ಬೆಳಗಾವಿ(ನ.22): ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಇಗೇನಿದ್ರೂ ಬರೀ ಸಾಹುಕಾರರದ್ದೇ ಹವಾ. ಹೌದು, ರಮೇಶ್ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ. 

'ಮುಂದಿನ ಜಲಸಂಪನ್ಮೂಲ ಸಚಿವ 'ನಮ್ಮ ಸಾಹುಕಾರ' ಸಾಹೇಬರೇ'

ಈ ಬಾರಿ 'ಅಬ್ ಕೀ ಬಾರ್ ರಮೇಶ್ ಅಣ್ಣಾ ಜಾರಕಿಹೊಳಿ ಸರ್ಕಾರ್' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈಗಾಗಲೇ ಗೋಕಾಕ್ ಉಪಚುನಾವಣೆಯ ಅಖಾಡ ರಂಗೇರುತ್ತಿದೆ. ರಮೇಶ್ ಜಾರಕಿಹೊಳಿ ಅವರು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 

ಇಷ್ಟು ವರ್ಷ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅಧಿಕಾರ ನಡೆಸಿದ್ದರು. ಆದರೆ, ಬದಲಾದ ಕಾಲಘಟ್ಟದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಹೇಗಾದರೂ ಮಾಡಿ ರಮೇಶ್ ಸಾಹುಕಾರರನ್ನು ಗೆಲ್ಲಿಸಬೇಕು ಎಂಬ ಪಣ ತೊಟ್ಟಿದ್ದಾರೆ. 

ಈ ಹಿಂದೆ ರಮೇಶ್ ಜಾರಕಿಹೊಳಿ ಅವರೇ ನಮ್ಮ ಮುಂದಿನ ಜಲಸಂಪನ್ಮೂಲ ಸಚಿವ ಆಯ್ತು ಹಾಗೂ ಭಾವಿ ಉಪಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ 'ಅಬ್ ಕೀ ಬಾರ್ ರಮೇಶ್ ಅಣ್ಣಾ ಜಾರಕಿಹೊಳಿ ಸರ್ಕಾರ್' ಎಂದು ಬರೆದುಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.