ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಕುರಿತ ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಡಿಎನ್ಎ ಪ್ರಶ್ನಿಸಿದೆ. ಸಾಕ್ಷಿಗಳ ಹೇಳಿಕೆಗಳನ್ನು ನೀಡದೆ ವರದಿ ಸಲ್ಲಿಸಿರುವುದನ್ನು ಡಿಎನ್ಎ ಆಕ್ಷೇಪಿಸಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.

ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ, ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ವರದಿಯನ್ನು ಪ್ರಶ್ನಿಸಿ ಡಿಎನ್ಎ ನೆಟ್ವರ್ಕ್ ಅರ್ಜಿ ಸಲ್ಲಿಸಿದೆ.

ಡಿಎನ್ಎ ಪರ ಹಿರಿಯ ವಕೀಲ ಸಂಪತ್ ಕುಮಾರ್ ಅವರು, “ನಾವು ಸಾಕ್ಷಿಗಳ ಹೇಳಿಕೆಯ ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದೆವು. ಆದರೆ ದಾಖಲೆಗಳನ್ನು ನೀಡದೇ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ನಮಗೆ ಸ್ಪಷ್ಟನೆ ನೀಡುವ ಅವಕಾಶ ನೀಡದೇ, ನಮ್ಮ ವಿರುದ್ಧ ವರದಿ ಸಲ್ಲಿಸಲಾಗಿದ್ದು, ಇದರಿಂದ ಅರ್ಜಿದಾರರ ಗೌರವ ಹಾನಿಯಾಗುತ್ತಿದೆ” ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, “ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಆದರೆ ಈ ಹಂತದಲ್ಲಿ ವರದಿಯನ್ನು ಅರ್ಜಿದಾರರಿಗೆ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದರು. ಈ ಕುರಿತು ಹೈಕೋರ್ಟ್, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಘಟನೆ ಹಿನ್ನೆಲೆ

ಜೂನ್‌ 4ರಂದು ನಡೆದಿದ್ದ ಕಾಲ್ತುಳಿತ ಪ್ರಕರಣದ ತನಿಖೆಗೆ, ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್ ತನಿಖಾ ತಂಡ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿತ್ತು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕುನ್ಹಾ ಆಯೋಗದ ವರದಿಯನ್ನು ಆಧರಿಸಿ, ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸೇರಿ ನಾಲ್ಕು ಖಾಸಗಿ ಕಂಪನಿಗಳು, ಅವುಗಳ ವಿವಿಧ ಪದಾಧಿಕಾರಿಗಳು ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಜೊತೆಗೆ, ಅಮಾನತು ಮಾಡಲಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಲಾಯಿತು.

ಐಪಿಎಲ್ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಹೊಣೆಗಾರಿಕೆ ನಿಗದಿ ಮಾಡಿ, ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸೇರಿ ಐವರು ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು.

ಈ ಮಧ್ಯೆ, ಹೆಚ್ಚುವರಿ ಪೊಲೀಸ್‌ ಕಮಿಷನರ್‌ ವಿಕಾಸ್ ಕುಮಾರ್ ವಿಕಾಸ್ ಮಾತ್ರ ಸಿಎಟಿ(ಕೇಂದ್ರಿಯ ಆಡಳಿತಾತ್ಮಕ ನ್ಯಾಯಾಧೀಕರಣ) ಮೊರೆ ಹೋಗಿದ್ದರು. ಈಗ ಇವರ ಅಮಾನತು ಆದೇಶ ಹಿಂಪಡೆದ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಿಲ್ಲ. ಸಿಎಟಿ ಅವರ ಅಮಾನತು ಆದೇಶ ರದ್ದುಗೊಳಿಸಲು ಆದೇಶಿಸಿತ್ತು. ಆದರೆ ಸರ್ಕಾರ ಸಿಎಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇದೀಗ ಸದ್ಯ ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸೇರಿ ಕೇಂದ್ರೀಯ ವಿಭಾಗದ ಡಿಸಿಪಿ ಟಿ.ಟಿ.ಶೇಖರ್‌, ಕಬ್ಬನ್‌ ಪಾರ್ಕ್‌ ಎಸಿಪಿ ಬಾಲಕೃಷ್ಣ ಮತ್ತು ಇನ್ಸ್‌ಪೆಕ್ಟರ್‌ ಎ.ಕೆ.ಗಿರೀಶ್‌ ಅಮಾನತು ಆದೇಶವನ್ನು ರಾಜ್ಯಸರ್ಕಾರ ಹಿಂಪಡೆದಿದೆ.