ಹಾವೇರಿ [ಜ.10]:  ಬ್ಯಾಡಗಿ ಮೆಣಸಿನಕಾಯಿ ದರ ಏರುತ್ತಲೇ ಇದ್ದು, ಗುರುವಾರ ಜಿಲ್ಲೆಯ ಬ್ಯಾಡಗಿ ಎಪಿಎಂಸಿಯಲ್ಲಿ ಗದಗ ಜಿಲ್ಲೆಯ ರೈತರೊಬ್ಬರು ತಂದಿದ್ದ ಮೆಣಸಿನಕಾಯಿ ದಾಖಲೆಯ 33,259 ರು. ದರಕ್ಕೆ ಖರೀದಿಯಾಗಿದೆ.

ಪ್ರವಾಹದಿಂದ ಪ್ರಸಕ್ತ ಸಾಲಿನಲ್ಲಿ ಒಣಮೆಣಸಿನಕಾಯಿ ಇಳುವರಿ ಕಡಿಮೆಯಾಗಿದೆ. ಅಲ್ಲದೇ ಗುಣಮಟ್ಟದ ಮೆಣಸಿನಕಾಯಿ ಆವಕವೂ ಕಡಿಮೆಯಾಗಿದೆ. ಇದರಿಂದ ವಾರದಿಂದ ವಾರಕ್ಕೆ ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ಧಾರಣೆ ಏರುಗತಿಯಲ್ಲಿ ಸಾಗಿದೆ. ಕಳೆದ ವಾರ 26 ಸಾವಿರ ರು.ಗೆ ಕ್ವಿಂಟಲ್‌ ಮೆಣಸಿನಕಾಯಿ ಖರೀದಿಯಾಗಿದ್ದು ದಾಖಲೆಯಾಗಿತ್ತು. ಗುರುವಾರ 30 ಸಾವಿರ ರು. ಗಡಿ ದಾಟುವ ಮೂಲಕ ಬ್ಯಾಡಗಿ ಡಬ್ಬಿ ತಳಿ ಮೆಣಸಿನಕಾಯಿ ಹೊಸ ದಾಖಲೆ ಸೃಷ್ಟಿಸಿತು.

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ರೈತ ಸಂಗರಡ್ಡೆಪ್ಪ ಭೂಸರೆಡ್ಡಿ ಎಂಬವರು ಗುರುವಾರ ತಂದಿದ್ದ ಡಬ್ಬಿ ತಳಿ ಮೆಣಸಿನಕಾಯಿ ದಾಖಲೆ ದರಕ್ಕೆ ಖರೀದಿಯಾಗಿದೆ. ಎಂ.ಕೆ.ಟ್ರೇಡರ್ಸ್‌ನವರು ಇ-ಟೆಂಡರ್‌ನಲ್ಲಿ 33,259 ರು. ದರ ನಮೂದಿಸಿ ಖರೀದಿ ಮಾಡಿದ್ದಾರೆ.

7 ಕ್ವಿಂಟಲ್‌ ತಂದು 2 ಲಕ್ಷ ರು. ಒಯ್ದ ರೈತ

ಗದಗ ಜಿಲ್ಲೆಯ ರೈತ ಸಂಗರಡ್ಡೆಪ್ಪ ಅವರು ಗುರುವಾರ ಬ್ಯಾಡಗಿ ಮಾರುಕಟ್ಟೆಗೆ 17 ಚೀಲ ಡಬ್ಬಿ ಮೆಣಸಿನಕಾಯಿ ತಂದು ದಲ್ಲಾಳಿ ಅಂಗಡಿಯಲ್ಲಿ ಮಾರಾಟಕ್ಕೆ ಹಾಕಿದ್ದರು. ಇ ಟೆಂಡರ್‌ನಲ್ಲಿ ತಾವು ತಂದಿದ್ದ ಮೆಣಸಿನಕಾಯಿಗೆ ದರ ನಮೂದಾಗಿದ್ದನ್ನು ನೋಡಿ ಅವರೇ ನಂಬದಾಗಿದ್ದರು. 17 ಚೀಲ ಗುಣಮಟ್ಟದ ಮೆಣಸಿನಕಾಯಿಯನ್ನು 33,259 ರು. ದರಕ್ಕೆ ಖರೀದಿಸಿದರು. ಅಂದರೆ 7 ಕ್ವಿಂಟಲ್‌ ಮೆಣಸಿನಕಾಯಿಗೆ ರೈತನಿಗೆ 2.30 ಲಕ್ಷ ರು. ಪಾವತಿಯಾಗಿದೆ.

ದರದಲ್ಲಿ ಏರಿಕೆ

ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದೇಶದಲ್ಲೇ ನಂಬರ್‌ 1 ಸ್ಥಾನದಲ್ಲಿ ನುಗ್ಗುತ್ತಿರುವ ಬ್ಯಾಡಗಿ ಎಪಿಎಂಸಿಯಲ್ಲಿ ಡಬ್ಬಿ, ಕಡ್ಡಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ ಮಾರಾಟವಾಗುತ್ತದೆ. ಕಳೆದ ಒಂದು ತಿಂಗಳಿಂದ ಪ್ರಸಕ್ತ ಸಾಲಿನ ಸೀಸನ್‌ ಆರಂಭವಾಗಿದ್ದರೂ ಆವಕ ಕಡಿಮೆಯಾಗಿತ್ತು. ಈ ವಾರದಿಂದ ಆವಕದಲ್ಲೂ ಏರುಗತಿಯಿದ್ದು, ದರದಲ್ಲೂ ತೇಜಿಯಿದೆ. ಇದರಿಂದ ನೆರೆಯ ಆಂಧ್ರ, ಮಹಾರಾಷ್ಟ್ರಗಳಿಂದಲೂ ಬ್ಯಾಡಗಿ ಎಪಿಎಂಸಿಗೆ ರೈತರು ಮೆಣಸಿನಕಾಯಿ ತರುತ್ತಿದ್ದಾರೆ.

