ವಿಜಯಪುರ(ಏ.08): ಕೊರೋನಾ ಎರಡನೆ ಅಲೆ ಹಿನ್ನೆಲೆಯಲ್ಲಿ ರಾಜ್ಯ ದೊಡ್ಡ ಸವಾಲು ಎದುರಿಸುತ್ತಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮುಷ್ಕರ ಮಾಡುವುದು ಹೋರಾಟಗಾರರ ಲಕ್ಷಣವಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ ಈಗಾಗಲೇ 8 ಬೇಡಿಕೆಗಳನ್ನು ಈಡೇರಿಸಿದೆ. ವೇತನ ಹೆಚ್ಚಳಕ್ಕೂ ಭರವಸೆ ನೀಡಿದೆ. ಆದರೂ ರಾಜ್ಯ ದೊಡ್ಡ ಸವಾಲು ಎದುರಿಸುವ ಈ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ಕೊರೋನಾ ನಡುವೆ ಜನರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸುವುದು ನಾಯಕನ ಲಕ್ಷಣವಲ್ಲ ಎಂದು ತಿಳಿಸಿದ್ದಾರೆ.

ವಿಜಯಪುರ: ಸ್ವಂತ ಕಾರಿನಲ್ಲಿ ಬಾಣಂತಿಯನ್ನು ಮನೆಗೆ ತಲುಪಿಸಿದ ಜಿಪಂ ಅಧ್ಯಕ್ಷೆ

ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸಾರಿಗೆ ನೌಕರರು ತಕ್ಷಣ ಮುಷ್ಕರ ವಾಪಸ್‌ ಪಡೆಯಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿವೆ. ಆದರೆ ಹೋರಾಟ ಯಾವಾಗ ಮಾಡಬೇಕು ಎಂಬುವುದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.