ಎಂ. ಅ​ಫ್ರೋಜ್ ಖಾನ್‌

ರಾಮನಗರ [ಡಿ.09]:  ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ಆಯ್ಕೆಗೆ ಚುನಾ​ವಣೆ ದಿನಾಂಕ ನಿಗದಿಯಾಗಿದ್ದು, ಆಕಾಂಕ್ಷಿಗಳಲ್ಲಿ ಅಧಿಕಾರದ ಆಸೆ ಗರಿಗೆದರಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಚನ್ನಪಟ್ಟಣ ತಾಲೂಕಿನ ಹೊಂಗನೂರು ಕ್ಷೇತ್ರದ ಜಿಪಂ ಕಾಂಗ್ರೆಸ್‌ ಸದಸ್ಯೆ ಜಿ.ಡಿ. ವೀಣಾಚಂದ್ರು ತಮ್ಮ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾದ ಸ್ಥಾನಕ್ಕೆ ಡಿಸೆಂಬರ್‌ 17ರಂದು ಚುನಾವಣೆ ನಿಗದಿಯಾಗಿದೆ.

ಕಾಂಗ್ರೆಸ್‌ ವರಿಷ್ಠರ ಅಧಿಕಾರ ಸೂತ್ರದ ಒಪ್ಪಂದದ ಪ್ರಕಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ 10 ತಿಂಗಳ ಹಂಚಿಕೆ ಮಾಡ​ಲಾ​ಗಿದೆ. ಅದರಂತೆ ಜಿ.ಡಿ. ವೀಣಾಚಂದ್ರು ರಾಜೀನಾಮೆ ಸಲ್ಲಿಸುವ ಮೂಲಕ ಮತ್ತೊಬ್ಬರ ಆಯ್ಕೆಗೆ ಹಾದಿ ಸುಗಮ ಮಾಡಿಕೊಟ್ಟಿದ್ದಾರೆ.

ಜಿಲ್ಲಾ ಪಂಚಾಯ್ತಿ ಉಪಾಧ್ಯ​ಕ್ಷರ ಜವಾಬ್ದಾರಿ ವಹಿಸಿಕೊಳ್ಳಲು ಪ್ರಮುಖವಾಗಿ ಮೂವರು ಮಹಿಳಾ ಸದಸ್ಯೆಯರ ಹೆಸರುಗಳು ಕೇಳಿಬರುತ್ತಿದೆ. ಕನಕಪುರ ತಾಲೂಕಿನ ತುಂಗಣಿ ಜಿಪಂ ಸದಸ್ಯೆ ಸಿ.ವಿ. ಉಷಾರಾಣಿ, ಇದೇ ತಾಲೂಕಿನ ಕೋಡಿಹಳ್ಳಿ ಜಿಪಂ ಸದಸ್ಯೆ ಡಿ.ಎಚ್‌. ಜಯರತ್ನ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಗ್ಗಿಕುಪ್ಪೆ ಜಿಪಂ ಸದಸ್ಯೆ ನಾಗರತ್ನ ಚಂದ್ರೇಗೌಡ ಉಪಾಧ್ಯಕ್ಷ ಸ್ಥಾನ ಅಲಂಕರಿಸಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಜಿಪಂ ಅಧ್ಯಕ್ಷರ ಆಯ್ಕೆಯಂತೆ ಉಪಾಧ್ಯಕ್ಷರ ಆಯ್ಕೆಯೂ ಸಹ ಡಿ.ಕೆ. ಸಹೋದರರ ಅಣತಿಯಂತೆಯೇ ನಡೆಯಲಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಅವರ ಒಲವು ಯಾರ ಕಡೆಗಿದೆ ಎಂಬುದು ಇನ್ನೂ ನಿಗೂಢವಾಗಿದೆ.
ಬೈ ಎಲೆಕ್ಷನ್ ಫಸ್ಟ್ ರಿಸಲ್ಟ್ ಔಟ್: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಅರಳಿದ ಕಮಲ..

ಉಪಾಧ್ಯಕ್ಷರ ಆಯ್ಕೆಯ ಹಿಂದೆ ಹಲವಾರು ಲೆಕ್ಕಾಚಾರಗಳು ಅಡಕವಾಗಿದ್ದು, ಡಿಕೆಎಸ್‌ ಸಹೋದರರು ಯಾವ ರೀತಿಯ ಲೆಕ್ಕಾಚಾರ ಇಟ್ಟುಕೊಂಡು ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತಾರೆ ಎಂಬುದು ಅಷ್ಟೇ ಕುತೂಹಲಕಾರಿಯಾಗಿದೆ.

ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಂ.ಎನ್‌. ನಾಗರಾಜು ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರದವರಾದರೆ, ಉಪಾಧ್ಯಕ್ಷರಾಗಿದ್ದ ವೀಣಾಚಂದ್ರು ಚನ್ನಪಟ್ಟಣ ವಿಧಾ​ನ​ಸಭಾ ಕ್ಷೇತ್ರದವರು. ಇದೇ ಸೂತ್ರವನ್ನು ಕಾಂಗ್ರೆಸ್‌ ವರಿಷ್ಠರು ಮುಂದುವರೆಸಿದರೆ, ಉಪಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕನಕಪುರ ಕ್ಷೇತ್ರ ವ್ಯಾಪ್ತಿ​ಯ ತುಂಗಣಿ ಜಿಪಂ ಸದಸ್ಯೆ ಸಿ.ವಿ. ಉಷಾರಾಣಿ ಹಾಗೂ ಮತ್ತೊಬ್ಬ ಆಕಾಂಕ್ಷಿ ಕೋಡಿಹಳ್ಳಿ ಜಿಪಂ ಸದಸ್ಯೆ ಡಿ.ಎಚ್‌. ಜಯರತ್ನ ಅವ​ರಿಗೆ ನಿರಾಸೆಯಾಗಬಹುದು. ಏಕೆಂದರೆ, ಹಾಲಿ ಜಿಪಂ ಅಧ್ಯಕ್ಷ ಎಚ್‌. ಬಸಪ್ಪ ಕನಕಪುರ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯ ಹೊಸದುರ್ಗ ಜಿಪಂ ಸದಸ್ಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಒಂದೇ ವಿಧಾ​ನ​ಸಭಾ ಕ್ಷೇತ್ರ​ಕ್ಕೆ ಕೊಡಬಾರದು ಎಂಬುದು ಮುಖಂಡರ ಮನಸ್ಸಿನಲ್ಲಿದ್ದರೆ, ಇದು ಈ ಇಬ್ಬರು ಮಹಿಳಾ ಸದಸ್ಯರಿಗೆ ಮುಳುವಾಗಬಹುದು.

ಉಪ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿ ಅಪ್‌ಡೇಟ್‌ಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮತ್ತೊಂದೆಡೆ ಮಾಗಡಿ ವಿಧಾ​ನ​ಸಭಾ ಕ್ಷೇತ್ರದ ತಗ್ಗಿಕುಪ್ಪೆ ಜಿಪಂ ಸದಸ್ಯೆ ನಾಗರತ್ನ ಚಂದ್ರೇಗೌಡ ಕೂಡ ಜಿಪಂ ಉಪ ಸಾರಥಿಯಾಗಲು ಶತ ಪ್ರಯತ್ನ ಮಾಡುತ್ತಿದ್ದು, ಒಂದು ವೇಳೆ ವರಿಷ್ಠರ ಕೃಪಾ ಕಟಾಕ್ಷ ಇವರ ಕಡೆ ತಿರುಗಿದರೆ, ನಾಗರತ್ನ ಜಿಪಂ ಉಪಾಧ್ಯಕ್ಷ ಸ್ಥಾನ ಅಲಂಕರಿಸಬಹುದು.

ಆದರೆ, ನಾಗರತ್ನ ಚಂದ್ರೇಗೌಡ ತಾಂತ್ರಿಕವಾಗಿ ಜೆಡಿಎಸ್‌ ಸದಸ್ಯೆ. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಸೇರ್ಪಡೆಯಾದ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರನ್ನು ಅನುಸರಿಸಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಾಂತ್ರಿಕವಾಗಿ ಇನ್ನೂ ಜೆಡಿಎಸ್‌ ಸದಸ್ಯೆಯಾಗಿರಲು ನಾಗರತ್ನ ಅವರ ಆಯ್ಕೆಗೆ ಕಾಂಗ್ರೆಸ್‌ ವಲಯದಲ್ಲಿಯೇ ವಿರೋಧ ವ್ಯಕ್ತವಾಗುವುದನ್ನು ನಿರಾಕರಿಸುವಂತಿಲ್ಲ. ಜತೆಗೆ, ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸುವ ಸಲುವಾಗಿ ಬಲವಾದ ಒತ್ತಡ ಹೇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸಂಸದ ಡಿ.ಕೆ. ಸುರೇಶ್‌ ಶಿಫಾರಸ್ಸು ಮೇರೆಗೆ ನಾಗರತ್ನ ಅವರ ಪತಿ ಜೆ.ಪಿ. ಚಂದ್ರೇಗೌಡರನ್ನು ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಿರುವುದು ಜಿಪಂ ಉಪಾಧ್ಯಕ್ಷ ಸ್ಥಾನ ಅಲಂಕರಿಸುವ ನಾಗರತ್ನ ಪ್ರಯತ್ನಕ್ಕೆ ಅಡ್ಡಿಯಾಗಲು ಮತ್ತೊಂದು ಕಾರ​ಣ​ವಾಗಬಹುದು.

ಒಟ್ಟಾರೆ ಜಿಲ್ಲಾ ಪಂಚಾಯ್ತಿ ಉಪ ಸಾರಥಿ ಪಟ್ಟಅಲಂಕರಿಸಲು ಆಕಾಂಕ್ಷಿಗಳಾಗಿರುವ ಈ ಮೂವರು ಸದಸ್ಯೆಯರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗಿದ್ದು, ಜಿಲ್ಲಾ ಕಾಂಗ್ರೆಸ್‌ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ.