ನವದೆಹಲಿ[ಡಿ.11]: ‘2000 ರು. ನೋಟುಗಳನ್ನು ರದ್ದುಗೊಳಿಸುವುದಿಲ್ಲ. ಈ ಬಗ್ಗೆ ಜನರು ಚಿಂತೆ ಮಾಡೋದು ಬೇಡ’ ಎಂದು ಕೇಂದ್ರ ಸರ್ಕಾರ ಅಭಯ ನೀಡಿದೆ.

ರಾಜ್ಯಸಭೆಯಲ್ಲಿ ಮಂಗಳವಾರ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್‌ ಠಾಕೂರ್‌, ‘ಅಪನಗದೀಕರಣದ ನಂತರ ನಿಜವಾದ ಚಿಂತೆ (2000 ರು. ನೋಟು ರದ್ದತಿ ವದಂತಿ) ಈಗ ಹುಟ್ಟಿಕೊಂಡಿದೆ. ಈ ಬಗ್ಗೆ ನೀವು ಚಿಂತಿಸೋದು ಬೇಡ’ ಎಂದು ಉತ್ತರಿಸಿದರು.

ಅಯ್ಯಯ್ಯಪ್ಪಾ: 2 ಸಾವಿರ ನೋಟ್ ಬ್ಯಾನ್ ಅಂದಿದ್ಯಾರಪ್ಪಾ?

ಸಮಾಜವಾದಿ ಪಕ್ಷದ ಸದಸ್ಯ ವಿಶ್ವಂಭರ ಪ್ರಸಾದ್‌ ನಿಷಾದ್‌ ಈ ಬಗ್ಗೆ ಪ್ರಶ್ನೆ ಕೇಳಿ, ‘2000 ರು. ನೋಟು ಜಾರಿಯಿಂದ ಕಪ್ಪುಹಣ ಜಾಸ್ತಿಯಾಗಿದೆ. ಆದ್ದರಿಂದ ಜನರು ಈಗ 2000 ರು. ನೋಟು ರದ್ದಾಗಿ 1000 ರು. ನೋಟನ್ನು ಪುನಃ ಸರ್ಕಾರ ಜಾರಿಗೆ ತರಲಿದೆ ಎಂಬ ತಪ್ಪುಕಲ್ಪನೆಯಲ್ಲಿದ್ದಾರೆ. ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದರು.

ಇದಕ್ಕೆ ಉತ್ತರ ನೀಡಿದ ಠಾಕೂರ್‌, ‘ಅಪನಗದೀಕರಣದ ಉದ್ದೇಶ ಕಪ್ಪುಹಣ ನಿರ್ಮೂಲನೆ, ನಗದು ಹರಿವಿನ ಪ್ರಮಾಣ ಕಮ್ಮಿಗೊಳಿಸುವುದು, ತೆರಿಗೆ ವ್ಯಾಪ್ತಿ ವಿಸ್ತಾರ.. ಇವೇ ಮೊದಲಾದವು’ ಎಂದು ಸ್ಪಷ್ಟಪಡಿಸಿದರು.

‘ಆದರೆ 2016ಕ್ಕೆ ಹೋಲಿಸಿದರೆ ಈಗ ಆರ್ಥಿಕತೆಯಲ್ಲಿ ನೋಟುಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 2016ರ ನವೆಂಬರ್‌ 4ರಂದು 17,741.87 ಶತಕೋಟಿ ರು. ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ 2019ರ ಡಿಸೆಂಬರ್‌ 2ರ ಅಂಕಿ ಅಂಶಗಳ ಪ್ರಕಾರ ಇದರ ಪ್ರಮಾಣ 22,356.48 ಶತಕೋಟಿ ರು.ಗೆ ಹೆಚ್ಚಿದೆ. ಅಂದರೆ ಹೆಚ್ಚಾದ ಪ್ರಮಾಣ ಶೇ.14.51ರಷ್ಟು. ಆದರೆ ಸರ್ಕಾರದ ಅಂದಾಜಿನ ಪ್ರಕಾರ 25,402.53 ಶತಕೋಟಿಗೆ ಈ ವೇಳೆಗೆ ನೋಟಿನ ಹರಿವಿನ ಪ್ರಮಾಣ ಹೆಚ್ಚಬೇಕಿತ್ತು. ಹಾಗಾಗಿಲ್ಲ’ ಎಂದು ಠಾಕೂರ್‌ ಉತ್ತರಿಸಿದರು.

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!

ಖೋಟಾನೋಟು ಇಳಿಕೆ:

‘ಇನ್ನು ಖೋಟಾನೋಟು ಜಪ್ತಿ ಪ್ರಮಾಣವೂ ಕಡಮೆಯಾಗಿದೆ. 2016-17ರಲ್ಲಿ 762,072 ಖೋಟಾ ನೋಟನ್ನು ಪತ್ತೆ ಮಾಡಲಾಗಿತ್ತು. ಇದರ ಪ್ರಮಾಣ 2017-​18 ರಲ್ಲಿ 522,783ಕ್ಕೆ ಹಾಗೂ 2018-19ರಲ್ಲಿ 317,389ಕ್ಕೆ ಇಳಿದಿದೆ. ಇದರಿಂದಾಗಿ ಅಪನಗದೀಕರಣದಿಂದ ಖೋಟಾನೋಟು ಹರಿವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದು ಸಾಬೀತಾಗಿದೆ’ ಎಂದರು.

ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