ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ಸೇರಿದ್ದಕ್ಕೆ ಪಶ್ಚಾತಾಪ

ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಕೆಡವಿ, ಬಿಜೆಪಿ ಸೇರಿದ್ದಕ್ಕೆ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಸೋಮವಾರ ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು. ಅವರ ಬೆಂಬಲಿಗರು ಸಾಥ್‌ ನೀಡಿದರು

Regrets for bringing down the coalition government and joining the BJP snr

ಮೈಸೂರು :  ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಕೆಡವಿ, ಬಿಜೆಪಿ ಸೇರಿದ್ದಕ್ಕೆ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅವರು ಸೋಮವಾರ ಪಶ್ಚಾತ್ತಾಪ ಸತ್ಯಾಗ್ರಹ ನಡೆಸಿದರು. ಅವರ ಬೆಂಬಲಿಗರು ಸಾಥ್‌ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮಾತಿಗೆ ಬೆಲೆಕೊಟ್ಟು ಜೆಡಿಎಸ್‌ ಸೇರಿದೆ. ಆದರೆ ಶಾಸಕನಾಗಿದ್ದ ನನ್ನನ್ನು ಆ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಜೆಡಿಎಸ್‌- ಕಾಂಗ್ರಸ್‌ ಮೈತ್ರಿಯಲ್ಲಿ ರಾಕ್ಷಸ ಸರ್ಕಾರ ನಡೆಯುತ್ತಿದೆ ಎಂಬುದು ಮನವರಿಕೆ ಆಯಿತು. ಅದು ಹೊಂದಾಣಿಕೆ ಇಲ್ಲದ ಮೈತ್ರಿ ಸರ್ಕಾರವಾಗಿತ್ತು. ಈ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ ಎಂಬುದು ಖಾತರಿಯಾದಾಗ ಮತ್ತೊಂದು ಹೆಜ್ಜೆಯನ್ನು ಅನಿವಾರ್ಯವಾಗಿ ಇಡಬೇಕಾಯಿತು ಎಂದರು.

ಸಚಿವ ಸ್ಥಾನಕ್ಕೆ ನಾನು ಎಂದೂ ಆಸೆ ಪಟ್ಟವನಲ್ಲ. ಸಚಿವ ಸ್ಥಾನ ಸಿಗದ ಕಾರಣಕ್ಕೆ ನಾನು ಜೆಡಿಎಸ್‌ ಬಿಟ್ಟೆಎಂಬುದು ಸುಳ್ಳು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳಿತಾಗಬಹುದು ಎಂಬ ಕಾರಣಕ್ಕೆ ಸಮಾನ ಮನಸ್ಕರೊಡನೆ ಸೇರಿ ಚರ್ಚಿಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾಗಿ ಅವರು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆ ನಮ್ಮಲ್ಲಿತ್ತು. ಆದರೆ ಎಲ್ಲವೂ ನುಚ್ಚು ನೂರಾಯಿತು. ಇದೊಂದು ಐತಿಹಾಸಿಕ ಪರಮ ಭಷ್ಟಸರ್ಕಾರ ಎಂಬ ಟೀಕೆಗೆ ಗುರಿಯಾಯಿತು. ಇದರಿಂದ ನನಗೆ ಪಶ್ಚಾತ್ತಾಪ ಕಾಡುತ್ತಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣನಾದ ನನಗೆ ಅತೀವವಾದ ನೋವಿದೆ, ಬೇಸರವಿದೆ ಎಂದು ಅವರು ತಿಳಿಸಿದರು.

‘ಹೇ ವಿಶ್ವನಾಥ್‌, ನೀನೇಕೆ ಇಂತಹ ತಪ್ಪು ಮಾಡಿದೆ’ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ. ಹೀಗಾಗಿ ಈ ಪಾಪದ ಹೊರೆ ಇಳಿಸಿಕೊಳ್ಳಲೇಬೇಕಾದ ಜರೂರು ನನ್ನ ಮುಂದಿದೆ. ಇದೇ ಕಾರಣದಿಂದ ಇಂದು ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಪ್ರಾಯಶ್ಚಿತ್ತ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಡಬಲ್‌ ಇಂಜಿನ್‌ ಸರ್ಕಾರ ಇದ್ದರೆ ರಾಜ್ಯಕ್ಕೆ ಒಳಿತೆಂದು ಬಿಜೆಪಿ ಸರ್ಕಾರ ತಂದೆವು. ಆದರೆ, ಬಿಜೆಪಿ ಸರ್ಕಾರ ಪರಮ ಭ್ರಷ್ಟಸರ್ಕಾರವಾಗಿದೆ. ಇಂತಹ ಸರ್ಕಾರ ಬರಲು ನಾನು ಕಾರಣವಾಗಿದ್ದಕ್ಕೆ ನನಗೆ ಅತೀವ ನೋವಿದೆ. ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಪಾಪದ ಹೊರೆ ಇಳಿಸಿ ಕೊಳ್ಳಲು ಪಶ್ಚಾತ್ತಾಪ ಸತ್ಯಾಗ್ರಹ ಮಾಡುತ್ತಿದ್ದೇನೆ. ನಾನು ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯನಾಗಿಲ್ಲ. ಸಾಹಿತ್ಯ ಕೋಟಾದಲ್ಲಿ ಮೇಲ್ಮನೆ ಸದಸ್ಯನಾಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಬೆಂಬಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

ಸತ್ಯಾಗ್ರಹದಲ್ಲಿ ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌, ರಂಗಕರ್ಮಿ ಸಿ. ಬಸವಲಿಂಗಯ್ಯ, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಂ, ಗೋಪಾಲಕೃಷ್ಣ, ರೇವಣ್ಣ, ನಂದೀಶ್‌ ಅರಸ್‌, ಎನ್‌.ಆರ್‌. ನಾಗೇಶ್‌, ಯೋಗೀಶ್‌ ಉಪ್ಪಾರ, ಡೇರಿ ವೆಂಕಟೇಶ್‌, ಎಸ್‌. ಬಾಲಕೃಷ್ಣ, ನವೀನ್‌ಕುಮಾರ್‌, ರೇವಣ್ಣ, ಎಚ್‌. ಬೀರಪ್ಪ, ಕ.ರಾ. ಗೋಪಾಲಕೃಷ್ಣ, ಕಂಸಾಳೆ ರವಿ, ಶೌಕತ್‌ ಅಲಿ ಖಾನ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios