Asianet Suvarna News Asianet Suvarna News

ಬಳ್ಳಾರಿ ವಿಮ್ಸ್‌ ದುರಂತ: ಬಡವರಿಗೆ ಬ್ಯಾನಿ ಬರಬಾರದ್ರಿ, ರೋಗಿಗಳ ಸಂಬಂಧಿಕರ ಅಳಲು

‘ಬಡವರಿಗೆ ಬ್ಯಾನಿ ಬರಬಾದ್ರಿ. ದುಡ್ಕೊಂಡು ತಿನ್ನೋ ಮಂದಿ ಬ್ಯಾನಿ ಬಂದ್‌ ಆಸ್ಪತ್ರ್ಯಾಗ ಬಿದ್ಕೊಂಡ್ರೆ ಜೀವನ ಭಾಳ ಕಸ್ಟರೀ...’ ಎಂದು ಅಳಲು ತೋಡಿಕೊಂಡ ಮಹೇಶ್‌ 

Relatives of Patients Express Dissatisfaction about Treatment at VIMS Hospital in Ballari grg
Author
First Published Sep 16, 2022, 12:59 PM IST

ಬಳ್ಳಾರಿ(ಸೆ.16):  ‘ರೊಕ್ಕಿಲ್ಲಾಂತ ಗೌರ್ಮೆಂಟ್‌ ಆಸ್ಪತ್ರೆಗೆ ಬರ್ತೀವ್ರಿ. ಆದ್ರಿಲ್ಲಿ ನಮ್ಮಂಥೋರ್ನ ಯಾರ್‌ ಕೇಳ್ತಾರ್ರೀ. ಬ್ಯಾನಿ ಸುಧಾರ್ಸೋ ತನ್ಕ ಜೀವ ಕೈಯಲ್ಲಿ ಹಿಡ್ಕೊಂಡೇ ಇರಬೇಕ್ರಿ.....’ ಇಲ್ಲಿನ ವಿಮ್ಸ್‌ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ನ ರೋಗಿಯೊಬ್ಬರ ಸಂಬಂಧಿಕ ರಾಜಜಾಪುರ ಮಹೇಶ್‌ ಹೀಗೆ ವಿಮ್ಸ್‌ ವೈದ್ಯಕೀಯ ಸೇವೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯ ಅವ್ಯವಸ್ಥೆ ಕುರಿತು ‘ಕನ್ನಡಪ್ರಭ’ ಜೊತೆ ಹೇಳಿಕೊಂಡ ಮಹೇಶ್‌, ‘ಬಡವರಿಗೆ ಬ್ಯಾನಿ ಬರಬಾದ್ರಿ. ದುಡ್ಕೊಂಡು ತಿನ್ನೋ ಮಂದಿ ಬ್ಯಾನಿ ಬಂದ್‌ ಆಸ್ಪತ್ರ್ಯಾಗ ಬಿದ್ಕೊಂಡ್ರೆ ಜೀವನ ಭಾಳ ಕಸ್ಟರೀ...’ ಎಂದು ಅಳಲು ತೋಡಿಕೊಂಡರು.

ವಿಮ್ಸ್‌ ಆಸ್ಪತ್ರ್ಯಾಗ ಜನ ಸಾಯಕ್ಕತ್ಯಾರಂತ ನಿನ್ನೆಯಿಂದಲೂ ಹೇಳ್ತಿದ್ದಾರೆ. ಇದರಿಂದ ನಮಗೂ ಭಯ ಆಗ್ಯಾದ. ಏನ್‌ ಮಾಡೋದ್ರಿ. ದೇವರ ಮೇಲೆ ಭಾರ ಹಾಕಿ ಕುಂತೀವಿ. ನಮ್‌ ಹುಡುಗ ಮೈ ಸುಟಗೊಂಡು ಆಸ್ಪತ್ರ್ಯಾಗ ಇದಾನ್ರೀ. ಅರಾಮ ಆಗಿ ಮನೀಗಿ ಹೋಗೋವರ್ಗೀ ಸಮಾಧಾನ ಇಲ್ರೀ..ಎಂದರು.