ಕೆಂಪು ಮೆಣಸಿನಕಾಯಿ ತಿನ್ನುವವರು ನೋಡ್ಲೇಬೇಕಾದ ಸ್ಟೋರಿಯಿದು!...

ಗುರುವಾರ 50,242 ಕ್ವಿಂಟಲ್‌ ಚೀಲ ಆವಕವಾಗಿದೆ. ಡಬ್ಬಿ ತಳಿ 3089ರಿಂದ 33259 ರು., ಕಡ್ಡಿ ತಳಿ 1899ರಿಂದ 18609, ಗುಂಟೂರು ತಳಿ 560ರಿಂದ 9009ರು. ದರಕ್ಕೆ ಖರೀದಿಯಾಗಿದೆ.

ದರ ಕುಸಿತಕ್ಕೆ ತತ್ತರಿಸಿದ್ದ ಮಾರುಕಟ್ಟೆ

ಇಲ್ಲಿಯವರೆಗೂ ದರ ಕುಸಿತಕ್ಕೆ ಸಂಘರ್ಷಗಳನ್ನು ಎದುರಿಸಿದ್ದ ಬ್ಯಾಡಗಿ ಮಾರುಕಟ್ಟೆಇದೀಗ ರೈತರ ಮೊಗದಲ್ಲಿ ಹರ್ಷವನ್ನು ಮೂಡಿಸಿದೆ, ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಗುಣಮಟ್ಟದ ಮೆಣಸಿನಕಾಯಿ ಕೊರತೆ ಕಾಣುತ್ತಿದ್ದು, ಹೀಗಾಗಿ ಉತ್ತಮ ಬೆಲೆ ದೊರೆತಿದೆ.

ಜಿ.ಎಸ್‌.ನ್ಯಾಮಗೌಡ ಎಪಿಎಂಸಿ ಕಾರ್ಯದರ್ಶಿ

ಶ್ರಮಕ್ಕೆ ದೊರೆತ ಫಲ

ಸಾವಯವ ಗೊಬ್ಬರವನ್ನೇ ಹೆಚ್ಚಾಗಿ ಬಳಸಿ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿಯನ್ನು ಪಡೆದಿದ್ದೆ, ಉತ್ತಮ ದರ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇಷ್ಟೊಂದು ದರ ಸಿಕ್ಕಿದ್ದು ನಂಬಲಾಗುತ್ತಿಲ್ಲ, ನನ್ನ ಶ್ರಮಕ್ಕೆ ಪ್ರತಿಫಲ ದೊರೆತಿದೆ.

ಸಂಗರಡ್ಡೆಪ್ಪ ಭೂಸರೆಡ್ಡಿ ರೈತ

ಎಲ್ಲ ಮೆಣಸಿಗೂ ಅನ್ವಯವಾಗುವುದಿಲ್ಲ

ಮೆಣಸಿನಕಾಯಿ ನೀರು ಸಿಂಪಡಿಸದೆ ಗುಣಮಟ್ಟದ ಮೆಣಸಿನಕಾಯಿ ತಂದಿದ್ದ ಕಾರಣ ರೈತನಿಗೆ ಉತ್ತಮ ದರ ದೊರೆತಿದೆ, ಸದರಿ ದರ ಎಲ್ಲ ಮೆಣಸಿನಕಾಯಿಗೂ ಅನ್ವಯಿಸುವುದಿಲ್ಲ. ಗುಣಮಟ್ಟದ ಆಧಾರದ ಮೇಲೆ ದರ ನಿರ್ಧರಿಸುವಲ್ಲಿ ಬ್ಯಾಡಗಿ ವರ್ತಕರು ವಿಶ್ವದಲ್ಲೇ ಪ್ರಸಿದ್ಧಿ, ಹೀಗಾಗಿ ಗುಣಮಟ್ಟಕ್ಕೆ ತಕ್ಕಂತೆ ದರಗಳು ಮುಂದೆಯೂ ನಿರೀಕ್ಷಿಸಲಾಗುವುದು.

ಒಂದೇ ದಿನ ಬಂತು 10 ಸಾವಿರ ಕ್ವಿಂಟಾಲ್‌ ಒಣಮೆಣಸು : ಪರದಾಡಿದ್ರು ರೈತರು...

ಎಂ.ಸಿ. ಮೆಲ್ಮುರಿ ವ್ಯಾಪಾರಸ್ಥ

ಪ್ರತಿ ಕ್ವಿಂಟಲ್‌ಗೆ 33,259 ರು.ಗಳಿಗೆ ಮೆಣಸಿನಕಾಯಿ ಮಾರಾಟವಾಗುವ ಮೂಲಕ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ ರೈತನಿಗೆ ಸ್ಥಳೀಯ ಎಪಿಎಂಸಿ ಸಿಬ್ಬಂದಿಗಳು ಶುಭಾಶಯ ಕೋರಿದರು.