ಸಾರಿಗೆ ನೌಕರರ ದಾರಿ ತಪ್ಪಿಸಲಾಗುತ್ತಿದೆ: ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ತೇಲ್ಕೂರ್
ಕೊರೋನಾ ಆರ್ಥಿಕ ಮುಗ್ಗಟ್ಟಿದೆ, ಉಪ ಚುನಾವಣೆ ನೀತಿ ಸಂಹಿತೆ ಇದೆ. ಮೇ 5ರ ವರೆಗೂ ತಾಳ್ಮೆಯಿಂದ ಇರುವಂತೆ ಕೋರಿದರೂ ನೌಕರರು ಹಲವರ ಮಾತು ಕೇಳಿ ಮಷ್ಕರಕ್ಕೆ ಮುಂದಾಗಿರೋದು ದುರದೃಷ್ಟಕರ ಎಂದ ರಾಜಕುಮಾರ್ ಪಾಟೀಲ್ ತೇಲ್ಕೂರ್
ಕಲಬುರಗಿ(ಏ.08): ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಇತರೆ ಬೇಡಿಕೆಗಳ ಬಗ್ಗೆ ಸರ್ಕಾರ ತುಂಬಾ ಸಹಾನುಭೂತಿಯಿಂದ ಪರಿಶೀಲನೆ ಮಾಡಿದೆ. ಮಾತುಕತೆಗೂ ಸಿದ್ಧವಿದೆ. 10 ಬೇಡಿಕೆಗಳಲ್ಲಿ ಅದಾಗಲೇ 8 ಬೇಡಿಕೆ ಈಡೇರಿಸಲಾಗಿದೆ. 6ನೇ ವೇತನ ಆಯೋಗದಂತೆ ವೇತನ ಅವ್ನಯ ಕಷ್ಟವಾದರೂ ಶೇ.8 ರಷ್ಟುವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ. ಹೀಗಿದ್ದರೂ ನೌಕರರಿಗೆ ಯಾರೋ ದಾರಿ ತಪ್ಪಿಸಿ ಮುಷ್ಕರಕ್ಕೆ ಇಳಿಸುತ್ತಿದ್ದಾರೆಂದು ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ನೇರವಾಗಿ ಕೋಡಿಹಳ್ಳಿ ಸೇರಿದಂತೆ ಯಾರ ಹೆಸರನ್ನು ಪ್ರಸ್ತಾಪಿಸದೆ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲದವರು ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಇಲಾಖೆಯ ಬಗ್ಗೆ ಮಾಹಿತಿ ಇರುವವರಿಗೆ ಹೋರಾಟದ ನೇತೃತ್ವ ವಹಿಸಿದರೆ ಒಳ್ಳೆಯದು ಎಂದರು. ಉತ್ಸಾಹದಿಂದ ಸಾರ್ವಜನಿಕರಿಗೆ ಸೇವೆ ನೀಡಲು ಬರುವ ಸಾರಿಗೆ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ನಡೆಸಿದರೆ, ಸಾರಿಗೆ ನಿಗಮಗಳ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡಿದರೆ, ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.
ಕೊರೋನಾ ಸಂಕಷ್ಟದಲ್ಲಿ ಮುಷ್ಕರ ಸಲ್ಲದು: ಸಚಿವ ಸುರೇಶ ಕುಮಾರ
ಶೇ.80ರಷ್ಟು ಸಿಬ್ಬಂದಿ ಕೆಲಸಕ್ಕೆ ಸಿದ್ಧರಿದ್ದಾರೆ. ಆದರೆ ಅವರಿಗೆ ಹೆದರಿಸಲಾಗುತ್ತಿದೆ. ಇಂತಹ ಜನ ವಿರೋಧಿ ಕೆಲಸ ಹೋರಾಟದ ನೇತೃತ್ವ ವಹಿಸಿರುವವರು ಕೆಲವರು ಮಾಡುತ್ತಿದ್ದಾರೆ. ಇದನ್ನೆಲ್ಲ ಸರಕಾರ ಗಮನಿಸುತ್ತಿದೆ ಎಂದು ತೇಲ್ಕೂರ್ ಹೇಳಿದರು. ಸಿಎಂ ಯಡಿಯೂರಪ್ಪನವರು, ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ನೌಕರರ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಪರಿಶೀಲನೆ ನಡೆಸುವ, ಮಾತುಕತೆ ಮಾಡುವ ಇರಾದೆ ಹೊಂದಿದ್ದರೂ ಹಲವರು ಇದನ್ನು ತಪ್ಪಿಸುತ್ತಿದ್ದಾರೆ. ನೌಕರರಿಗೆ ಕೆರಳಿಸಿ ಮುಷ್ಕರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆಂದರು.
ಕೊರೋನಾ ಆರ್ಥಿಕ ಮುಗ್ಗಟ್ಟಿದೆ, ಉಪ ಚುನಾವಣೆ ನೀತಿ ಸಂಹಿತೆ ಇದೆ. ಮೇ 5ರ ವರೆಗೂ ತಾಳ್ಮೆಯಿಂದ ಇರುವಂತೆ ಕೋರಿದರೂ ನೌಕರರು ಹಲವರ ಮಾತು ಕೇಳಿ ಮಷ್ಕರಕ್ಕೆ ಮುಂದಾಗಿರೋದು ದುರದೃಷ್ಟಕರ ಎಂದರು.