Chikkamagaluru: ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ
- ವಿದ್ಯುತ್ ಖಾಸಗೀಕರಣ ಕೈಬಿಡಲು ಆಗ್ರಹ
- ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮೆರವಣಿಗೆ, ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ
ಚಿಕ್ಕಮಗಳೂರು (ಅ.11) : ವಿದ್ಯುತ್ ಕ್ಷೇತ್ರ ಖಾಸಗಿಕರಣ ಮಾಡುವ ವಿಚಾರ ಕೈ ಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಕಚೇರಿಯಿಂದ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಾ ಆಜಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿದರು.
ವಿದ್ಯುತ್ ಖಾಸಗೀಕರಣಕ್ಕೆ ವಿರೋಧ, ರೈತ ಸಂಘದಿಂದ ಪ್ರತಿಭಟನೆ
ಇದೇ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ರೈತ ವಿರೋಧಿ ಧೋರಣೆ ಭಾಗವಾಗಿ ಕೇಂದ್ರ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸಲು ಮುಂದಾಗಿದ್ದು ಇದರಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ರಾಜ್ಯದಲ್ಲಿ 70 ಸಾವಿರ ಕೊಳವೆ ಬಾವಿ ಮುಖಾಂತರ ಲಕ್ಷಾಂತರ ಎಕರೆ ಪ್ರದೇಶ ನಿರಾವರಿಗೊಳಪಡಿಸಿರುವ ರೈತರು ಆಹಾರ ಬೆಳೆಗಳು ಹಾಗೂ ವಾಣಿಜ್ಯ ಬೆಳೆ ಬೆಳೆದು ದೇಶದ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ವಿದ್ಯುತ್ ಕ್ಷೇತ್ರ ಖಾಸಗಿಕರಣದಿಂದ ವಿದ್ಯುತ್ ಬೆಲೆ ದುಬಾರಿಯಾಗುತ್ತದೆ ಎಂದರು.
ಅವೈಜ್ಞಾನಿಕ ಯೋಜನೆಯಿಂದ ಮೊದಲೆ ವಿದ್ಯುತ್ ಸಮಸ್ಯೆ, ಹವಮಾನ ವೈಪರೀತ್ಯದ ಸಮಸ್ಯೆಯಿಂದ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಹೈರಾಣಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಶೇ.60 ಭಾಗ ಉದ್ಯೋಗ ಸೃಷ್ಟಿಸುವ ಕೃಷಿ ಕ್ಷೇತ್ರವನ್ನು ಕಡೆಗಣಿಸಿದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎನ್ನುವ ಕನಿಷ್ಠ ಜ್ಞಾನವೂ ವಮ್ಮನ್ನಾಳುವ ಸರ್ಕಾರಗಳಿಗಿಲ್ಲ ಎಂಬುದು ವಿಪರ್ಯಾಸ ಎಂದರು.
ಎರಡು ಕೋಟಿಗೂ ಅಧಿಕ ರೈತರು ಅಡಕೆ ಬೆಳೆ ಅವಲಂಭಿಸಿ ಬದುಕು ಕಟ್ಟಿಕೊಂಡಿದ್ದಾರೆ. ನಮ್ಮ ರಾಜ್ಯವೊಂದರಲ್ಲೆ 15 ಜಿಲ್ಲೆಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಹಳದಿ ಎಲೆ, ಕೊಳೆರೋಗ, ಬೇರು ಹುಳುಗಳ ರೋಗಬಾಧೆಯಿಂದ 6 ರಿಂದ 7 ಸಾವಿರ ಎಕರೆ ಬೆಳೆ ನಶಿಸಿಹೋಗಿದ್ದು ಪರ್ಯಾಯ ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದಾರೆ. ರೋಗಗಳಿಗೆ ಔಷಧಿ ಕಂಡು ಹಿಡಿದು ಬೆಳೆಗಾರರ ಬೆನ್ನಿಗೆ ನಿಲ್ಲಬೇಕಾದ ಸರ್ಕಾರ ಅಡಕೆ ಆಮದು ಮಾಡಿಕೊಳ್ಳುವ ಮೂಲಕ ರೈತರ ಬೆನ್ನಿಗೆ ಚೂರಿ ಹಾಕುತ್ತಿವೆ. ಹಾಗಾಗಿ ಅಡಕೆ ಬೆಳೆಯುವ ಪ್ರದೇಶದ ಶಾಸಕರು, ಸಂಸದರು, ಕೇಂದ್ರ ಮಂತ್ರಿಗಳು ಕೂಡಲೆ ಗಮನಹರಿಸಿ ಅಡಕೆ ಆಮದು ತಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜು ಮಾತನಾಡಿ, ಕೇಂದ್ರ ಸರ್ಕಾರ ಭೂತಾನ್ ನಿಂದ 17,500 ಟನ್ ಅಡಕೆಯನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ 12 ರಿಂದ 14 ಲಕ್ಷ ಟನ್ ಅಡಕೆ ಬೆಳೆಯಲಾಗುತ್ತಿದ್ದು, ವಿಸ್ತರಣೆ ಕಾರಣದಿಂದ ಆರೇಳು ವರ್ಷಗಳಲ್ಲಿ 45 ರಿಂದ 50 ಲಕ್ಷ ಟನ್ ಬೆಳೆ ಬರುವ ನಿರೀಕ್ಷೆಯಿದೆ. ದೇಶೀಯವಾಗಿ ಬೆಳೆಯುತ್ತಿರುವ ಅಡಕೆ ದೇಶಕ್ಕೆ ಬಳಕೆಯಾಗಿ ರಫ್ತು ಮಾಡುವಷ್ಟಿದೆ. ಆದರೂ ಸುಂಕ ರಹಿತ ಅಡಕೆ ಆಮದು ಮಾಡಿಕೊಳ್ಳುತ್ತಿರುವುದು ಅಡಕೆ ಬೆಳೆಗಾರರರಿಗೆ ಮರಣ ಶಾಸನವಾಗಲಿದೆ ಎಂದು ಆರೋಪಿಸಿದರು.
ವಿದ್ಯುತ್ ಖಾಸಗೀಕರಣಕ್ಕೆ ಅನ್ನದಾತರ ಆಕ್ರೋಶ
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಡಿ. ಮಹೇಶ್, ವಿನಾಯಕ ಮಳೂರು ದಿಣ್ಣೆ, ಚನ್ನಬಸಪ್ಪ, ಕೆ. ಬಿಲೋಕೇಶ್, ಎಂ.ಮಂಜುನಾಥ್, ಕೆ.ಕೆ. ಕೃಷ್ಣೇಗೌಡ, ಚಂದ್ರಶೇಖರ್, ಕೆ.ಟಿ. ಆನಂದ್, ಡಿ. ಪುಟ್ಟಸ್ವಾಮಿಗೌಡ ಹಾಗೂ ರೈತರು ಪಾಲ್ಗೊಂಡಿದ್ದರು.