ಗಂಗಾವತಿ: ಕೋವಿಡ್ ಕೇಂದ್ರದಿಂದ ಮನೆಗೆ ಹೋಗಲು ಸೋಂಕಿತರ ನಿರಾಕರಣೆ
* ಕೋವಿಡ್ ಕೇಂದ್ರ, ಕ್ವಾರಂಟೈನ್ ಒಲ್ಲೆ ಎಂದವರಿಗೆ ಈಗ ಕ್ವಾರಂಟೈನಲ್ಲಿರುವ ಆಸೆ
* ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ
* ಸೋಂಕಿತರ ಹೊಸ ವರಸೆ
ರಾಮಮೂರ್ತಿ ನವಲಿ
ಗಂಗಾವತಿ(ಮೇ.23): ಆಸ್ಪತ್ರೆ, ಕ್ವಾರಂಟೈನ್ ಎಂದರೆ ಭಯಬೀಳುತ್ತಿದ್ದ ಕೊರೋನಾ ಸೋಂಕಿತರು ಈಗ ಗುಣಮುಖರಾದ ನಂತರವೂ ಮನೆಗೆ ವಾಪಸ್ಸಾಗಲು ಹಿಂದೇಟು ಹಾಕುತ್ತಿದ್ದಾರೆ. ಹೌದು! ತಾಲೂಕಿನ ಸಂಗಾಪುರ ಗ್ರಾಮದಲ್ಲಿರುವ ಡಿ. ದೇವರಾಜ ಅರಸು ಬಾಲಕರ ವಸತಿ ನಿಲಯದಲ್ಲಿರುವ ಸೋಂಕಿತರ ಹೊಸ ವರಸೆ ಇದು.
ಕಳೆದ ಒಂದು ವಾರದಿಂದ ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗೆ ಹೋಗದೆ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುವವರನ್ನು ಸರ್ಕಾರದ ಸೂಚನೆ ಮೇರೆಗೆ ತಾಲೂಕು ಆಡಳಿತ, ತಾಪಂ ಮತ್ತು ಆರೋಗ್ಯ ಇಲಾಖೆಯವರು ಗುರುತಿಸಿ ಕ್ವಾರಂಟೈನ್ ಮಾಡಿದೆ. ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಸೋಂಕಿತರನ್ನು ಗುರುತಿಸಿ ರಾತ್ರೋ ರಾತ್ರಿ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ದಾಖಲಿಸಿದೆ. ಗಂಗಾವತಿ ನಗರದ ಜಯನಗರ ಬಾಲಕರ ವಸತಿ ನಿಲಯ, ಹೇಮಗುಡ್ಡದ ಮುರಾರ್ಜಿ ವಸತಿ ಶಾಲೆ ಮತ್ತು ಸಂಗಾಪುರದ ಡಿ. ದೇವರಾಜ ಅರಸು ಬಾಲಕರ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿತ್ತು.
"
ಮನೆಯಲ್ಲಿರುವ ಸೋಂಕಿತರ ಬಗ್ಗೆ ಸರ್ವೇ ಮಾಡಿದ ಅಧಿಕಾರಿಗಳು, ಜಯನಗರದ ವಸತಿ ನಿಲಯ, ಹೇಮಗುಡ್ಡದ ಕ್ವಾರಂಟೈನ್‌ಗಳಲ್ಲಿ 100ಕ್ಕು ಹೆಚ್ಚು ಸೋಕಿತರನ್ನು ದಾಖಲಿಸಿದ್ದರೆ, ಸಂಗಾಪುರದಲ್ಲಿ 40 ಸೋಕಿತರನ್ನು ದಾಖಲಿಸಲಾಗಿತ್ತು. ಈಗ ಇದರಲ್ಲಿ ಕೆಲವರು ಗುಣಮುಖರಾದ ನಂತರ ಮನೆಗೆ ಹೋಗಲು ನಿರಾಕರಿಸುತ್ತಿದ್ದಾರೆ.
