Asianet Suvarna News Asianet Suvarna News

ಮಂತ್ರಿಗಿರಿ ಮರಳಿ ಪಡೆಯಲು ಶತಾಯ-ಗತಾಯ ಪ್ರಯತ್ನ: ಸುತ್ತೂರು ಶ್ರೀ ಭೇಟಿಯಾಗಲಿರುವ ರಮೇಶ

* ಶ್ರೀಗಳ ಭೇಟಿ ನಂತರ ನೇರವಾಗಿ ಗೋಕಾಕಗೆ ಆಗಮಿಸಲಿದ್ದಾರೆ ಜಾರಕಿಹೊಳಿ
* ಸುತ್ತೂರು ಮಠದಲ್ಲಿ ರಮೇಶ ಭೇಟಿಯ ಕಾರ್ಯಕ್ರಮ ಪೂರ್ವನಿಗದಿ
* ಸುತ್ತೂರು ಶ್ರೀಗಳ ಮೇಲೆ ಒತ್ತಡ ತಂತ್ರ ಹೇರುವ ಸಾಧ್ಯತೆ

Ramesh Jarkiholi will Be Meet Sutturu Swamiji at Mysuru  grg
Author
Bengaluru, First Published Jun 25, 2021, 7:32 AM IST

ಬೆಳಗಾವಿ(ಜೂ.25): ಸಚಿವ ಸ್ಥಾನ ಮರಳಿ ಪಡೆಯಲು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶತಾಯ- ಗತಾಯ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಈಗಾಗಲೇ ಮುಂಬೈ ತಲುಪಿ ಅಲ್ಲಿಂದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ನಡೆಸಿದ್ದ ಅವರು ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈಗಾಗಲೇ ಸುತ್ತೂರು ಮಠದಲ್ಲಿ ರಮೇಶ ಭೇಟಿಯ ಕಾರ್ಯಕ್ರಮ ಪೂರ್ವನಿಗದಿಯಾಗಿದೆ ಎಂದೂ ಅವರ ಆಪ್ತರು ಖಚಿತಪಡಿಸಿದ್ದಾರೆ. ಹೀಗಾಗಿ ಅವರು ತಮ್ಮ ಅಳಿಯ ಅಂಬಿರಾವ್‌ ಪಾಟೀಲ, ಸಹೋದರ ಲಖನ್‌ ಜಾರಕಿಹೊಳಿ ಅವರೊಟ್ಟಿಗೆ ಸುತ್ತೂರು ಮಠಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಎಲ್ಲರೂ ಯಾವ ಮಾರ್ಗದ ಮೂಲಕ ಸುತ್ತೂರು ಮಠಕ್ಕೆ ಹೋಗುತ್ತಿದ್ದಾರೆಂಬ ಮಾಹಿತಿಯೂ ಲಭ್ಯವಾಗಿಲ್ಲ. ಆದರೆ, ಈ ಭೇಟಿಯು ಭಾರಿ ಮಹತ್ವ ಪಡೆದುಕೊಂಡಿದೆ. ಶ್ರೀಗಳ ಜೊತೆಗೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ರಮೇಶ ಜಾರಕಿಹೊಳಿ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ತಮಗೆ ಮಂತ್ರಿ ಸ್ಥಾನ ದೊರಕಿಸಿಕೊಡುವಂತೆ ಶ್ರೀಗಳ ಮೂಲಕ ಬಿಜೆಪಿ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈಗೆ ಟೆನ್ಷನ್ ಕೊಡಲು ಮುಂಬೈಗೆ ಹೋದ ಜಾರಕಿಹೊಳಿಗೆ ಇಂಟರ್‌ನ್ಯಾಷನಲ್ ಟೆನ್ಷನ್

ಸುತ್ತೂರು ಶ್ರೀಗಳನ್ನು ಭೇಟಿಯಾಗುವ ಸಂಬಂಧ ಬೆಳಗ್ಗೆ ಗೋಕಾಕ ಪಟ್ಟಣ ಬಿಡಲಿರುವ ಅವರು, ಸಂಜೆ ಅಥವಾ ರಾತ್ರಿ ವೇಳೆಗೆ ಮತ್ತೆ ಗೋಕಾಕನಲ್ಲಿರುವ ತಮ್ಮ ಸ್ವಗೃಹಕ್ಕೆ ವಾಪಸ್‌ ಆಗಲಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗುವ ನಿರೀಕ್ಷೆ ಬಹಳ ಕಡಿಮೆ ಇದೆ ಎಂದು ಅವರ ರಾಜಕೀಯ ಆಪ್ತರು ತಿಳಿಸಿದ್ದಾರೆ.

ಈಗಾಗಲೇ ಗೋಕಾಕದ ಶೂನ್ಯ ಸಂಪಾದನ ಮಠದ ಮುರಘರಾಜೇಂದ್ರ ಸ್ವಾಮೀಜಿ ಅವರು ರಮೇಶ ಜಾರಕಿಹೊಳಿ ಅವರ ಪರವಾಗಿ ದನಿ ಎತ್ತಿದ್ದಾರೆ. ಅದರಂತೆಯೇ ಸುತ್ತೂರು ಶ್ರೀಗಳ ಮೇಲೆ ಒತ್ತಡ ತಂತ್ರ ಹೇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Follow Us:
Download App:
  • android
  • ios