ಬೆಳಗಾವಿ(ನ.15): ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಡಿಸಿಸಿ)ನ ಅಧ್ಯಕ್ಷರಾಗಿ ರಮೇಶ ಕತ್ತಿ ಮತ್ತು ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಅವಿರೋಧವಾಗಿ ಪುನರಾಯ್ಕೆಯಾದರು. ಈ ಮೂಲಕ ಮಾಜಿ ಸಂಸದ ರಮೇಶ ಕತ್ತಿ 3ನೇ ಬಾರಿಗೆ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

ಚುನಾವಣೆಗೂ ಪೂರ್ವದಲ್ಲಿ ಬಿಜೆಪಿ ನಾಯಕರ ನಡುವಿನ ಆಂತರಿಕ ತಿಕ್ಕಾಟದಿಂದಾಗಿ ಡಿಸಿಸಿ ಬ್ಯಾಂಕ್‌ ಚುನಾವಣೆ ತೀವ್ರ ಕುತೂಹಲ ಕೆರಳಿತ್ತು. ಆದರೆ, ಪಕ್ಷದ ವರಿಷ್ಠರು ಮತ್ತು ಆರೆಸ್ಸೆಸ್‌ ಪ್ರಮುಖರು ಮಧ್ಯಪ್ರವೇಶಿಸುತ್ತಿದ್ದಂತೆ ಜಿಲ್ಲಾ ಬಿಜೆಪಿ ಮುಖಂಡರು ಗುಂಪುಗಾರಿಕೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ದು ಈ ಚುನಾವಣೆಯ ವಿಶೇಷ. ವರಿಷ್ಠರ ಸೂಚನೆಯಂತೆ ಜಿಲ್ಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಶಾಸಕ ರಮೇಶ ಕತ್ತಿ ಬಣಗಳು ಒಗ್ಗಟ್ಟಾಗಿ ಒಟ್ಟು 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದವು. ಈಗ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯೂ ಅವಿರೋಧವಾಗಿ ನಡೆಯಿತು.

ಸಂಪುಟ ಕಸರತ್ತು: ಮತ್ತೆ ಶುರುವಾಯ್ತು ಕತ್ತಿ ವರಸೆ..!

ಡಿಸಿಸಿ ಬ್ಯಾಂಕ್‌ ಚುನಾವಣೆ ವಿಚಾರದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಪಕ್ಷದ ವರಿಷ್ಠರ ಮಾತನ್ನು ಉಳಿಸಿಕೊಳ್ಳುವಲ್ಲಿ ನಾವೆಲ್ಲರೂ ಸಫಲರಾಗಿದ್ದೇವೆ. ನಾವೆಲ್ಲರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ಕಳೆದ ಬಾರಿ ನಮ್ಮ ನಡುವೆ ಹೊಂದಾಣಿಕೆ ಕೊರತೆ ಇತ್ತು. ಒಂದೇ ಪಕ್ಷದಲ್ಲಿದ್ದು ಮೂರು ಮುಖವಾಗಿರುವುದಕ್ಕಿಂತ ಒಂದಾಗಿರಿ ಎಂದು ಪಕ್ಷದ ಮುಖಂಡರು ಸಲಹೆ ನೀಡಿದ್ದರು. ಈಗ ಒಂದಾಗಿದ್ದೇವೆ. ಎಲ್ಲೂ ಭಿನ್ನಮತ ಇಲ್ಲ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ ರಮೇಶ್‌ ಕತ್ತಿ ತಿಳಿಸಿದ್ದಾರೆ.