ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧಿಸುವುದಿಲ್ಲ, ಎಲ್ಲ ಧರ್ಮಗಳೂ ಪ್ರೀತಿ, ಮಾನವೀಯತೆ ಬೋಧಿಸುತ್ತವೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಲೋಕಾಪುರ (ಮಾ.22): ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದು ಅವಶ್ಯ. ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧಿಸುವುದಿಲ್ಲ, ಎಲ್ಲ ಧರ್ಮಗಳೂ ಪ್ರೀತಿ, ಮಾನವೀಯತೆ ಬೋಧಿಸುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ರಮ್ಜಾನ್ ಹಬ್ಬದ ನಿಮಿತ್ತ ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಬೈರಕದಾರ ಮಾತನಾಡಿ, ರಮ್ಜಾನ್ ಎಂದರೆ ಅರಬ್ಬಿ ಭಾಷೆಯಲ್ಲಿ ಸುಡುವುದು ಎಂದು, ಏನು ಸುಡುವುದು? ಪಾಪ ಕರ್ಮ, ದ್ವೇಷ ಹಾಗೂ ದೋಷಗಳನ್ನು ಸುಡುವುದು, ಈ ಹಬ್ಬವೇ ಒಂದು ವೈಶಿಷ್ಟ್ಯತೆಯ ಪ್ರತೀಕವಾಗಿದೆ. ರೋಜಾ ಮತ್ತು ಜಕಾತ್ ಈ ಹಬ್ಬದ ವಿಶೇಷತೆ, ಜಕಾತ್ ಅಂದರೆ ದಾನ (ದಾಸೋಹ) ಇಸ್ಲಾಂ ಧರ್ಮಿಯರು ರಮ್ಜಾನ್ ಮಾಸದಲ್ಲಿ ಬಡವರಿಗೆ, ದೀನ ದುರ್ಬಲರಿಗೆ ಕಡ್ಡಾಯವಾಗಿ ದಾನ ಮಾಡಲೇಬೇಕು, ಕಾಯಕದಿಂದ ಸಂಪಾದಿಸಿರುವುದನ್ನು ದಾನ ಮಾಡಿ ಪವಿತ್ರನಾಗು ಎನ್ನುವುದು ಕುರಾನ್ ಗ್ರಂಥದ ಸಂದೇಶವಾಗಿದೆ ಎಂದರು.
ದಯಯೇ ಧರ್ಮ
ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಡೋಂಗ್ರಿ ಮಹಾಲಿಂಗಪೂರ ಮಾತನಾಡಿ, ದೇವನೊಬ್ಬ ನಾಮ ಹಲವು, ಆಚರಿಸುವ ಪೂಜಿಸುವ ಪದ್ಧತಿ ಬೇರೆ ಆದರೂ ಎಲ್ಲರ ಗುರಿಯೂ ಒಂದೇ. ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ಅಲ್ಲಾಹನೇ ನನ್ನನ್ನೂ ಸೇರಿದಂತೆ ಅರಿತೋ ಅತಿಯದೆಯೋ ಮಾಡುವ ತಪ್ಪುಗಳನ್ನು ಮನ್ನಿಸು, ಎಲ್ಲರಿಗೂ ಒಳಿತನ್ನೇ ಮಾಡು, ದಯಯೇ ಧರ್ಮ, ದಾನದ ಮೂಲಕ ಶಾಂತಿ, ಸಮೃದ್ಧಿ ವಾತಾವರಣ ನಿರ್ಮಾಣ ಮಾಡು ಎನ್ನುವ ಬೇಡಿಕೆಯನ್ನು ದೇವರಲ್ಲಿ ಅರಿಕೆ ಮಾಡುವ ವಿಧಿ ವಿಧಾನವೇ ಈ ರಮ್ಜಾನ್ ಹಬ್ಬದ ವೈಶಿಷ್ಟ್ಯ ಎಂದು ಹೇಳಿದರು.
ಅಂಜುಮನ್ ಇಸ್ಲಾಂ ಕಮೀಟಿ ವತಿಯಿಂದ ಅಬಕಾರಿ ಸಚಿವರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಶಿವಾನಂದ ಉದಪುಡಿ, ಹೊಳಬಸು ದಂಡಿನ, ಮುತ್ತಪ್ಪ ಚೌಧರಿ, ಅಲ್ಲಾಸಾಬ ಯಾದವಾಡ, ಸಿದ್ದು ಕಿಲಾರಿ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ನಧಾಪ್, ಕಾರ್ಯದರ್ಶಿ ಸಾದಿಕ್ ಪಠಾಣ, ಖಜಾಂಜಿ ರಫೀಕ್ ಗುಳೆದಗುಡ್ಡ ಸದಸ್ಯರಾದ ಅಬ್ದುಲ್ ರೆಹಮಾನ್ ತೊರಗಲ್, ಗುಲಾಬಸಾಬ ಅತ್ತಾರ, ಕುತುಬು ಅತ್ತಾರ, ಶಬ್ಬೀರ್ ಚೌಧರಿ, ಸೈಯದ್ ನಧಾಪ್, ಸೈಯದ್ ಗುದಗಿ, ಸೈಯದ್ ಚಿತ್ರ ಭಾನುಕೋಟಿ, ರಿಯಾಜ್ ಮಕಾನದಾರ, ನಜೀರ್ ತೊರಗಲ್, ಅಬ್ದುಲ್ ಮುಲ್ಲಾ, ಮೈಬೂರ್ ಜೀರಗಾಳ, ಲಾಲಸಾಬ ನಧಾಪ ಹಾಗೂ ಸಮಾಜದ ಯುವ ಮುಖಂಡರಾದ ನಬಿ ಇಂಗಳಗಿ ಮೈಬೂಬ ರಾಮದುರ್ಗ, ಸುಲ್ತಾನ ಕಲಾದಗಿ, ರಫೀಕ ಕಲಾದಗಿ, ಲಾಲಸಾಬ ಗುದಗಿ, ಪತ್ರಕರ್ತ ಸಲೀಂ ಕೊಪ್ಪದ ಅನೇಕ ಮುಸ್ಲಿಂ ಸಮಾಜದ ಮುಖಂಡರು ಇದ್ದರು.