ಕೊಪ್ಪಳ: ಕೊರೋನಾ ಸೋಂಕಿತರಿಗಾಗಿ ಚಪಾತಿ ಲಟ್ಟಿಸಿದ ಗವಿಶ್ರೀ
ಕ್ವಾರಂಟೈನಲ್ಲಿರುವ ಆಸೆ:
ಸೋಂಕಿತರಿಗೆ ನಿತ್ಯ ಬೆಳಗ್ಗೆ ಚಹಾ, ಕಾಫಿ, ಇಡ್ಲಿ, ಉಪ್ಪಿಟ್ಟು, ಬಿಸಿಬೇಳೆಬಾತ್ ಉಪಹಾರ ನೀಡಲಾಗುತ್ತದೆ. ಮಧ್ಯಾಹ್ನ ಅನ್ನ, ಸಂಬಾರು, ಚಪಾತಿ, ಪಲಾವು, ರಾತ್ರಿ ಸಹ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಇರುತ್ತದೆ. ಅಲ್ಲದೆ ಬೆಳಗ್ಗೆ ಬಿಸಿನೀರು, ಕಷಾಯ, ಸೋಪು, ಪೇಸ್ವ್ ಸೇರಿದಂತೆ ಸ್ನಾನಕ್ಕೆ ಅನುಕೂಲ ಮಾಡಿಕೊಟ್ಟಿದೆ. ವೈದ್ಯರು ಮತ್ತು ಸಿಬ್ಬಂದಿ ಮೇಲಿಂದ ಮೇಲೆ ಪರೀಕ್ಷೆ ಮಾಡುತ್ತಿದ್ದಾರೆ.
ಸಂಗಾಪುರ ಕೇಂದ್ರದಲ್ಲಿ 40 ಸೋಂಕಿತರು ಇದ್ದು, ಇದರಲ್ಲಿ ಕೆಲವರು ಗುಣಮುಖರಾಗಿದ್ದಾರೆ. ಅವರನ್ನು ಮನೆಗೆ ಹೋಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಅವರು ಮನೆಗೆ ಹೋಗುವದಿಲ್ಲ, ಕೆಲ ದಿನ ಇಲ್ಲಿಯೇ ಇರುತ್ತೇವೆ ಎನ್ನುತ್ತಿದ್ದಾರೆ.
ಸಂಗಾಪುರದಲ್ಲಿರುವ ಕ್ವಾರಂಟೈನ್ ಜಿಲ್ಲೆಗೆ ಮಾದರಿಯಾಗಿದೆ. ಸೊಂಕಿತರ ಬಗ್ಗೆ ಗ್ರಾಪಂ ಸಿಬ್ಬಂದಿ, ತಾಪಂ ಮತ್ತು ಆರೋಗ್ಯ ಇಲಾಖೆಯವರು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಗುಣಮುಖರಾಗುತ್ತಿದ್ದರೂ ಉತ್ತಮ ಪರಿಸರದಲ್ಲಿರುವುದರಿಂದ ಇನ್ನು ಕೆಲ ದಿನ ಇರಬೇಕೆಂಬ ಬಯಕೆ ತಮ್ಮದಾಗಿದೆ ಎಂದು ಗುಣಮುಖರಾದ ವ್ಯಕ್ತಿ ಸಂಗಾಪುರ ಯಶವಂತಯ್ಯಸ್ವಾಮಿ ತಿಳಿಸಿದ್ದಾರೆ.
ಸಂಗಾಪುರದಲ್ಲಿರುವ ಕ್ವಾರಂಟೈನಲ್ಲಿರುವ ಸೋಂಕಿತರಿಗೆ ಊಟ, ಉಪಚಾರ ಸೇರಿದಂತೆ ವಿವಿಧ ರೀತಿಯ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ನಮ್ಮದು. ಕೆಲವರು ಗುಣಮುಖರಾಗಿ ಮನೆಗೆ ಹೋಗಲು ನಿರಾಕರಿಸುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡಿ ವಾಪಾಸ್ಸಾಗುವಂತೆ ಸೂಚಿಸಲಾಗಿದೆ ಎಂದು ಸಂಗಾಪುರ ಕ್ವಾರಂಟೈನ್ ಕೇಂದ್ರದ ಉಸ್ತುವಾರಿ ಶೇಕ್ ಸಾಬ್ ಪಿ.ಎಸ್ ಹೇಳಿದ್ದಾರೆ.