'ಮೋದಿ ಭೂತಾನ್‌ಗೆ ಹೋಗಿ ಮಕ್ಕಳ ಬೆನ್ನು ತಟ್ಟುವ ಬದಲು ಸಂತ್ರಸ್ತರ ಕಣ್ಣೀರೊರೆಸಲಿ'
ಪ್ರವಾಹದಿಂದ ಜನರು ಬದುಕು ಕಳೆದುಕೊಂಡು ಕಷ್ಟಪಡುತ್ತಿದ್ದರೆ, ಪ್ರಧಾನಿ ಭೂತಾನ್‌ನಲ್ಲಿ ಮಕ್ಕಳ ಬೆನ್ನು ತಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ರಮನಾಥ್ ರೈ ಹೇಳಿದ್ದಾರೆ. ಕುಂದಾಪುರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದ್ದಾರೆ.
ಉಡುಪಿ(ಆ.22): ಭೀಕರ ಪ್ರವಾಹ ಬಂದು ಜನರೆಲ್ಲರೂ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂತಾನ್ ಪ್ರವಾಸ ಕೈಗೊಂಡು ಭೂತಾನ್ ಮಕ್ಕಳಿಗೆ ಬೆನ್ನು ತಟ್ಟುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕಣ್ಣೀರೊರೆಸುವ ಕೆಲಸ ಮಾಡಬೇಕಿತ್ತು. ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನೆರೆ ಸಂತ್ರಸ್ತ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ರಮಾನಾಥ ವಾಗ್ದಾಳಿ ನಡೆಸಿದ್ದಾರೆ.
ಅವರು ಕುಂದಾಪುರ ತಾಲೂಕಿನಲ್ಲಿ ನೆರೆಯಿಂದ ಉಂಟಾದ ಹಾನಿಗಳ ಬಗ್ಗೆ ಕುಂದಾಪುರ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: 'ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್‌ಗೆ ಪ್ರಮೋಷನ್'
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ. ಜನತೆಯೊಂದಿಗೆ ಸಮಾಲೋಚನೆ ನಡೆಸಿ ವರದಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ಕೊಡಬೇಕು ಎಂದು ಸಮಿತಿಯನ್ನು ರಚನೆ ಮಾಡಿದೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಆಗಿರುವಂತಹ ನಷ್ಟಗಳ ಸಮಗ್ರ ವರದಿಯನ್ನು ಪಡೆದಿದ್ದೇವೆ. ಈ ವರದಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಲ್ಲಿಸಲಿದ್ದು, ರಾಜ್ಯ ಕಾಂಗ್ರೆಸ್ ಸಮಿತಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲಿದೆ ಎಂದರು.
ಸಿಎಂ ಭರವಸೆ ಈಡೇರಿಲ್ಲ:
ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಳ್ತಂಗಡಿಗೆ ಭೇಟಿ ನೀಡಿದಾಗ ನೆರೆಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿದ್ದರು. ಸಿಎಂ ಹೊರಡಿಸಿರುವ ಘೋಷಣೆಗಳು ಕೆಲವು ಕಡೆ ಇನ್ನೂ ಅನುಷ್ಠನಗೊಂಡಿಲ್ಲ. ತೊಂದರೆಗೊಳಗಾದವರಿಗೆ 10,000 ರು. ನೀಡುವಂತೆ ಸೂಚನೆ ನೀಡಿದ್ದಾರೆ. ಆದರೆ ನಮ್ಮ ಸಮಿತಿ ಭೇಟಿ ಕೊಟ್ಟಕಡೆಗಳಲ್ಲೆಲ್ಲಾ 2,000-3,000 ರು. ಮಾತ್ರ ಕೊಟ್ಟಿದ್ದಾರೆ. ಸರ್ಕಾರ ನೆರೆ ಸಂತ್ರಸ್ತರ ಕಡೆ ಗಮನ ಹರಿಸುತ್ತಿಲ್ಲ ಎಂದು ರಮನಾಥ ರೈ ಆರೋಪಿಸಿದರು.
ಕೇಂದ್ರ ಪರಿಹಾರ ಯಾವಾಗ?:
ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ರಾಜ್ಯದಲ್ಲಿ ಪ್ರವಾಹ ಬಂದು ಅಪಾರ ಹಾನಿ ಸಂಭವಿಸಿತ್ತು. ಆಗಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಸ್ವತಃ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಸರ್ಕಾರದ ಎರಡು ಸಾವಿರ ಕೋಟಿ ರು. ಮನವಿಗೆ ಸ್ಪಂದಿಸಿ ವಿಮಾನ ನಿಲ್ದಾಣದಲ್ಲೇ ಪರಿಹಾರ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿ ವೈಮಾಣಿಕ ಸಮಿಕ್ಷೆ ನಡೆಸಬೇಕಿತ್ತು. ಆದರೆ ಇದುವರೆಗೂ ಪ್ರಧಾನಿಯವರು ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮ್ ಅವರು ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಪರಿಹಾರ ವಿಚಾರದಲ್ಲಿ ಕೇಂದ್ರದಿಂದ ಹಣ ಬಿಡುಗಡೆ ಮಾಡುವ ಸೂಚನೆ ನೀಡಿಲ್ಲ. ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕೇಂದ್ರ ಸರ್ಕಾರ ಯಾವುದೇ ಪರಿಹಾರ ಘೋಷಣೆ ಮಾಡದಿರುವುದು ನೋವಿನ ವಿಚಾರ ಎಂದು ಮಾಜಿ ಸಚಿವ ರಮನಾಥ ರೈ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
370ನೇ ವಿಧಿ ರದ್ದತಿ ಹಿಂದೆ ಕರ್ನಾಟಕ ಶಕ್ತಿದೇವತೆ: ಎಷ್ಟು ಅಚ್ಚರಿಯೋ ಅಷ್ಟೇ ಸತ್ಯ
ಕೋಟ ಹಾಗೂ ಕುಂದಾಪುರ ಬ್ಲಾಕ್ ಸಮಿತಿಯ ವ್ಯಾಪ್ತಿಯಲ್ಲಿ ಸುಮಾರು 30 ಲಕ್ಷ ರು.ಗಳಷ್ಟುನೆರೆಯಿಂದಾಗಿ ಹಾನಿ ಸಂಭವಿಸಿದೆ. ಸರ್ಕಾರ ಘೋಷಣೆ ಮಾಡಿರುವಂತಹ ಪರಿಹಾರ ಹಣವನ್ನು ಕೂಡಲೇ ವಿತರಿಸಬೇಕು. ಶಾಶ್ವತವಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.
ಪರಿಹಾರ ಮೊತ್ತ ತಲುಪಿಸಿ:
ಒಂದೇ ಒಂದು ನೆರೆ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಘೋಷಣೆ ಮಾಡಿರುವ 10 ಸಾವಿರ ರು.ಗಳ ತಲುಪಿಲ್ಲ. ಮುಖ್ಯಮಂತ್ರಿಗಳ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.
ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಮಾಣಿಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆನಂದ ಕುಂದರ್, ಕೊಳ್ಕಬೈಲ್ ಕಿಶನ್ ಹೆಗ್ಡೆ, ದೇವಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ್ ಶೆಟ್ಟಿ, ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್‌ನ ಇಚ್ಛಿತಾರ್ಥ್ ಶೆಟ್ಟಿಇದ್ದರು.