ಮಂತ್ರಿಗಿರಿಗಾಗಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ರಮೇಶ್‌ ಜಾರಕಿಹೊಳಿ ಅವರ ಮುಂದಿನ ರಾಜಕೀಯ ನಡೆ ಇನ್ನೂ ನಿಗೂಢ ಪ್ರಸ್ತುತ ಸ್ವಕ್ಷೇತ್ರದಲ್ಲಿರುವ ರಮೇಶ್‌ ಅವರು ಸಹೋದರ ಲಖನ್‌ ಜಾರಕಿಹೊಳಿ ಅವರೊಂದಿಗೆ  ಗುಪ್ತ ಸಭೆ

 ಬೆಳಗಾವಿ (ಜು.04):  ಮಂತ್ರಿಗಿರಿಗಾಗಿ ಶತಾಯ ಗತಾಯ ಪ್ರಯತ್ನ ಮುಂದುವರಿಸಿರುವ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ಅವರ ಮುಂದಿನ ರಾಜಕೀಯ ನಡೆ ಇನ್ನೂ ನಿಗೂಢವಾಗಿದೆ. ಪ್ರಸ್ತುತ ಸ್ವಕ್ಷೇತ್ರದಲ್ಲಿರುವ ರಮೇಶ್‌ ಅವರು ಸಹೋದರ ಲಖನ್‌ ಜಾರಕಿಹೊಳಿ ಅವರೊಂದಿಗೆ ಶುಕ್ರವಾರ ರಾತ್ರಿ ಗುಪ್ತ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.

ಮುಂಬೈ, ದೆಹಲಿ, ಬೆಂಗಳೂರು ಪ್ರವಾಸದ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ವಾಸ್ತವವೇ ಬೇರೆ ಎಂಬ ಲೆಕ್ಕಾಚಾರವೂ ಇದೆ. ಅಲ್ಲದೆ, ಸಿಡಿ ಪ್ರಕರಣದ ಕಾನೂನು ಹೋರಾಟದ ಬಗ್ಗೆಯೂ ಮಹತ್ವದ ಮಾತುಕತೆ ನಡೆದಿದೆ. ಪಕ್ಷದಲ್ಲಿದ್ದು ಬೆನ್ನಿಗೆ ಚೂರಿ ಹಾಕಿದ ಮೂವರು ನಾಯಕರ ಬಗ್ಗೆ ಈಗ ಮಾತನಾಡುವುದು ಬೇಡ, ಸೂಕ್ತ ಸಮಯದಲ್ಲಿ ಉತ್ತರ ನೀಡಬಹುದು.

SIT ತನಿಖೆ ಮುಕ್ತಾಯ: ಜುಲೈ 5 ಕ್ಕೆ ಜಾರಕಿಹೊಳಿ ಸೀಡಿ ಕೇಸ್ ನಿರ್ಧಾರ ಸಾಧ್ಯತೆ .

 ಸದ್ಯ ಸಿಡಿ ಪ್ರಕರಣದಲ್ಲಿ ಆರೋಪ ಮುಕ್ತರಾಗಲು ವಿಳಂಬವಾಗದಂತೆ ನೋಡಿಕೊಳ್ಳಬೇಕಿದೆ. ಕ್ಲೀನ್‌ಚಿಟ್‌ ಸಿಕ್ಕ ಬಳಿಕ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ. ಒಂದು ವೇಳೆ ಮಂತ್ರಿ ಸ್ಥಾನ ನೀಡದಿದ್ದರೆ ಮುಂದಿನ ರಾಜಕೀಯ ನಡೆ ಬಗ್ಗೆ ಯೋಚಿಸೋಣ ಎಂಬ ನಿರ್ಧಾರಕ್ಕೆ ಸಹೋದರರು ಬಂದಿದ್ದಾರೆ ಎನ್ನಲಾಗಿದೆ. ಜತೆಗೆ, ಮುಂದಿನ ಎರಡು ಮೂರು ದಿನಗಳಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಯಾವ ವಿಚಾರವಾಗಿ ಮಾತನಾಡಬೇಕೆಂಬ ಕುರಿತಾಗಿಯೂ ಚರ್ಚೆ ನಡೆಸಿದ್ದಾರೆಂಬುವುದನ್ನು ಬಲ್ಲ ಮೂಲಗಳು ಖಚಿತಪಡಿಸಿವೆ.

ಬೇಗನೆ ಇತ್ಯರ್ಥಕ್ಕೆ ಒತ್ತಡ?: ಸಿಡಿ ಪ್ರಕರಣವನ್ನು ಬೇಗನೆ ಇತ್ಯರ್ಥಗೊಳಿಸಿ, ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರಲು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ 2ನೇ ಬಾರಿಗೆ ದೆಹಲಿಯಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಭೇಟಿಯಾಗಿದ್ದರು. ಈ ವೇಳೆ ಹೈಕಮಾಂಡ್‌ಗೆ ನಿಮ್ಮ ವಿಚಾರ ಗಮನಕ್ಕೆ ತಂದಿರುವುದಾಗಿ ಫಡ್ನವೀಸ್‌ ಕೂಡ ಭರವಸೆ ನೀಡಿದ್ದರು.