ಬಳ್ಳಾರಿ: ವಿಮ್ಸ್‌ನಲ್ಲಿ ಕರೆಂಟ್‌ ಪ್ರಾಬ್ಲಮ್‌ಗೆ ಎರಡು ಜೀವಗಳು ಬಲಿ, ಈ ಸಾವಿಗೆ ಹೊಣೆ ಯಾರು?

ವಿಮ್ಸ್‌ ಆಸ್ಪತ್ರೆಯಲ್ಲಿ ವಿದ್ಯುತ್‌ ಸ್ಥಗಿತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮತ್ತೊಬ್ಬ ರೋಗಿಯ ಸಂಬಂಧಿಕ ವಿN್ನೕಶ್‌, ‘ನಾನು ಕಳೆದ 15- ದಿನಗಳಿಂದ ಆಸ್ಪತ್ರ್ಯಾಗ ಇದೀನಿ. ಕರೆಂಟ್‌ ಹೋಗೋದು ಇಲ್ಲಿ ಮಾಮೂಲು ಆಗೈತೆ. ಪದೇ ಪದೇ ಕರೆಂಟ್‌ ಹೋಗುತ್ತೆ. ಫ್ಯಾನ್‌ ಆಡಂಗಿಲ್ಲ. ರೋಗಿಗಳ ಪರಿಸ್ಥಿತಿ ಹೇಳಬಾರ್ದು.ರೋಗಿಗಳ ಕಷ್ಟಕಂಡು ಕರಳು ಚುರ್‌ ಅಂತದೆ ಎಂದು ಬೇಸರಗೊಂಡರು.

ವಿಮ್ಸ್‌ನಲ್ಲಿ ದಾಖಲಾಗಿರುವ ಅನೇಕ ರೋಗಿಗಳ ಪೋಷಕರು ಹಾಗೂ ಸಂಬಂಧಿಕರೇ ಹೇಳುವಂತೆ ವಿಮ್ಸ್‌ ಆಸ್ಪತ್ರೆಯ ಅವ್ಯವಸ್ಥೆಯ ತಾಣವಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಸಚಿವರು ಈ ಬಗ್ಗೆ ಗಮನ ಹರಿಸದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣ ಎನ್ನುತ್ತಿದ್ದಾರೆ.

ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸಹ ಸಮರ್ಪಕವಾಗಿಲ್ಲ. ಇಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಕ್ರಮವಾಗುತ್ತಿಲ್ಲ. ಆಸ್ಪತ್ರೆಯ ಸಿಬ್ಬಂದಿ ರೋಗಿಗಳು ಹಾಗೂ ಸಂಬಂಧಿಕರ ಜೊತೆ ಸೌಜನ್ಯದಿಂದ ವರ್ತಿಸುವುದಿಲ್ಲ. ಔಷಧಿ, ಎಕ್ಸರೇಗಳಿಗೆ ಹೊರಗಡೆ ಬರೆದು ಕೊಡುತ್ತಾರೆ. ಏನೂ ಅನ್ನುವಂತಿಲ್ಲ. ನಮಗೂ ಜೀವ ಉಳಿಯಲಿ ಸಾಕು ಎನ್ನುವ ಸ್ಥಿತಿಯಲ್ಲಿರುತ್ತೇವೆ. ಹೀಗಾಗಿ ಅವರು ಬರೆದುಕೊಟ್ಟದ್ದನ್ನು ತಂದು ಕೊಡುತ್ತೇವೆ ಎಂದು ಗೋಳಿಡುವ ಇಲ್ಲಿನ ರೋಗಿಗಳ ಸಂಬಂಧಿಕರು, ಪ್ರತಿಯೊಂದಕ್ಕೂ ಹಣ ನೀಡಬೇಕು ಎಂದಾದರೆ ಬಡವರ ಪರಿಸ್ಥಿತಿ ಏನು? ಎಂದು ಪ್ರಶ್ನಿಸುತ್ತಾರೆ.
 

Follow Us:
Download App:
  • android
  • ios