ಬೆಟ್ಟದಪುರ ರಾಗಿ ಖರೀದಿ ಕೇಂದ್ರಕ್ಕೆ ರೈತ ಸಂಘ ಮುತ್ತಿಗೆ ಹಾಕಿ ಖರೀದಿ ಕೇಂದ್ರದಲ್ಲಿ ಹಲವು ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ತಹಸೀಲ್ದಾರ್‌ ಕುಂಜಿ ಅಹಮದ್‌ಗೆ ಮನವಿ ಸಲ್ಲಿಸಿದರು.

 ಬೆಟ್ಟದಪುರ : ಬೆಟ್ಟದಪುರ ರಾಗಿ ಖರೀದಿ ಕೇಂದ್ರಕ್ಕೆ ರೈತ ಸಂಘ ಮುತ್ತಿಗೆ ಹಾಕಿ ಖರೀದಿ ಕೇಂದ್ರದಲ್ಲಿ ಹಲವು ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ತಹಸೀಲ್ದಾರ್‌ ಕುಂಜಿ ಅಹಮದ್‌ಗೆ ಮನವಿ ಸಲ್ಲಿಸಿದರು.

ರೈತರಿಂದ ಗುತ್ತಿಗೆ ಪಡೆದ ಗುತ್ತಿಗೆದಾರ ಹಮಾಲಿಗಳಿಗೆ ಕೂಲಿ ಹಣ ನೀಡದೆ ಅನ್ಯಾಯ ಮಾಡುತ್ತಿದ್ದು, ಹಮಾಲಿಗಳು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿ ರೈತರಿಗೆ ತೊಂದರೆಯಾಗುತ್ತಿದೆ, ಆದ್ದರಿಂದ ತಕ್ಷಣವೇ ರೈತರಿಂದ ಯಾವುದೇ ಹಣ ಪಡೆಯದಂತೆ ಸುತ್ತೋಲೆ ಹಾಕಬೇಕು ಎಂದು ಹಾಗೂ ತೂಕದ ಯಂತ್ರದಲ್ಲಿ ಏರುಪೇರು ಆಗುತ್ತಿದ್ದು, ಅದನ್ನು ಸರಿಪಡಿಸಬೇಕು ಹಾಗೂ ದಿನಾಂಕ ನಿಗದಿಪಡಿಸಿದ ರೈತರು ಮಾತ್ರ ಮಾರುಕಟ್ಟೆಗೆ ತರಬೇಕು, ಬೇರೆ ಬಂದಂತಹ ರೈತರ ಗಾಡಿಗಳನ್ನು ಪೊಲೀಸರ ಮೂಲಕ ಹೊರ ಹಾಕಬೇಕೆಂದು ರೈತರು ಮನವಿ ಮಾಡಿದರು.

ತಹಸೀಲ್ದಾರ್‌ ಕುಂಜಿ ಅಹಮದ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಖರೀದಿ ಕೇಂದ್ರದಲ್ಲಿ ದರಪಟ್ಟಿಹಾಗೂ ನೋಂದಾಯಿತ ರೈತರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಹಾಗೂ ರೈತರು ರಾಗಿಯನ್ನು ಮಾರುಕಟ್ಟೆಗೆ ತಂದು ಚೀಲಕ್ಕೆ ಸುರಿದರೆ ಯಾವುದೇ ಹಣ ವಸೂಲು ಮಾಡಬಾರದು ಅಂತಹ ಘಟನೆ ಕಂಡು ಬಂದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ… ಮೊಕದ್ದಮೆ ದಾಖಲಿಸಿ ಎಂದು ತಿಳಿಸಿದರು.

ರೈತರಿಗೆ ಕುಡಿಯುವ ನೀರು ಶೌಚಾಲಯವನ್ನು ಸುಸ್ಥುತಿಯಲ್ಲಿ ಪ್ರತಿದಿನ ಸ್ವಚ್ಛ ಮಾಡುವಂತೆ ಆದೇಶಿಸಿದರು, ಅಲ್ಲದೆ ರಾಗಿ ಖರೀದಿ ಕೇಂದ್ರಕ್ಕೆ ಬಂದ ರೈತರು ರಾಗಿಯನ್ನು ಚೀಲಕ್ಕೆ ತಾವೇ ತುಂಬಿಕೊಟ್ಟರೆ ಯಾವುದೇ ಹಣ ವಸೂಲು ಮಾಡದಂತೆ ಗುತ್ತಿಗೆದಾರನಿಗೆ ಸೂಚಿಸಿದರು.

ರೈತ ಮುಖಂಡ ಬಿ.ಜೆ. ದೇವರಾಜು, ಪ್ರಕಾಶ್‌ರಾಜ…, ತಾಲೂಕು ಅಧ್ಯಕ್ಷ ಸೋಮೇಗೌಡ, ಆನಂದ್‌, ಹರೀಶ್‌ರಾಜ ಅರಸ್‌, ಮುಖಂಡರಾದ ಶಿವಣ್ಣ ಶೆಟ್ಟಿ, ದಶರಥ, ಗುರುರಾಜ…, ಶಿವರುದ್ರ, ಗದ್ದಿಗೌಡ, ತಮ್ಮೇಗೌಡ, ಕರಿಗೌಡ, ಪ್ರಕಾಶ್‌, ಆಹಾರ ಇಲಾಖೆಯ ಸಣ್ಣಸ್ವಾಮಿ, ಮಂಜುನಾಥ್‌, ರಾಗಿ ಖರೀದಿ ಕೇಂದ್ರದ ಅಧಿಕಾರಿ ಸೋಮಯ್ಯ, ಅಕ್ಷಯ…, ಪ್ರಕಾಶ್‌ ಹಾಗೂ ರೈತರು ಇದ್ದರು.

