ಮಂಗಳೂರಿನ ಜಂಬಿಟ್ಟಿಗೆ ಪ್ರಸ್ಥಭೂಮಿಯಲ್ಲಿ ಅಪರೂಪದ ಯುರೋಪಿಯನ್ ರೋಲರ್ ಹಕ್ಕಿ ಕಾಣಿಸಿಕೊಂಡಿದೆ. ಆದರೆ, ಈ ಸೂಕ್ಷ್ಮ ಪರಿಸರ ವ್ಯವಸ್ಥೆಯು ಪ್ಲಾಸ್ಟಿಕ್ ಮತ್ತು ನಿರ್ಮಾಣ ತ್ಯಾಜ್ಯದಿಂದಾಗಿ ತೀವ್ರ ಮಾಲಿನ್ಯಕ್ಕೆ ತುತ್ತಾಗುತ್ತಿದೆ. ಈ ಆವಾಸಸ್ಥಾನಗಳನ್ನು ಸಂರಕ್ಷಿಸದಿದ್ದರೆ ಜೀವವೈವಿಧ್ಯಕ್ಕೆ ಗಂಭೀರ ಹಾನಿಯಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವರದಿ: ರಾಂ ಅಜೆಕಾರು
ಕಾರ್ಕಳ: ಮಂಗಳೂರಿನ ಜಂಬಿಟ್ಟಿಗೆ (ಲ್ಯಾಟರೈಟ್) ಪ್ರಸ್ಥಭೂಮಿಯಲ್ಲಿ ಅಪರೂಪದ ಯುರೋಪಿಯನ್ ರೋಲರ್ (Coracias garrulus) ಹಕ್ಕಿ ಕಾಣಿಸಿಕೊಂಡಿರುವುದು ಪಕ್ಷಿಪ್ರೇಮಿಗಳ ಗಮನ ಸೆಳೆದಿದೆ. ಆದರೆ, ಈ ಅಪರೂಪದ ವಲಸೆ ಹಕ್ಕಿಗೆ ಆಶ್ರಯ ನೀಡುವ ಜಂಬಿಟ್ಟಿಗೆ ಪರಿಸರವೇ ಇಂದು ಪ್ಲಾಸ್ಟಿಕ್ ಮತ್ತು ನಿರ್ಮಾಣ ತ್ಯಾಜ್ಯದ ಮಾಲಿನ್ಯಕ್ಕೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಬಂಜರು ಭೂಮಿಯಂತೆ ಕಾಣುವ ಈ ಪ್ರದೇಶಗಳು ವಾಸ್ತವದಲ್ಲಿ ಹಲವು ಜೀವಿಗಳ ಬದುಕಿಗೆ ಆಧಾರವಾಗಿದ್ದು, ನಿರ್ಲಕ್ಷ್ಯ ಮುಂದುವರಿದರೆ ಅವುಗಳ ಆಹಾರ ಸರಪಳಿ ಹಾಗೂ ನೈಸರ್ಗಿಕ ಆವಾಸಸ್ಥಾನಕ್ಕೆ ಗಂಭೀರ ಹಾನಿಯಾಗುವ ಅಪಾಯವಿದೆ.
ಯುರೋಪ್ ಮತ್ತು ಮಧ್ಯ ಏಷ್ಯಾದಿಂದ ಉಪ-ಸಹಾರನ್ ಆಫ್ರಿಕಾಕ್ಕೆ ವಲಸೆ ಹೋಗುವ ಯುರೋಪಿಯನ್ ರೋಲರ್ ತನ್ನ ಆಕರ್ಷಕ ನೀಲಿ ಹಾಗೂ ತಾಮ್ರವರ್ಣದ ಗರಿಗಳಿಂದ ಗಮನ ಸೆಳೆಯುತ್ತದೆ. ಸಾಮಾನ್ಯ ವಲಸೆ ಮಾರ್ಗದಿಂದ ದಾರಿ ತಪ್ಪಿ ಮಂಗಳೂರಿಗೆ ಬಂದಿರುವ ಸಾಧ್ಯತೆಯಿದ್ದು, ಹವಾಮಾನ ವೈಪರೀತ್ಯವೂ ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ತ್ಯಾಜ್ಯದಿಂದ ಜೀವವೈವಿಧ್ಯಕ್ಕೆ ಕುತ್ತು :
ಮರಗಳ ಹೊದಿಕೆ ಕಡಿಮೆ ಇರುವುದರಿಂದ ಜಂಬಿಟ್ಟಿಗೆ ಪ್ರಸ್ಥಭೂಮಿಗಳನ್ನು ಸಾಮಾನ್ಯವಾಗಿ ಬಂಜರು ಪ್ರದೇಶಗಳೆಂದು ಭಾವಿಸಲಾಗುತ್ತದೆ. ಆದರೆ, ಈ ಪರಿಸರವು ಕೀಟಗಳು, ಸರೀಸೃಪಗಳು ಹಾಗೂ ಭಾರತೀಯ ರೋಲರ್ ಮತ್ತು ಹಳದಿ-ಗಂಟಲಿನ ಲ್ಯಾಪ್ವಿಂಗ್ನಂತಹ ಪಕ್ಷಿಗಳಿಗೆ ಸೂಕ್ತ ಆವಾಸಸ್ಥಾನವಾಗಿದೆ. ಇಲ್ಲಿ ದೊರೆಯುವ ಕೀಟಗಳು ಹಲವು ಪಕ್ಷಿಗಳಿಗೆ ಪ್ರಮುಖ ಆಹಾರ ಮೂಲವಾಗಿವೆ. ಹೀಗಾಗಿ, ಈ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಮತ್ತು ನಿರ್ಮಾಣ ತ್ಯಾಜ್ಯ ಸುರಿಯುವುದರಿಂದ ಕೇವಲ ಭೂಮಿಯ ಸ್ವಚ್ಛತೆ ಹಾಳಾಗುವುದಷ್ಟೇ ಅಲ್ಲದೆ, ಇಡೀ ಪರಿಸರ ವ್ಯವಸ್ಥೆಯ ಸಮತೋಲನಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆಯಿದೆ. ತ್ಯಾಜ್ಯದಲ್ಲಿ ಬೆರೆತಿರುವ ಪ್ಲಾಸ್ಟಿಕ್ ಸಣ್ಣ ತುಂಡುಗಳಾಗಿ ವಿಭಜನೆಯಾಗಿ ಪರಿಸರದಲ್ಲಿ ದೀರ್ಘಕಾಲ ಉಳಿಯಬಹುದು. .
