ಮಂಗಳೂರು(ಜ.22):  100 ಮುಖಬೆಲೆಯ ಸ್ವಚ್ಛವಾದ ಹೊಸ ಸೀರಿಸ್‌ನ ನೋಟುಗಳು ಜನತೆಯಲ್ಲಿ ಚಲಾವಣೆಯಲ್ಲಿ ಇರುವಂತೆ ಮಾಡುವ ಉದ್ದೇಶ ಹೊಂದಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಹಳೆಯ ಸೀರಿಸ್‌ನ ಎಲ್ಲ ನೋಟುಗಳನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ(ಆರ್‌ಬಿಐ)ನ ಸಹಾಯಕ ಮಹಾಪ್ರಬಂಧಕ(ಎಜಿಎಂ) ಬಿ.ಎಂ.ಮಹೇಶ್‌ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕಿಂಗ್‌ ಭದ್ರತಾ ಸಮಿತಿ ಮತ್ತು ನಗದು ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು. ಹಳೆಯ ನೋಟುಗಳಂತೆ ಕಾಣುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ 100ರ ಮುಖಬೆಲೆಯ ಹಳೆಯ ಸೀರಿಸ್‌ನ ನೋಟುಗಳನ್ನು ಹಂತಹಂತವಾಗಿ ಹಿಂಪಡೆಯಲಾಗುತ್ತಿದೆ. ಹಳೆಯ ಸೀರಿಸ್‌ ಹೊಂದಿರುವ 100ರ ಕರೆನ್ಸಿ ನೋಟುಗಳನ್ನು ಮಾರ್ಚ್‌ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಹಿಂಪಡೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಬ್ಯಾನ್ ಆಗುತ್ತಾ 2000 ರು. ನೋಟು?: ಕೇಂದ್ರ ಸರ್ಕಾರದ ಸ್ಪಷ್ಟನೆ

ಅಮಾನ್ಯೀಕರಣ ಅಲ್ಲ:

ಕಳೆದ 6 ವರ್ಷಗಳಿಂದ ಈ ನೋಟುಗಳು ಮುದ್ರಣವಾಗುತ್ತಿಲ್ಲ. ಆದರೆ ಈ ಹಿಂದೆಯೇ ಮುದ್ರಣಗೊಂಡಿರುವ ಈ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದು ಆರ್‌ಬಿಐ ಉದ್ದೇಶವಾಗಿದೆ. ನೋಟು ವಾಪಸ್‌ ಕಾರಣಕ್ಕೆ ಜನತೆ ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಸ್ವಚ್ಛ ನೋಟುಗಳು ಜನತೆಯ ಕೈಗೆ ಸಿಗಬೇಕೆಂಬುದು ಮಾತ್ರ ಉದ್ದೇಶ. ಇದು ನೋಟು ಅಮಾನ್ಯೀಕರಣ ಅಲ್ಲ ಎಂದು ಸ್ಪಷ್ಟಪಡಿಸಿದರು. ಹೊಸ ಸೀರಿಸ್‌ ಹೊಂದಿರುವ 100ರ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿರಬೇಕು. ಬ್ಯಾಂಕ್‌ನವರು ಅಂತಹ ನೋಟುಗಳನ್ನು ಇರಿಸಿಕೊಳ್ಳದೆ ಕರೆನ್ಸಿ ಚೆಸ್ಟ್‌ಗೆ ಒಪ್ಪಿಸಬೇಕು ಎಂದು ಅವರು ಸೂಚನೆ ನೀಡಿದರು.