ಬೆಂಗಳೂರು [ಡಿ.31]: ಸದ್ಯ ನಾವೆಲ್ಲಾ ಹೊಸ ವರ್ಷದ ಹೊಸ್ತಿಲಿನಲ್ಲಿ ಇದ್ದೇವೆ. ಇನ್ನೇನು 2020ಕ್ಕೆ ಕಾಲಿಡಲು ಸಜ್ಜಾಗಿದ್ದು, ಒಮ್ಮೆ ಹಿಂದಿರುಗಿ ನೋಡಿದಾಗ ಕೆಲ ಘಟನೆಗಳು ಪ್ರಮುಖವಾಗಿ ಕಾಣಿಸುತ್ತಿವೆ. ರಾಜ್ಯದಲ್ಲಿ ನಡೆದ ಪ್ರಮುಖ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸೋಣ.

ರಾಮನಗರ : ಜನವರಿ ತಿಂಗಳಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ರಾದ್ಧಾಂತ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಶಾಸಕರಿಬ್ಬರ ಮಧ್ಯೆ ಮದ್ಯದ ಅಮಲಿನಲ್ಲಿ ಮಾರಾಮಾರಿ ನಡೆಯಿತು. ಈ ಘಟನೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ ಶಾಸಕ ಆನಂದಸಿಂಗ್ ಮೇಲೆ ತೀವ್ರ ಹಲ್ಲೆ ಮಾಡಿದ ಆರೋಪ ಕೇಳಿಬಂತು. ಆನಂದ ಸಿಂಗ್ ಆಸ್ಪತ್ರೆಗೆ ದಾಖಲಾದರು. ಬಳಿಕ ಅವರು ಕಾಂಗ್ರೆಸ್ ತೊರೆದು ಬಿಜೆಪಿಯತ್ತ ತೆರಳಿ ಶಾಸಕರಾದರು.

ತುಮಕೂರು : ಕಾಯಕ ಯೋಗಿ, ತ್ರಿವಿಧ ದಾಸೋಹಿ, ಶತಮಾನದ ಸಂತ, ಆಧುನಿಕ ಬಸವಣ್ಣ ಎಂದೇ ನಾಮಾಂಕಿತರಾಗಿದ್ದ ತುಮಕೂರಿನ ಸಿದ್ಧಗಂಗಾ ಮಠದ ಪೀಠಾಧೀಶ ಶಿವಕುಮಾರ ಮಹಾಸ್ವಾಮೀಜಿ (111) ಜನವರಿ 21 ರಂದು ಶಿವೈಕ್ಯರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶ್ವಾಸಕೋಶದ ತೊಂದರೆಯಿಂದಾಗಿ ನಿಧನರಾದರು. ಕೋಟ್ಯಂತರ ಜನರು ಕಂಬನಿ ಮಿಡಿದರು. ಮರುದಿನ ಹಳೇ ಮಠದ ಗದ್ದುಗೆಯಲ್ಲಿ ಕ್ರಿಯಾ ಸಮಾಧಿ ಮಾಡಲಾಯಿತು.ಬೆಂಗಳೂರು :  ಬೆಂಗಳೂರು ಏರ್‌ಶೋ ವೇಳೆ 2 ಅವಘಡ ನಡೆಯಿತು. 277 ಕಾರು ಭಸ್ಮವಾಗಿ  ಐತಿಹಾಸಿಕ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ಮುನ್ನಾದಿನ ಭಾರಿ ದುರಂತವೊಂದು ಸಂಭವಿಸಿತು. ದೇಶದ ಪ್ರತಿಷ್ಠಿತ ‘ಸೂರ್ಯಕಿರಣ’ ವೈಮಾನಿಕ ಪ್ರದರ್ಶನ ತಂಡದ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ನೆಲಕ್ಕುರುಳಿದವು. ಘಟನೆಯಲ್ಲಿ ಒಬ್ಬ ಪೈಲಟ್ ಮೃತಪಟ್ಟರು.  ಬೆಂಗಳೂರು : ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ನಿಧನರಾದರು. ಮೊದಲ ಮಹಿಳಾ ಜಗದ್ಗುರು, ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ, ಮಾತೆ ಮಹಾದೇವಿ (74) ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಧಾರವಾಡ : ಧಾರವಾಡದಲ್ಲಿ ಕಟ್ಟಡ ದುರಂತ ಸಂಭವಿಸಿ 19 ಮಂದಿ ಬಲಿಯಾದರು. ಧಾರವಾಡ ನಗರದಲ್ಲಿ ನಿರ್ಮಾಣದ ಹಂತದ 4 ಅಂತಸ್ತಿನ ಕಟ್ಟಡ ಕುಸಿದಿತ್ತು.