ಬೆಳೆ ವಿಮೆ ರಾಗಿ ಖರೀದಿಗೆ ರೈತರ ಆಗ್ರಹ

ಕೊರಟಗೆರೆ (ಜ. 18): ರೈತರ ಬೆಳೆಯ ರಕ್ಷಣೆಗೆ ಬೆಳೆ ವಿಮೆ ಮತ್ತು ಕೃಷಿ ಬೆಳೆ ವಹಿವಾಟಿಗೆ ರಾಗಿ ಖರೀದಿ ಕೇಂದ್ರ ಅವಶ್ಯಕತೆ ಇದೆ. ಕೊರಟಗೆರೆ ಕ್ಷೇತ್ರದ ರೈತರ ಮನವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಕೊರಟಗೆರೆಯಲ್ಲಿ ರೈತಚೈತನ್ಯ ಮತ್ತು ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು.

ಕೊರಟಗೆರೆ ಪಟ್ಟಣದ ಲಕ್ಷ್ಮೇನರಸಿಂಹ ಕಲ್ಯಾಣ ಮಂಟಪದಲ್ಲಿ ಜಾತ್ಯತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ರೈತನಾಯಕ ಕುಮಾರಸ್ವಾಮಿ ಜೊತೆ ರೈತಚೈತನ್ಯ ಮತ್ತು ರೈತ ಸಂಕ್ರಾಂತಿಯ ವಿಡೀಯೊ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕದ 224 ಕ್ಷೇತ್ರದ ರೈತರ ಸಂಕಷ್ಟವನ್ನು ತಿಳಿಯುವ ಉದ್ದೇಶದಿಂದ ರೈತ ಸಂಕ್ರಾಂತಿ ಸಂವಾದ ಕಾರ್ಯಕ್ರಮ ನಡೆದಿದೆ. ರೈತನ ಪರವಾಗಿ ಸದಾ ಚಿಂತಿಸುವ ರೈತನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಕೊರಟಗೆರೆಯ ರೈತರು ಮುಸುಕಿನ ಜೋಳ ಮತ್ತು ರಾಗಿಬೆಳೆಯ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿದರು.

ತೋವಿನಕೆರೆ ರೈತ ಭೀಮರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಮಳೆಯಿಂದ ರಾಗಿ ಬೆಳೆಯು ಕೊಚ್ಚಿಹೋಗಿದೆ. ರಾಗಿ ಬೆಳೆಗೆ ಸರ್ಕಾರ ಬೆಂಬಲ ಬೆಲೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಗಿ ಮಾರಾಟಕ್ಕೆ ಕೊರಟಗೆರೆ ರೈತರು ಅಲೆದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೊರಟಗೆರೆ ಕ್ಷೇತ್ರಕ್ಕೆ ರಾಗಿ ಖರೀದಿ ಕೇಂದ್ರದ ಅವಶ್ಯಕತೆಯು ಇದೆ. ಸರ್ಕಾರ ರಾಗಿ ಬೆಳೆಗೆ ಬೆಂಬಲ ಬೆಲೆಯ ಜೊತೆ ಆರ್ಥಿಕವಾಗಿ ಅನುಕೂಲ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.

ಪುರವಾರ ರೈತ ಗೋವರ್ಧನ್‌ ಮಾತನಾಡಿ, ಕೃಷಿ ಬೆಳೆಗೆ ಸರ್ಕಾರ ಬೆಳೆವಿಮೆ ಕಟ್ಟಿಸಿಕೊಂಡಿದೆ. ಮಳೆರಾಯನ ಆರ್ಭಟಕ್ಕೆ ಕೃಷಿಬೆಳೆಯು ಸಂಪೂರ್ಣ ನಷ್ಟವಾಗಿದೆ. ಬೆಳೆವಿಮೆ ಯೋಜನೆಯಿಂದ ರೈತರಿಗೆ ಅನುಕೂಲ ಆಗುತ್ತಿಲ್ಲ. ಕೊರಟಗೆರೆಯ ರೈತರಿಗೆ ಲಕ್ಷಾಂತರ ರು.ಬೆಳೆನಷ್ಟವಾದರೂ ಬೆಳೆವಿಮೆಯ ಹಣವೇ ಬರುತ್ತಿಲ್ಲ. ರೈತರು ಯಾವ ಇಲಾಖೆಗೆ ಕೇಳಬೇಕು ಎಂಬುದೇ ಗೊತ್ತಿಲ್ಲ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಜೆಡಿಎಸ್‌ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್‌, ವಕ್ತಾರ ಲಕ್ಷ್ಮೇಶ್‌, ಜಿಪಂ ಸದಸ್ಯ ಶಿವರಾಮಯ್ಯ, ಮುಖಂಡರಾದ ಸಿದ್ದಮಲ್ಲಪ್ಪ, ಕಾಮರಾಜು, ವೀರಕ್ಯಾತರಾಯ, ಲಕ್ಷ್ಮೇಕಾಂತ, ರವಿವರ್ಮ, ಸಾಕಣ್ಣ, ನಾಗರಾಜು, ರಮೇಶ್‌, ಸತೀಶ್‌, ಲಕ್ಷ್ಮೇನರಸಪ್ಪ ಸೇರಿದಂತೆ ಇತರರು ಇದ್ದರು.