Mysuru Dasara 2022: ಸೆ.19ರಿಂದ ರಂಗ ಸಂಗೀತ, ದಸರಾ ರಂಗೋತ್ಸವ

ನಗರದ ರಂಗಾಯಣವು ರಂಗಭೀಷ್ಮ ಬಿ.ವಿ. ಕಾರಂತರ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುವ ಭಾರತೀಯ ರಂಗಸಂಗೀತ ದಿನದ ಭಾಗವಾಗಿ ಹಾಗೂ ದಸರಾ ಹಿನ್ನೆಲೆ ಸೆ. 19 ರಿಂದ ರಂಗ ಸಂಗೀತೋತ್ಸವ, ದಸರಾ ರಂಗೋತ್ಸವ ಆಯೋಜಿಸಿದೆ.

Ranga Music and Dasara Rangotsava will start from September 19th gvd

ಮೈಸೂರು (ಸೆ.15): ನಗರದ ರಂಗಾಯಣವು ರಂಗಭೀಷ್ಮ ಬಿ.ವಿ. ಕಾರಂತರ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುವ ಭಾರತೀಯ ರಂಗಸಂಗೀತ ದಿನದ ಭಾಗವಾಗಿ ಹಾಗೂ ದಸರಾ ಹಿನ್ನೆಲೆ ಸೆ. 19 ರಿಂದ ರಂಗ ಸಂಗೀತೋತ್ಸವ, ದಸರಾ ರಂಗೋತ್ಸವ ಆಯೋಜಿಸಿದೆ.

ಪ್ರತಿ ವರ್ಷ ಸೆ. 19 ರಂದು ಬಿ.ವಿ. ಕಾರಂತ ಅವರ ಜನ್ಮ ದಿನದಂದು ಭಾರತೀಯ ರಂಗಸಂಗೀತ ದಿನ ಎಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಸೆ. 19 ರಿಂದ 24 ರವರೆಗೆ ಭೂಮಿಗೀತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ರಂಗ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಮುಂಬೈನ ರಂಗ ನಿರ್ದೇಶಕ ಅಮೋದ್‌ ಭಟ್‌ ಉದ್ಘಾಟಿಸಲಿದ್ದು, ಚಿತ್ರನಟ ಅರುಣ್‌ ಸಾಗರ್‌ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ದಸರಾ ರಂಗೋತ್ಸವ: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ರಂಗಾಯಣದಿಂದ ಪ್ರತಿ ವರ್ಷದಂತೆ ದಸರಾ ರಂಗೋತ್ಸವ ಏರ್ಪಡಿಸಿದ್ದು, ಸೆ. 25 ರಿಂದ ಅ. 4 ರವರೆಗೆ ಒಟ್ಟು 10 ದಿನಗಳ ಕಾಲ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಈ ಬಾರಿಯ ದಸರಾ ರಂಗೋತ್ಸವದಲ್ಲಿ ಮೈಸೂರು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ರಾಜರ್ಷಿ ಶ್ರೀ ಕೃಷ್ಣರಾಜ ಒಡೆಯರ್‌ ಅವರ ನೆನಪಿನಲ್ಲಿ ಆಯೋಜಿಸಿದೆ ಎಂದರು.

Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

25 ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ ‘ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನಗೊಳ್ಳಲಿದೆ. ಆರ್‌. ನಾಗೇಶ್‌ ನಿರ್ದೇಶನದಲ್ಲಿ ಮೈಸೂರು ರಂಗಾಯಣ ಕಲಾವಿದರು ಪ್ರಸ್ತುತಪಡಿಸುವರು. 26 ರಂದು ಜಿ.ಕೆ. ನಂದಕುಮಾರ ರಚನೆ, ನಿರ್ದೇಶನದಲ್ಲಿ ಭಾರತೀಯ ರಂಗವಿದ್ಯಾಲಯ ತಂಡ ‘ಸಮರಕಥಾ’ ನಾಟಕ ಪ್ರದರ್ಶಿಸುವರು. 27 ರಂದು ಪಿ. ಲಂಕೇಶ್‌ ರಚನೆಯ ‘ಪೋಲಿಸರಿದ್ದಾರೆ ಎಚ್ಚರಿಕೆ’ ನಾಟಕವನ್ನು ನಾಗಾರ್ಜುನ ಆರಾಧ್ಯ ನಿರ್ದೇಶನದಲ್ಲಿ ಆಯಾಮ ರಂಗತಂಡ ಪ್ರಸ್ತುತಪಡಿಸಲಿದೆ. 28 ರಂದು ಸುಧಾ ಆಡುಕಳ ರಚನೆಯ ‘ಮಾಧವಿ’ ನಾಟಕವನ್ನು ಶ್ರೀಪಾದಭಟ್‌ ನಿರ್ದೇಶನದಲ್ಲಿ ಕೈವಲ್ಯ ಕಲಾಕೇಂದ್ರ ತಂಡದ ಕಲಾವಿದರು ಪ್ರದರ್ಶಿಸುವರು. 