ಸಂರಕ್ಷಣೆ ನಿರ್ಲಕ್ಷಿಸಿದರೆ ಆವಾಸಸ್ಥಾನವೇ ನಾಶ:
ಜಂಬಿಟ್ಟಿಗೆ ಪ್ರಸ್ಥಭೂಮಿಗಳ ಪರಿಸರ ಮೌಲ್ಯವನ್ನು ಗುರುತಿಸಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಪರೂಪದ ವಲಸೆ ಹಕ್ಕಿಗಳು ಸೇರಿದಂತೆ ಸ್ಥಳೀಯ ಜೀವವೈವಿಧ್ಯಕ್ಕೆ ಆಶ್ರಯ ನೀಡುವ ನೈಸರ್ಗಿಕ ತಾಣಗಳು ಕ್ರಮೇಣ ಹದಗೆಡುವ ಅಪಾಯವಿದೆ.
ಯುರೋಪಿಯನ್ ರೋಲರ್ ಹಕ್ಕಿಯ ಆಗಮನ ನಮಗೆ ಎಚ್ಚರಿಕೆಯ ಕರೆಯಾಗಬೇಕು. ಜಂಬಿಟ್ಟಿಗೆ ಪ್ರಸ್ಥಭೂಮಿಗಳು ಬಂಜರು ಭೂಮಿಯಲ್ಲ, ಜೀವವೈವಿಧ್ಯದ ಆಶ್ರಯತಾಣಗಳು. ತ್ಯಾಜ್ಯ ಎಸೆಯುವಿಕೆಯನ್ನು ತಡೆದು, ಈ ಸೂಕ್ಷ್ಮ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಅಗತ್ಯ.”
-ಕಿರಣ್ ವಟಿ ಕೆ., ಸಹಾಯಕ ಪ್ರಾಧ್ಯಾಪಕರು, ಪ್ರಾಣಿಶಾಸ್ತ್ರ ವಿಭಾಗ, ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು.
ಜಂಬಿಟ್ಟಿಗೆ ಪ್ರಸ್ಥಭೂಮಿಗಳು ಬಂಜರು ಭೂಮಿಯಲ್ಲ, ಅಪರೂಪದ ಸ್ಥಳೀಯ ಹಾಗೂ ವಲಸೆ ಹಕ್ಕಿಗಳಿಗೆ ಆಶ್ರಯ ನೀಡುವ ಜೀವವೈವಿಧ್ಯದ ತಾಣಗಳು. ಗುರುಪುರ–ಕೈಕಂಬದಲ್ಲಿ ಎಂಟು ಅಪರೂಪದ ಯುರೋಪಿಯನ್ ರೋಲರ್ ಹಕ್ಕಿಗಳು ಕಾಣಿಸಿಕೊಂಡಿರುವುದು ಇದರ ಮಹತ್ವವನ್ನು ಸಾರುತ್ತದೆ. ಈ ಸೂಕ್ಷ್ಮ ಪರಿಸರ ವ್ಯವಸ್ಥೆಗಳು ನಾಶವಾಗುವ ಮುನ್ನ ಸಂರಕ್ಷಣೆ ಅಗತ್ಯ.”
-ಮಹಿಮ್ ಭಟ್, ಪಿಎಚ್.ಡಿ. ಸಂಶೋಧಕರು, ಮಾಹೆ, ಮಣಿಪಾಲ.
ಈ ಪ್ರಸ್ಥಭೂಮಿಗಳು ಜೀವವೈವಿಧ್ಯ ಹಾಗೂ ವಲಸೆ ಹಕ್ಕಿಗಳಿಗೆ ಪ್ರಮುಖ ಆಶ್ರಯತಾಣಗಳು. ಆದರೆ ಹಳೆಯ ಕ್ವಾರಿ ಗುಂಡಿಗಳು ಪ್ಲಾಸ್ಟಿಕ್ ಮತ್ತು ನಿರ್ಮಾಣ ತ್ಯಾಜ್ಯಗಳಿಂದ ತುಂಬುತ್ತಿರುವುದು ಆತಂಕಕಾರಿ. ಆರ್ಥಿಕ ಲಾಭಕ್ಕಿಂತ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಈ ಆವಾಸಸ್ಥಾನಗಳನ್ನು ಉಳಿಸಬೇಕು.”
-ಸಾತ್ವಿಕ್ ಪಿ.ಎಸ್., ವನ್ಯಜೀವಿ ಚಲನಚಿತ್ರ ನಿರ್ಮಾಪಕ ಮತ್ತು ಛಾಯಾಗ್ರಾಹಕ, ವೈಲ್ಡ್ ಡಿಕೆ ಪ್ರೊಡಕ್ಷನ್ಸ್.






