ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಲ್ಲಿ ವಾತಾವರಣದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಇಂಗಾಲಾಮ್ಲ ಸೇರಿದಂತೆ ಮಾಲಿನ್ಯಕಾರಕಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಮೆಟ್ರೋ ರೈಲು ಸೇವೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ರಾಕೇಶ್ ಎನ್.ಎಸ್.
ಬೆಂಗಳೂರು (ಫೆ.28): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಐದು ವರ್ಷಗಳಲ್ಲಿ ವಾತಾವರಣದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಇಂಗಾಲಾಮ್ಲ ಸೇರಿದಂತೆ ಮಾಲಿನ್ಯಕಾರಕಗಳು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಲು ಮೆಟ್ರೋ ರೈಲು (Metro Train) ಸೇವೆ ಪ್ರಮುಖ ಪಾತ್ರ ವಹಿಸಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 2017ರಿಂದ 2021ರ ಅವಧಿಯಲ್ಲಿ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯಕಾರಕಗಳಾದ ಪಿಎಂ10, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ಸ್‌ಗಳು, ಕಾರ್ಬನ್ ಡೈ ಆಕ್ಸೈಡ್ ಮುಂತಾದವುಗಳು ಪ್ರಮಾಣ ಕಡಿಮೆ ಆಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊ.ಎನ್.ನಂದಿನಿ ಮೆಟ್ರೋ ನಿಗಮಕ್ಕೆ ಸಲ್ಲಿಸಿರುವ ‘ಪರಿಸರ ನಿರ್ವಹಣೆಯಲ್ಲಿ ಬಿಎಂಆರ್‌ಸಿಎಲ್ (BMRCL) ಪಾತ್ರ’ ವರದಿಯಲ್ಲಿ ಮೆಟ್ರೋ ಸೇವೆಯಿಂದ ನಗರದ ವಾತಾವರಣ ಮೇಲೆ ಆಗುತ್ತಿರುವ ಧನಾತ್ಮಕ ಪ್ರಭಾವ ಮತ್ತು ಮೆಟ್ರೋದ ಅರಣ್ಯೀಕರಣ ಯೋಜನೆಯಿಂದ ಪರಿಸರ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಶ್ಲೇಷಿಸಲಾಗಿದೆ. ಮೆಟ್ರೋ ಸೇವೆ ವಿಸ್ತಾರಗೊಳ್ಳುತ್ತಿದ್ದಂತೆ ಅಸ್ತಮಾ ಸೇರಿದಂತೆ ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗುವ ಧೂಳಿನ ಅತಿ ಸಣ್ಣ ಕಣಗಳ (ಪಿಎಂ2.5, ಪಿಎಂ10) ಪ್ರಮಾಣ ಕಡಿಮೆ ಆಗಿದೆ.
Bengaluru Namma Metro: ಜನಜೀವನ ಸಹಜ ಸ್ಥಿತಿಗೆ ಬಂದ್ರೂ ನಿತ್ಯ 30 ಲಕ್ಷ ನಷ್ಟ..!
ಅದೇ ರೀತಿ ಮೆಟ್ರೋ ಸೇವೆ ಇರುವ ಭಾಗದಲ್ಲಿ ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಪ್ರಮಾಣ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಮಾನದಂಡದ ಮಿತಿಯೊಳಗೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಾಹನ ಪ್ರಯಾಣದಿಂದ ಹೆಚ್ಚು ಪ್ರಮಾಣದ ಇಂಗಾಲಾಮ್ಲ ವಾತಾವರಣ ಸೇರುತ್ತದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಷ್ಟರಮಟ್ಟಿಗೆ ಇಂಗಾಲಾಮ್ಲ ವಾತಾವರಣ ಸೇರುವುದು ತಪ್ಪಿದೆ. ಒಂದು ವರದಿಯ ಪ್ರಕಾರ ರಸ್ತೆ ಸಾರಿಗೆಯಿಂದ ಭಾರತದ ಮಹಾನಗರಗಳಲ್ಲಿ ಸರಾಸರಿ 205 ಕೇಜಿ ಇಂಗಾಲಾಮ್ಲ ವಾತಾವರಣಕ್ಕೆ ಸೇರುತ್ತಿದ್ದು, ಮೆಟ್ರೋ ಬಳಕೆಯಿಂದ ಇದು 120 ಕೇಕುಸಿದಿದೆ ಎಂದು ಹೇಳಿದೆ.