ಧಾರವಾಡ :  ಕುಂದಗೋಳದ ಶಾಸಕರಾಗಿದ್ದ ಸಿ.ಎಸ್. ಶಿವಳ್ಳಿ ಹಠಾತ್ ನಿಧನರಾದರು.  ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ (57) ಅವರು ಎದೆನೋವಿನಿಂದ ನಿಧನರಾದರು.

ಬೆಂಗಳೂರು : ಸಮಾಜದ ಅಂಕು-ಡೊಂಕಿನ ವಿಡಂಬನೆಗಳಿಗೆ ಹೆಸರುವಾಸಿಯಾಗಿದ್ದ ರಂಗಕರ್ಮಿ ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯ (84) ವಿಧಿವಶರಾದರು.

ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!..

ಬೆಂಗಳೂರು : ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ, ರಂಗಕರ್ಮಿ, ಬಹುಭಾಷಾ ನಟ ಗಿರೀಶ್ ಕಾರ್ನಾಡ್ (81) ವಿಧಿವಶರಾದರು. ಅವರ ಇಚ್ಛೆಯಂತೆ ಧಾರ್ಮಿಕ ವಿಧಿ-ವಿಧಾನರಹಿತ ವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

14 ಜಿಲ್ಲೆಗಳಲ್ಲಿ ಭಾರೀ ಪ್ರವಾಹ : ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ನಿಧಾನವಾಗಿ ಮುಂಗಾರು ಬಿರುಸು ಪಡೆಯಿತು. ಉತ್ತರ ಕರ್ನಾಟಕದಲ್ಲಿ ನದಿಗಳು ಉಕ್ಕಿ ಹರಿದವು. ಜಲಾಶಯಗಳಿಗೆ ಭಾರಿ ನೀರು ಹರಿದುಬರಲಾರಂಭಿಸಿತು. ಈ ವರ್ಷ ಎಲ್ಲ ಜಲಾಶಯಗಳೂ ಭರ್ತಿಯಾದವು. ಪ್ರವಾಹದಿಂದ ಭಾರಿ ನಷ್ಟವಾಯಿತು. ಲಕ್ಷಾಂತರ ಮಂದಿ ನಿರಾಶ್ರಿತರಾದರು. 50 ಕ್ಕೂ ಹೆಚ್ಚು ಮಂದಿ ಬಲಿಯಾದರು.


ಬೆಂಗಳೂರು :  ಅತ್ಯಂತ ಹಿಂದುಳಿದ ಹೈದ್ರಾಬಾದ್ ಕರ್ನಾಟಕ (ಈಗ ಕಲ್ಯಾಣ ಕರ್ನಾಟಕ)ಕ್ಕೆ ಸಂವಿಧಾನದ 371(ಜೆ) ವಿಧಿ ಅನ್ವಯ ಮಾಡುವ ಸಲುವಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಿಟ್ಟ ಹೋರಾಟಗಾರ, ಮಾಜಿ ಸಚಿವ ವೈಜನಾಥ ಪಾಟೀಲ್(82) ಬೆಂಗಳೂರಿನಲ್ಲಿ ನವೆಂಬರ್ 2ಕ್ಕೆ ನಿಧನರಾದರು.

ಕಲಬುರಗಿ : ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಎಚ್ಚೆಸ್ವಿ : ಕಲಬುರಗಿಯಲ್ಲಿ ಫೆ. 5ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಲೋಕದ ಮೇರು ಕವಿಗಳಲ್ಲಿ ಒಬ್ಬರಾದ ಡಾ| ಎಚ್.ಎಸ್. ವೆಂಕಟೇಶ ಮೂರ್ತಿ ಆಯ್ಕೆಯಾದರು.

2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು...
ಮಂಗಳೂರು : ಪೌರತ್ವ (ತಿದ್ದುಪಡಿ) ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಯಿತು. ಇದರ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ಭುಗಿಲೆದ್ದಿತು. ಅದು ದೇಶಾದ್ಯಂತ  ಹಬ್ಬಿತು. ಡಿ. 19 ರಂದು ಮಂಗಳೂರಿನಲ್ಲಿ ಗೋಲಿಬಾರ್‌ಗೆ ಇಬ್ಬರು
ಬಲಿಯಾದರು.

ಉಡುಪಿ : ಪೇಜಾವರ ಶ್ರೀ ವಿಶ್ವೇಶ ತೀರ್ಥ ಕೃಷ್ಣೈಕ್ಯ : ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀಪಾದಂಗಳವರು (88) ನಿಧನರಾದರು. ಬೆಂಗಳೂರಿನ ವಿದ್ಯಾಪೀಠದಲ್ಲಿ ಅಂತ್ಯಕ್ರಿಯೆ ನಡೆಯಿತು.