ಕೊನೆಗೂ ತಮ್ಮ ನಿರ್ಧಾರ ಪ್ರಕಟಿಸಿದ ಬಿಜೆಪಿ ಟಿಕೆಟ್ ವಂಚಿತ ರಾಮದಾಸ್
ನನ್ನ ಉಸಿರಿರುವ ತನಕವೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಉಳಿಸಿಕೊಳ್ಳುವೆ. 30 ವರ್ಷಗಳ ಪಕ್ಷದೊಂದಿಗಿನ ನಂಟನ್ನು ಕಳೆದುಕೊಳ್ಳುವುದಿಲ್ಲ. ವಿಶ್ವನಾಯಕ ಪ್ರಧಾನಿ ಮೋದಿ ಅವರ ಪ್ರೀತಿ, ಮಮತೆ ಕಳೆದುಕೊಳ್ಳದೇ ಪಕ್ಷದಲ್ಲಿ ಉಳಿಯುವೆ ಎಂದು ಶಾಸಕ ಎಸ್.ಎ. ರಾಮದಾಸ್ ಘೋಷಿಸಿದರು.
ಮೈಸೂರು : ನನ್ನ ಉಸಿರಿರುವ ತನಕವೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಉಳಿಸಿಕೊಳ್ಳುವೆ. 30 ವರ್ಷಗಳ ಪಕ್ಷದೊಂದಿಗಿನ ನಂಟನ್ನು ಕಳೆದುಕೊಳ್ಳುವುದಿಲ್ಲ. ವಿಶ್ವನಾಯಕ ಪ್ರಧಾನಿ ಮೋದಿ ಅವರ ಪ್ರೀತಿ, ಮಮತೆ ಕಳೆದುಕೊಳ್ಳದೇ ಪಕ್ಷದಲ್ಲಿ ಉಳಿಯುವೆ ಎಂದು ಶಾಸಕ ಎಸ್.ಎ. ರಾಮದಾಸ್ ಘೋಷಿಸಿದರು.
ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದ ಅವರು ಕ್ಷೇತ್ರದ ಮುಖಂಡರು, ಕಾರ್ಯಕರ್ತರೊಂದಿಗೆ ಮಂಗಳವಾರ ಸರಣಿ ಸಭೆ ನಡೆಸಿದರು. ನಂತರ ಸಂಜೆ ಸುದ್ದಿಗೋಷ್ಠಿ ಮಾತನಾಡಿದ ಅವರು, ನಾನು ಪಕ್ಷೇತರವಾಗಿ ನಿಂತು ಗೆಲ್ಲಬಹುದು. ಆದರೆ, ವೈಯಕ್ತಿಕ ಹಿತ ಮುಖ್ಯನಾ? ದೇಶದ ಹಿತ ಮುಖ್ಯನಾ? ಎಂದು ನನ್ನನ್ನು ಕೇಳಿಕೊಂಡೆ. ದೇಶದ ಹಿತದೃಷ್ಟಿಯಿಂದ ನನ್ನ ನೋವನ್ನು ನುಂಗಿದ್ದೇನೆ. ಅನಿರೀಕ್ಷಿತ ಬೆಳವಣಿಗೆಯನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಚಾಮುಂಡೇಶ್ವರಿ ನಡೆಸಿದಂತೆ ಮುಂದುವರಿಯುವೆ ಎಂದರು.
ಇದು ನನ್ನ ಜೀವನದ ದೊಡ್ಡ ಸವಾಲು. ನನ್ನ ಜೀವನದ ಪ್ರಶ್ನೆ. ಆದರೆ, ಸಂಘ ಪರಿವಾರ ವೈಯಕ್ತಿಕ ಹಿತಕ್ಕೆ ಪಕ್ಷದ ಹಿತಕ್ಕೆ ಬದ್ಧನಾಗಿರಬೇಕೆಂದು ಕಲಿಸಿದೆ. ಅದನ್ನು ಮೀರುವ ಇಚ್ಛೆ ನನಗಿಲ್ಲ. ನನಗೆ ಶಾಸಕ ಸ್ಥಾನ ಮುಖ್ಯವಲ್ಲ. ದೇಶ ಮತ್ತು ಮೋದಿ ಮುಖ್ಯ ಎಂದು ಅವರು ಹೇಳಿದರು.
ಯಾಕೆ ಟಿಕೆಟ್ ತಪ್ಪಿತು? ಆ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ದೆಹಲಿ ಭೇಟಿ ವೇಳೆ ಪಕ್ಷ ಪಾಲಿಸಿ ಮಾಡಿದೆ. ಪಕ್ಷದ ನಿಯಮಗಳಿಗೆ ಬದ್ಧನಾಗಿರಬೇಕೆಂದು ಸುಮ್ಮನಾದೆ. ಈಗಲೂ ಪಕ್ಷದ ನಿರ್ಣಯಕ್ಕೆ ಬದ್ಧನಾಗಿರುವೆ. ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದರು.
ಮೊದಲಿಂದಲೂ ಪಕ್ಷವನ್ನು ತಾಯಿ ಎಂದೇ ಭಾವಿಸಿದ್ದೇನೆ. ಆದರೆ, ತಳಮಟ್ಟದಿಂದ ಕಟ್ಟಿದ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿಸಿದೆ. ಅಂದರೆ ಪಕ್ಷ ಯಾವುದೇ ಸ್ಥಿತಿಯಲ್ಲಿದ್ದರೂ ತಾಯಿ ಎಂದು ಒಪ್ಪಿಕೊಂಡಿದ್ದೇನೆ. ಪಕ್ಷದ ಆದೇಶಕ್ಕೂ ಬದ್ಧನಾಗಿದ್ದೇನೆ ಎಂದು ಅವರು ಹೇಳಿದರು.
ಜವಾಬ್ದಾರಿಯುತ ಜನಪ್ರತಿನಿಧಿಯಾಗಿ 30 ವರ್ಷಗಳಿಂದ ಶಾಸಕನಾಗಿ ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಠಿಣ ಪರಿಸ್ಥಿತಿ ಬಂದಾಗಲೂ ಎದೆಗುಂದದೆ ಎದುರಿಸಿದ್ದೇನೆ. ಕಾರ್ಯಕರ್ತರಿಗೆ ಚುನಾವಣೆ ಮುಖ್ಯ ವಿಷಯವಾಗುತ್ತದೆ. 30 ವರ್ಷಗಳ ರಾಜಕಾರಣದಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿ ಬಂದಿದ್ದೇನೆ ಎಂದರು.
ಈ ಬಾರಿ ಮಂತ್ರಿಯಾಗಿ ಅವಕಾಶ ಕೊಡದಿದ್ದರೂ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ನಂಬರ್ 1 ಸ್ಥಾನಕ್ಕೆ ತರುವಲ್ಲಿ ಶ್ರಮಿಸಿದ್ದೇನೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಬೆನ್ನು ತಟ್ಟಿದ್ದರು. ಕೇಂದ್ರ ಮತ್ತು ರಾಜ್ಯದ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಹಾಗಾಗಿ ಸಹಜವಾಗಿ ಟಿಕೆಟ್ ದೊರೆಯುವ ನಿರೀಕ್ಷೆ ಇತ್ತು. ಆದರೆ, ಪಕ್ಷ ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಬದಲು ಮಾಡಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಷೇತರವಾಗಿ ಸ್ಪರ್ಧೆಗೆ ಒತ್ತಾಯಿಸಿದರು. ಪಕ್ಷೇತರವಾಗಿ ಸ್ಪರ್ಧಿಸಿದ್ದರೂ 12 ಸಾವಿರ ಮತಗಳಿಂದ ಗೆದ್ದು ಬರಬಹುದಿತ್ತು. ನಾನು ಆರಂಭಿಸಿದ್ದ ಅನೇಕ ಕೆಲಸಗಳನ್ನು ಮುಂದುವರಿಸುವ ಆಸೆ ಇತ್ತು ಎಂದು ಅವರು ಹೇಳಿದರು.
ಶ್ರೀವತ್ಸ ನಾಮಪತ್ರ ಸಲ್ಲಿಕೆ ವೇಳೆ ಭಾಗಿ
ಪಕ್ಷದ ಅಭ್ಯರ್ಥಿ ಶ್ರೀವತ್ಸ ಅವರು ಏ.20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಭಾಗಿಯಾಗಲಿದ್ದೇನೆ ಎಂದ ಅವರು, ಅಭ್ಯರ್ಥಿಯ ಗೆಲುವನ್ನು ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದರು. ಚುನಾವಣಾ ವೀಕ್ಷಕ ರಾಜೀವ್, ಮುಖಂಡರಾದ ವಡಿವೇಲು, ಭಂಡಾರ್, ರವಿ, ಶಂಭು ಮೊದಲಾದವರು ಇದ್ದರು.