ನಾಯಕತ್ವ ವಿಚಾರದಲ್ಲಿರುವ ಗೊಂದಲವನ್ನು ಹೈಕಮಾಂಡ್‌ ಶೀಘ್ರ ಎಚ್ಚರಿಕೆಯಿಂದ ನಿವಾರಿಸಿದರೆ ಒಳ್ಳೆಯದು. ಗೊಂದಲದಿಂದ ಆಂತರಿಕವಾಗಿ ಪಕ್ಷಕ್ಕೆ ನಷ್ಟವಾಗಿದ್ದು, ಗೊಂದಲ ಬಗೆಹರಿಸಿದರೆ 2028ರಲ್ಲೂ ಮತ್ತೆ ಅಧಿಕಾರಕ್ಕೆ ಬರುವ ಅವಕಾಶ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಬೆಂಗಳೂರು (ಮೇ.08): ನಾಯಕತ್ವ ವಿಚಾರದಲ್ಲಿರುವ ಗೊಂದಲವನ್ನು ಹೈಕಮಾಂಡ್‌ ಶೀಘ್ರ ಎಚ್ಚರಿಕೆಯಿಂದ ನಿವಾರಿಸಿದರೆ ಒಳ್ಳೆಯದು. ಗೊಂದಲದಿಂದ ಆಂತರಿಕವಾಗಿ ಪಕ್ಷಕ್ಕೆ ನಷ್ಟವಾಗಿದ್ದು, ಗೊಂದಲ ಬಗೆಹರಿಸಿದರೆ 2028ರಲ್ಲೂ ಮತ್ತೆ ಅಧಿಕಾರಕ್ಕೆ ಬರುವ ಅವಕಾಶ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿ, ನಾಯಕತ್ವ ಕುರಿತು ಪಕ್ಷದೊಳಗಿನ ಗೊಂದಲ ನಿವಾರಿಸಬೇಕು. ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಬರಲಿದ್ದು, ಅಷ್ಟರೊಳಗೆ ಗೊಂದಲ ನಿವಾರಿಸಬೇಕು. ಕಳೆದ ಮೂರು ವರ್ಷಗಳಿಂದ ಸರ್ಕಾರ ಉತ್ತಮ ಕಾರ್ಯಕ್ರಮ ನೀಡಿದೆ. ನಾಯಕತ್ವ ಗೊಂದಲ ಮೂರು ವರ್ಷಗಳಿಂದ ಇದೆ. ಇದರಿಂದ ಆಂತರಿಕವಾಗಿ ನಮಗೆ ನಷ್ಟವಾಗಿದೆ. ಮುಂದಿನ ಎರಡು ವರ್ಷ ತಮ್ಮನ್ನೂ ಸೇರಿ ಎಲ್ಲರೂ ಮಾಧ್ಯಮಗಳ ಮುಂದೆ ಸುಮ್ಮನೆ ಮಾತನಾಡದೆ ಕೆಲಸ ಮಾಡಿಕೊಂಡು ಹೋಗಬೇಕು. ಈವರೆಗಿನ ಚುನಾವಣೆಯಲ್ಲಿ ಬೇರೆ ರಾಜ್ಯಗಳಲ್ಲಿನ ಫಲಿತಾಂಶ ನಮ್ಮ ಮುಂದಿದೆ. ಅದನ್ನು ಗಮನಿಸಬೇಕು ಎಂದರು.

ಸಚಿವ ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಸಚಿವ ಸಂಪುಟ ಪುನಾರಚನೆ ಆಗಬಹುದು. ಸರ್ಕಾರ ರಚನೆಯಾಗಿ ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆಯಾಗುತ್ತದೆ ಎಂದು ಕೆಲವರು ಭಾವಿಸಿದ್ದರು. ಸಚಿವರಾಗಬೇಕು ಎಂಬ ಆಸೆ ಇದ್ದವರು ಈಗಾಗಲೇ ದೆಹಲಿಗೂ ಹೋಗಿ ಬಂದಿದ್ದಾರೆ. ಇದರ ಬಗ್ಗೆ ಗೊಂದಲ ಹೆಚ್ಚುವುದಕ್ಕೂ ಮುನ್ನ ಹೈಕಮಾಂಡ್‌ ನಾಯಕರು ಸಿಎಂ, ಡಿಸಿಎಂ ಜತೆ ಮಾತಾಡಿ ನಿರ್ಧರಿಸಬೇಕು. ಅನೇಕ ಹಿರಿಯರಿದ್ದಾರೆ, ಅವರಿಗೂ ಅವಕಾಶ ಸಿಗಬೇಕು ಎಂದರು.

ಬಿಜೆಪಿಗೆ ನೈತಿಕತೆಯಿಲ್ಲ

ತಮಿಳುನಾಡಿನಲ್ಲಿ ಕಾಂಗ್ರೆಸ್‌ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ತಮಿಳುನಾಡಿನಲ್ಲಿ ಹಲವು ವರ್ಷಗಳಿಂದ ಡಿಎಂಕೆ ಜತೆಗೆ ನಾವಿದ್ದೇವು. ಈಗ ಸ್ಪಷ್ಟ ಬಹುಮತವಿಲ್ಲ ಎಂಬ ಕಾರಣಕ್ಕಾಗಿ ಎಐಸಿಸಿ ತೀರ್ಮಾನ ತೆಗೆದುಕೊಂಡಿದೆ. ಆದರೆ, ಬಿಜೆಪಿ ಯಾವ ನೈತಿಕತೆ ಇಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಈ ಹಿಂದೆ 17 ಶಾಸಕರನ್ನು ತೆಗೆದುಕೊಂಡು ಸರ್ಕಾರ ರಚಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ಬಿಜೆಪಿ ಮೋಸ ಮಾಡಿತು ಎಂದು ಹೇಳಿದರು.