ದೊಡ್ಡಬಳ್ಳಾಪುರ (ಅ.16):  ತಾಲೂಕಿನ ಹೊನ್ನಾಘಟ್ಟಸಮೀಪ ಕೆರೆಯಲ್ಲಿ ಪತ್ತೆಯಾಗಿದ್ದ 25ರಿಂದ 30 ವರ್ಷ ವಯಸ್ಸಿನ ವ್ಯಕ್ತಿಯ ಕೊಳೆತ ಮೃತದೇಹ ಪ್ರಕರಣದ ತನಿಖೆ ನಡೆಸಿರುವ ಇಲ್ಲಿನ ಗ್ರಾಮಾಂತರ ಪೊಲೀಸರು, ಕೊಲೆ ಮಾಡಿ ಶವವನ್ನು ಕೆರೆಯಲ್ಲಿ ಎಸೆದಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ಬೆನ್ನತ್ತಿದ ಪೊಲೀಸರು ಬೆಂಗಳೂರಿನ ಅನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಕಾಣೆಯಾಗಿರುವ ವ್ಯಕ್ತಿಯ ಪ್ರಕರಣದಲ್ಲಿ 20 ವರ್ಷ ವಯಸ್ಸಿನ ಪಿ.ಚೇತನ್‌ ಎಂಬಾತನ ಭಾವಚಿತ್ರ ಗಮನಿಸಿದಾಗ ಮೃತ ವ್ಯಕ್ತಿಯ ಹೋಲಿಕೆ ಕಂಡು ಬಂದಿದ್ದು, ಆತನ ಮನೆಯವರನ್ನು ಕರೆಸಿ ವಿಚಾರಿಸಿದಾಗ, ಮೃತ ವ್ಯಕ್ತಿ ಆತನೇ ಎಂದು ತಿಳಿದುಬಂದಿದೆ.

ಹೊಸ ತಿರುವು ಪಡೆದುಕೊಂಡ 19ರ ಯುವತಿ ಕೊಲೆ ಕೇಸ್ : ರವಿ ಚನ್ನಣ್ಣನವರ್ ಎಂಟ್ರಿ ...

ಮೃತನ ಮನೆಯವರು ಪ್ರಜ್ವಲ್‌ ಅಲಿಯಾಸ್‌ ಗುಂಡ, ಕರಿಯ, ಗಣೇಶ, ಹೇಮಂತ, ರಾಜು ಮತ್ತು ಇತರೆಯವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆ ವ್ಯಕ್ತಿಗಳನ್ನು ವಿಚಾರಣೆ ನಡೆಸಿದಾಗ ಚೇತನ್‌ನನ್ನು ಈ ಎಲ್ಲರೂ ಸೇರಿ ದೊಡ್ಡಬಳ್ಳಾಪುರದ ರಾಜು, ವಾಸಿಫ್‌ ಇತರರೊಡನೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೃತ ಚೇತನ್‌, ಆರೋಪಿ ಪ್ರಜ್ವಲ್‌ನ ಅಕ್ಕನನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೇ ಕೃತ್ಯ ನಡೆದಿದೆ. ಚೇತನ್‌ನನ್ನು ಸ್ನೇಹಿತರು ವ್ಯವಸ್ಥಿತವಾಗಿ ಬೆಂಗಳೂರಿನ ನಾಗರಬಾವಿ ಬಳಿಯ ಬಿಡಿಎ ಕಾಂಪ್ಲೆಕ್ಸ್‌ ಬಳಿಗೆ ಕರೆಸಿಕೊಂಡು, ಅಲ್ಲಿಂದ ಕಾರಿನಲ್ಲಿ ದೊಡ್ಡಬಳ್ಳಾಪುರಕ್ಕೆ ಕರೆದುಕೊಂಡು ಬಂದು, ಅಂದು ರಾತ್ರಿ ಪ್ರಜ್ವಲ್‌ನ ಸ್ನೇಹಿತ ತಿಮ್ಮರಾಜು ಮನೆಯಲ್ಲಿ ಇರಿಸಿಕೊಂಡು ಬೆಳಗ್ಗೆ ಹೊನ್ನಾಘಟ್ಟಕೆರೆಯ ಬಳಿಗೆ ಕರೆದೊಯ್ದು, ದೊಣ್ಣೆಗಳಿಂದ ಹೊಡೆದು, ಬಟ್ಟೆಯಿಂದ ಕುತ್ತಿಗೆ ಸುತ್ತಿ ಕೊಲೆ ಮಾಡಿದ್ದಾರೆ. ನಂತರ ಹೆಣವನ್ನು ದಿಬ್ಬದ ಪೊದೆಯಲ್ಲಿ ಹಾಕಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