1685 ಕೋಟಿ ಮೌಲ್ಯದ ಆಮ್ಲಜನಕ ಉತ್ಪಾದನೆ: ಇದೇ ವೇಳೆ ಮೆಟ್ರೋ ಯೋಜನೆಗಾಗಿ 3,246 ಮರಗಳನ್ನು ಕಡಿಯಲಾಗಿದ್ದು, 817 ಮರಗಳನ್ನು ಸ್ಥಳಾಂತರಿಸಲಾಗಿದೆ. ಇದಕ್ಕೆ ಬದಲಿಯಾಗಿ 56,504 ಗಿಡಗಳನ್ನು ನೆಡಲಾಗಿದೆ. ಮೆಟ್ರೋ ನಿಗಮ ನೆಟ್ಟಗಿಡಗಳಲ್ಲಿ ಶೇ.95 ಗಿಡಗಳು ಬದುಕುಳಿಯುತ್ತದೆ. ಈ ಮರಗಳು ವರ್ಷಕ್ಕೆ 66.63 ಲಕ್ಷ ಲೀಟರ್ ಆಮ್ಲಜಕನವನ್ನು ಬಿಡುಗಡೆ ಮಾಡುತ್ತದೆ. 2.75 ಲೀಟರ್ ಸಾಮರ್ಥ್ಯದ ಸಾಗಾಟ ಯೋಗ್ಯವಾದ ಆಮ್ಲಜನಕ ಸಿಲಿಂಡರ್‌ಗೆ 6,500 ರು. ಬೆಲೆಯಿದ್ದು, ಈ ಲೆಕ್ಕಾಚಾರದಲ್ಲಿ 2030ರ ಹೊತ್ತಿಗೆ 1684.80 ಕೋಟಿ ರು. ಮೌಲ್ಯದ ಆಮ್ಲಜನಕ ಉತ್ಪಾದನೆ ಆಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಹಾಗೆಯೇ ಒಂದು ಮರ ವರ್ಷಕ್ಕೆ 22 ಕೇಜಿ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳಲಿದ್ದು, 2030ರ ಹೊತ್ತಿಗೆ 1,243 ಟನ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಮೆಟ್ರೋ ನೆಟ್ಟಗಿಡಗಳು ಹೀರಲಿವೆ.
Covid Effect: ಕೊರೋನಾ ಹೊಡೆತಕ್ಕೆ ನಲುಗಿದ ಮೆಟ್ರೋ: 905 ಕೋಟಿ ನಷ್ಟ!
ಬೆಂಗಳೂರು ನಗರಕ್ಕೆ ನಮ್ಮ ಮೆಟ್ರೋ ಅತ್ಯುತ್ತಮ ಪರಿಸರ ಸ್ನೇಹಿ ಸೇರ್ಪಡೆ. ಇದು ಪರಿಸರಕ್ಕೆ ಇಂಗಾಲಾಮ್ಲದ ಸೇರ್ಪಡೆಯನ್ನು ಕಡಿಮೆ ಮಾಡುತ್ತದೆ. ದೊಡ್ಡ ನಗರ ಮತ್ತು ಅಲ್ಲಿನ ಜನರ ಅಭಿವೃದ್ಧಿಗೆ ಮೆಟ್ರೋ ಸೌಕರ್ಯ ದೊಡ್ಡ ಕೊಡುಗೆ ನೀಡುತ್ತದೆ. ಮೆಟ್ರೋ ಯೋಜನೆಗಳಿಗೆ ಹಲವು ಸವಾಲುಗಳಿದ್ದರೂ ಯೋಜನಾ ಬದ್ಧ ಜಾರಿ ಅತಿ ಮುಖ್ಯ. ಬೆಂಗಳೂರು ಮೆಟ್ರೋದ ಕಾಮಗಾರಿ ಪೂರ್ಣಗೊಂಡರೆ ಪರಿಸರ ಮಾಲಿನ್ಯ, ವಾಹನ ದಟ್ಟಣೆ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರಗೊಳ್ಳಲಿದೆ.
-ಎನ್.ನಂದಿನಿ, ಪ್ರಾಧ್ಯಾಪಕರು, ಬೆಂಗಳೂರು ವಿವಿ ಪರಿಸರ ವಿಜ್ಞಾನ ವಿಭಾಗ.
