ಮಂಗಳೂರು(ಜು.24): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆ ವಾತಾವರಣ ಮುಂದುವರಿದಿದ್ದು, ಮಂಗಳವಾರ ಬೆಳಗ್ಗಿನಿಂದ ರಾತ್ರಿವರೆಗೆ ಆಗಾಗ ಬಿಟ್ಟೂ ಬಿಟ್ಟೂ ನಿರಂತರ ಮಳೆಯಾಗಿದೆ.

ಕಳೆದ 2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಎಲ್ಲ ಅಂಗನವಾಡಿ, ಶಾಲೆಗಳು, ಪಿಯುಸಿವರೆಗಿನ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು.

ಸಮುದ್ರ ತೀರದಲ್ಲಿ ಕಟ್ಟೆಚ್ಚರ:

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.25ರವರೆಗೆ 200 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.27ರವರೆಗೂ ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ಇರುವುದರಿಂದ ನದಿ, ಸಮುದ್ರ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಂದಿನ ಸೂಚನೆ ನೀಡುವವರೆಗೂ ಪ್ರವಾಸಿಗರು ಹಾಗೂ ಮೀನುಗಾರರು ಕಡಲಿಗೆ ಇಳಿಯದಂತೆ ನಿರ್ಬಂಧ ವಿಧಿಸಲಾಗಿದೆ.

ಮನೆಗಳಿಗೆ ಹಾನಿ:

ನಿರಂತರ ಮಳೆಯಿಂದ ಜಿಲ್ಲೆಯ ಹಲವು ಮನೆಗಳು ಹಾನಿಗೀಡಾಗಿವೆ. ಮೂಡುಬಿದಿರೆಯ ಕಲ್ಲಮುಂಡ್ಕೂರು ಗ್ರಾಮದ ಶಿವರಾಮ ಪೂಜಾರಿ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ವಿಟ್ಲ ಕಸಬಾ ಗ್ರಾಮದ ಪಾರ್ವತಿ ಎಂಬವರ ಮನೆ ಛಾವಣಿ ಕುಸಿದು 40 ಸಾವಿರ ರು. ಹಾನಿ ಸಂಭವಿಸಿದೆ. ಅನಂತಾಡಿ ಗ್ರಾಮದ ಕೇಶವ ಪೂಜಾರಿ ಎಂಬವರಿಗೆ ಸೇರಿದ ಕೊಟ್ಟಿಗೆ 20 ಸಾವಿರ ರು.ಗಳಷ್ಟು ಹಾನಿಯಾಗಿದೆ. ಮಂಗಳೂರಿನ ಕಾನ ಎಂಬಲ್ಲಿ ವಿಶ್ವನಾಥ ಪೂಜಾರಿ ಎಂಬವರ ಮನೆಗೆ ಭಾಗಶಃ ಹಾನಿ, ಬೊಳಿಯಾರಿನ ಹಾಜಿರಾ ಎಂಬವರ ಪಕ್ಕಾ ಮನೆ ಸಂಪೂರ್ಣ ಹಾನಿಗೀಡಾಗಿದ್ದು, 1 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಕಸಬಾ ಬಜಾರ್‌ನಲ್ಲಿ ಒಂದು ಹಾಗೂ ಇಡ್ಯಾ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿ ತಲಾ 1 ಲಕ್ಷ ರು. ನಷ್ಟ ಉಂಟಾಗಿದೆ. ಇರ್ದೆ ನಿವಾಸಿ ಅಬೂಬಕ್ಕರ್ ಎಂಬವರ ಮನೆ ಬಹುತೇಕ ಹಾನಿಯಾಗಿ ೮೦ ಸಾವಿರ ರು.ಗಳಷ್ಟು ನಷ್ಟವಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಕ್ಕಿದ ಮ್ಯಾನ್‌ಹೋಲ್‌ಗಳು:

ಮಳೆಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗಳು ಉಕ್ಕಿ ನಾಗರಿಕರು, ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿದೆ. ಯೆಯ್ಯಾಡಿಯ ಕುಂಟಲ್ಪಾಡಿ, ಬಿಜೈನಲ್ಲಿ ಪ್ರದೇಶದಲ್ಲಿ ಸೊಳ್ಳೆ ಹಾವಳಿ ತೀವ್ರ ಇರುವುದಾಗಿ ನಾಗರಿಕರು ದೂರಿದ್ದಾರೆ.

ನಾಟಿ ಬಿರುಸು:

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅನೇಕ ಕಡೆಗಳಲ್ಲಿ ಒಂದು, ಒಂದೂವರೆ ತಿಂಗಳು ವಿಳಂಬವಾಗಿದ್ದ ಭತ್ತ ನಾಟಿ ಕಾರ್ಯ ಬಿರುಸು ಪಡೆದಿದ್ದು, ಕೃಷಿಕರು ಹರ್ಷಚಿತ್ತರಾಗಿದ್ದಾರೆ. ಎಲ್ಲ ನದಿ, ತೊರೆಗಳು ತುಂಬಿ ಹರಿಯುತ್ತಿದ್ದರೂ ಅಪಾಯದ ಮಟ್ಟವನ್ನು ತಲುಪಿಲ್ಲ.

ಹಾಸನ ಭೂಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆರಡು ದಿನ ಮುಂದಕ್ಕೆ

ಮಳೆ ವಿವರ: ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 85.6 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ ಅತಿ ಹೆಚ್ಚು 114.2 ಮಿ.ಮೀ., ಬೆಳ್ತಂಗಡಿಯಲ್ಲಿ 68.1 ಮಿ.ಮೀ., ಮಂಗಳೂರಿನಲ್ಲಿ 106.7 ಮಿ.ಮೀ., ಪುತ್ತೂರಿನಲ್ಲಿ 70.4 ಮಿ.ಮೀ., ಸುಳ್ಯ ತಾಲೂಕಿನಲ್ಲಿ 68.8 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 31.8 ಮಿ.ಮೀ. ಮಳೆಯಾಗಿತ್ತು.