರಿ ಮಾಡಲು ಎರಡು ತಿಂಗಳು ವಿಳಂಬವಾಗಲಿದೆ. ಈ ಮಾರ್ಗದಲ್ಲಿ ತಾತ್ಕಾಲಿಕ ರಸ್ತೆ ಕಾಮಗಾರಿ ಹಾಗೂ ಸೇತುವೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ವಿದ್ಯುತ್‌- ದೂರವಾಣಿ ಸಮರ್ಪಕ ಸೇವೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

ಕಾಫಿ, ಮೆಣಸು, ಏಲಕ್ಕಿಗೂ ವಿಶೇಷ ಪ್ಯಾಕೇಜ್‌:

ಆಸ್ಪತ್ರೆಯಲ್ಲಿ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಸದಾಕಾಲ ಸನ್ನದ್ದರಾಗಿರುವಂತೆಯೂ ಸೂಚಿಸಲಾಗಿದೆ. ಪ್ಲಾಂಟೇಷನ್‌ ಕ್ರಾಪ್‌ ಕಾಫಿ, ಮೆಣಸು, ಏಲಕ್ಕಿ ಬೆಳೆಗೆ ಹೆಚ್ಚು ಹಾನಿಯಾಗಿದೆ. ಇದನ್ನು ಸಹ ಪರಿಗಣಿಸಿ ವಿಶೇಷ ಪ್ಯಾಕೆಜ್‌ ನೀಡಲು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ಮಲೆನಾಡು ಭಾಗಕ್ಕೆ ಪರಿಹಾರ ಹಾಗೂ ಸೂಕ್ತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸದಾ ಉತ್ಸುಕರಾಗಿದ್ದಾರೆ. ರಾಜ್ಯದ ಸದ್ಯದ ನೆರೆ ಪರಿಸ್ಥಿತಿ ಅರಿತಿರುವ ಕೇಂದ್ರ ಸರ್ಕಾರದಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದಿಂದ ಸಮರ್ಪಕ ದಾಖಲೆ ಒದಗಿಸಿದ ನಂತರವಷ್ಟೇ ಕೇಂದ್ರ ಸರ್ಕಾರ ಪರಿಹಾರ ನೀಡಲಿದೆ. ಈಗಾಗಲೇ ಅಗತ್ಯ ಪರಿಹಾರ ಬಂದಿದ್ದು, ಮುಂದಿನ ದಿನದಲ್ಲೂ ಪರಿಹಾರ ನೀಡುವ ಭರವಸೆ ಇದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಅಲ್ಲದೇ, ಬೇರೆ ಪಕ್ಷದವರು ಅವರಿವರ ಮಾತು ಇಲ್ಲಿ ಪ್ರಸ್ತುತವಲ್ಲ ನಮ್ಮ ಕೆಲಸ ನಾವು ಸಮರ್ಪಕವಾಗಿ ನಿಭಾಯಿಸಲಾಗುತ್ತದೆ ಎಂದರು.