7 ಆರೋಪಿಗಳ ಬಂಧನ:

ಸದರಿ ಪ್ರಕರಣದಲ್ಲಿ 13 ಆರೋಪಿಗಳ ಕೈವಾಡವಿದ್ದು, ಸದ್ಯ 7 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಉಳಿದ 6 ಮಂದಿಯ ಪತ್ತೆಗೆ ಬಲೆ ಬೀಸಿದ್ದಾರೆ. ರಾಜಘಟ್ಟಗ್ರಾಮದ ಎಸ್‌.ಹೇಮಂತ್‌ (25) ಬಿನ್‌ ಶ್ರೀನಿವಾಸ, ಪಾಲನಜೋಗಿಹಳ್ಳಿಯ ಜಿ.ಟಿ.ತಿಮ್ಮರಾಜು (22) ಬಿನ್‌ ಗೋವಿಂದಪ್ಪ, ಕಾಮಾಕ್ಷಿಪಾಳ್ಯದ ಎಂ.ಸಂಜಯ್‌ (19) ಬಿನ್‌ ಲೇಟ್‌ ಕೃಷ್ಣಮೂರ್ತಿ, ಎಸ್‌.ನವೀನ (18) ಬಿನ್‌ ಸತೀಶ್‌, ಎಸ್‌.ನಿಖಿಲ್‌ (19) ಬಿನ್‌ ಸಣ್ಣಪ್ಪ, ದೊಡ್ಡಬಳ್ಳಾಪುರ ಪ್ರಿಯದರ್ಶಿನಿ ಬಡಾವಣೆಯ ಎ.ವಾಸೀಫ್‌ ಅಲಿಯಾಸ್‌ ಕಾಜು (20), ಪಾಲನಜೋಗಿಹಳ್ಳಿಯ ಪ್ರವೀಣ್‌ (20) ಬಿನ್‌ ಎನ್‌.ಮುನಿರಾಜು ಬಂಧಿತ ಆರೋಪಿಗಳಾಗಿದ್ದಾರೆ.

ಸದರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ಅಲಿಯಾಸ್‌ ಗುಂಡ, ಆತನ ಸಹಚರರಾದ ಮಿಥುನ್‌ ಅಲಿಯಾಸ್‌ ಕರಿಯ, ಗಣೇಶ, ನಂದನ್‌ ಅಲಿಯಾಸ್‌ ಚಿಕ್ಕಗುಂಡ, ಪವನ್‌, ಜೀಷಾನ್‌ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಎಸ್ಪಿ ರವಿ ಡಿ. ಚೆನ್ನಣ್ಣನವರ್‌, ಎಎಸ್‌ಪಿ ಲಕ್ಷ್ಮೇ ಗಣೇಶ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಟಿ.ರಂಗಪ್ಪ, ಸಿಪಿಐ ನವೀನ್‌ಕುಮಾರ್‌, ಎಸ್‌ಐಗಳಾದ ಶಂಕರಪ್ಪ, ಸೋಮಶೇಖರ್‌, ಸಿಬ್ಬಂದಿ ರಾಧಾಕೃಷ್ಣ, ಗಂಗಯ್ಯ, ಕೃಷ್ಣ, ವೆಂಕಟೇಶ್‌, ಎಚ್‌.ಸಿ.ಉಮೇಶ್‌, ಪಾಂಡುರಂಗ, ಮಧುಕುಮಾರ್‌ ಇದ್ದ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.