29 ರಂದು ಶಶಿರಾಜ್‌ ಕಾವೂರ್‌ ರಚಿಸಿ ನಿರ್ದೇಶಿಸಿರುವ ‘ದಾಟ್ಸ್‌ ಆಲ್‌ ಯುವರ್‌ ಆನರ್‌’ ನಾಟಕವನ್ನು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ತಂಡವು ಪ್ರಸ್ತುತ ಪಡಿಸಲಿದೆ. 30 ರಂದು ಮಾಕ್ಸಿಂ ಗಾರ್ಕಿ ರಚನೆಯ ‘ಈ ಕೆಳಗಿನವರು’ ನಾಟಕವನ್ನು ವೀಣಾ ಶರ್ಮ ಭೂಸನೂರಮಠ ನಿರ್ದೇಶನದಲ್ಲಿ ಎನ್‌ಎಸ್‌ಡಿ ಬೆಂಗಳೂರು ತಂಡ ಪ್ರಸ್ತುತ ಪಡಿಸಲಿದ್ದು, ಅ. 1 ರಂದು ಅರುಣ್‌ ಮಹೋಪಾಧ್ಯಾಯ ಅವರ ‘ಮಾರೀಚನ ಬಂಧುಗಳು’ ನಾಟಕವನ್ನು ವಾಲ್ಟರ್‌ ಡಿಸೋಜ ನಿರ್ದೇಶನದಲ್ಲಿ ಸ್ನೇಹರಂಗ ತಂಡ ಪ್ರಸ್ತುತಪಡಿಸಲಿದೆ.

ಅ. 2 ರಂದು ಅಡ್ಡಂಡ ಸಿ. ಕಾರ್ಯಪ್ಪ ರಚಿಸಿ ನಿರ್ದೇಶಿಸಿರುವ ‘ಹಲಗಲಿ ಸಮರ’ ನಾಟಕವನ್ನು ರಂಗಾಯಣ ಕಲಾವಿದರು ಪ್ರಸ್ತುತಪಡಿಸುವರು. 3 ರಂದು ಮೌನೇಶ್‌ ಬಡಿಗೇರ ರಚನೆಯ ‘ವಿಶಾಂಕೇ’ ನಾಟಕವನ್ನು ಮಂಜುನಾಥ ಎಲ್‌ ಬಡಿಗೇರ ನಿರ್ದೇಶನದಲ್ಲಿ ಉಡುಪಿ ರಂಗಭೂಮಿ ತಂಡದವರು ಪ್ರದರ್ಶಿಸುವರು. 4 ರಂದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂನ ಆಯ್ದಭಾಗ ‘ಮಮತೆಯ ಸುಳಿ’ ನಾಟಕವನ್ನು ಗಣೇಶ್‌ ಮಂದಾರ್ತಿ ನಿರ್ದೇಶನದಲ್ಲಿ ಮಂಗಳೂರಿನ ಕಲಾಭಿ ಥಿಯೇಟರ್‌ ಪ್ರಸ್ತುತ ಪಡಿಸಲಿದೆ.

ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಕಲ್ಪಿಸಿದೆ. ಈ ಸಂದರ್ಭದಲ್ಲಿ ಬಿ.ವಿ. ಕಾರಂತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಾಗುವುದು. ಸೆ. 4 ರಂದು ಸಮಾರೋಪ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ಕುಮಾರ್‌, ಶಾಸಕ ಎಲ್‌. ನಾಗೇಂದ್ರ ಪಾಲ್ಗೊಳ್ಳುವುದಾಗಿ ಅವರು ಹೇಳಿದರು. ಈ ಸಂದರ್ಭದಲ್ಲಿ ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಇದ್ದರು.

Mysuru Dasara 2022: ಮೇಯರ್‌ ಶಿವಕುಮಾರ್‌ ನಗರ ಪ್ರದಕ್ಷಿಣೆ: ಅಧಿಕಾರಿಗಳಿಗೆ ತರಾಟೆ

ನಾ.ರತ್ನಗೆ ದಸರಾ ರಂಗ ಗೌರವ: ನಾಟಕಕಾರ ಡಾ.ನ. ರತ್ನ ಅವರಿಗೆ ‘ದಸರಾ ರಂಗಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ರತ್ನ ಅವರು ಮೈಸೂರಿನ ‘ಸಮತೆಂತೋ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಎಲ್ಲಿಗೆ, ಬೊಂತೆ, ಗೋಡೆ ಬೇಕೆ ಗೋಡೆ, ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ರೇಡಿಯೋ ನಾಟಕಗಳನ್ನು ರಚಿಸಿದ್ದಾರೆ. ಇವರು ಅನೇಕ ನಾಟಕಗಳನ್ನು ನಿರ್ದೇಶಿಸಿರುವ ಇವರು ಉತ್ತಮ ನಟರು ಹೌದು ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios