ತೆಂಗು ಮತ್ತು ಕೊಬ್ಬರಿ ದರ ಕುಸಿದಿದ್ದು, ಇದರ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ದನಿ ಎತ್ತುವಂತೆ ಒತ್ತಾಯಿಸಿ ಆಗಸ್ಟ್‌ 05ರಂದು ತೆಂಗು ಬೆಳೆಯುವ ಎಲ್ಲಾ 15 ಜಿಲ್ಲೆಗಳ ಲೋಕಸಭಾ ಸದಸ್ಯರ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಸಂಘದ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

 ತುಮಕೂರು : ತೆಂಗು ಮತ್ತು ಕೊಬ್ಬರಿ ದರ ಕುಸಿದಿದ್ದು, ಇದರ ಬಗ್ಗೆ ಸಂಸತ್ತಿನ ಅಧಿವೇಶನದಲ್ಲಿ ದನಿ ಎತ್ತುವಂತೆ ಒತ್ತಾಯಿಸಿ ಆಗಸ್ಟ್‌ 05ರಂದು ತೆಂಗು ಬೆಳೆಯುವ ಎಲ್ಲಾ 15 ಜಿಲ್ಲೆಗಳ ಲೋಕಸಭಾ ಸದಸ್ಯರ ಮನೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಸಂಘದ ರಾಜ್ಯ ಸಂಚಾಲಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ತೆಂಗು ಬೆಳೆಗಾರರ ಸೀಮೆ ಕರ್ನಾಟಕ ಜಂಟಿಯಾಗಿ ಸಂಯುಕ್ತ ಹೋರಾಟ ಕರ್ನಾಟಕದ ತುಮಕೂರು ಜಿಲ್ಲಾ ಸಂಚಾಲಕ ಸಿ.ಯತಿರಾಜು ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ತೆಂಗು ಮತ್ತು ಕೊಬ್ಬರಿ ಧಾರಣೆ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳ ಕುರಿತ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಂದು ತೆಂಗು ಮತ್ತು ಕೊಬ್ಬರಿಗೆ ವೈಜ್ಞಾನಿಕ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಬೆಂಬಲ ಬೆಲೆ ನಿಗದಿಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಲಾಗುವುದು. ತೆಂಗು ಮತ್ತು ಕೊಬ್ಬರಿ ವೈಜ್ಞಾನಿಕ ಬೆಂಬಲ ಬೆಲೆಯ ಮುಂದುವರೆದ ಭಾಗವಾಗಿ ಆಗಸ್ಟ್‌ 15ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಅಕ್ಟೋಬರ್‌ 02ರ ಗಾಂಧಿ ಜಯಂತಿಯಂದು ತಿಪಟೂರಿನಿಂದ ಬೆಂಗಳೂರಿಗೆ 15 ಜಿಲ್ಲೆಗಳ ಜನರು ಪಾದಯಾತ್ರೆ ಆರಂಭಿಸಲಿದ್ದಾರೆ. ಅಕ್ಟೋಬರ್‌ 07ರಂದು ಪಾದೆಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್‌ ಸಮಾವೇಶದೊಂದಿಗೆ ಮುಕ್ತಾಯಗೊಳ್ಳಲಿದ್ದು, ಈ ಸಮಾವೇಶಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರತಿನಿಧಿನಿಗಳನ್ನು ಕರೆಯಿಸಿ ಮನವಿ ಸಲ್ಲಿಸಲಾಗುವುದು ಎಂದು ವಿವರ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ತದ್ವಿರುದ್ಧ ನೀತಿಗಳಿಂದ ರೈತರು, ಅದರಲ್ಲಿಯೂ ತೆಂಗು ಮತ್ತು ಕೊಬ್ಬರಿ ಬೆಳೆಗಾರರು ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ಶ್ರೀಲಂಕಾ, ಮಲೇಶಿಯಾ ಇನ್ನಿತರ ದೇಶಗಳಿಂದ ಶೂನ್ಯ ತೆರಿಗೆಯಲ್ಲಿ ತೆಂಗು ಮತ್ತು ಅದರ ಉಪ ಉತ್ಪನ್ನಗಳು ರಫ್ತಾಗುತ್ತಿರುವುದರ ಪರಿಣಾಮ, ಭಾರತದಲ್ಲಿ ಬೆಳೆಯುವ ತೆಂಗು ಮತ್ತು ಕೊಬ್ಬರಿಗೆ ಬೆಲೆ ಇಲ್ಲದಂತಾಗಿದೆ. ಕಳೆದ ವರ್ಷ ಈ ವೇಳೆಗೆ 19000 ರು. ಕ್ವಿಂಟಲ್‌ಗೆ ಇದ್ದ ಬೆಲೆ, ಈಗ 7500ಕ್ಕೆ ಕುಸಿದಿರುವುದು ದುರಂತವೇ ಸರಿ ಎಂದರು.

ತೋಟಗಾರಿಕಾ ಇಲಾಖೆ ನೀಡಿದ ವರದಿಯಲ್ಲಿ ಒಂದು ಕ್ವಿಂಟಲ್‌ ಕೊಬ್ಬರಿ ಬೆಳೆಯಲು 16730 ರು. ಇದ್ದರೂ, ಕೇಂದ್ರ ಸರ್ಕಾರ 11750 ರು. ಗಳ ಬೆಂಬಲ ಬೆಲೆ ಘೋಷಿಸಿ ಕೈತೊಳೆದುಕೊಂಡಿದೆ. ಇದರ ಜೊತೆಗೆ ರಾಜ್ಯ ಸರ್ಕಾರ 1250 ರು. ಗಳ ಪೋ›ತ್ಸಾಹ ದನ ನೀಡಿದೆ. ಇವೆರಡು ಸೇರಿದರೂ ಉತ್ಪಾದನಾ ವೆಚ್ಚದಷ್ಟುಬೆಲೆ ಸಿಗುತ್ತಿಲ್ಲ. ಹಾಗಾಗಿ ತೆಂಗು ಮತ್ತು ಕೊಬ್ಬರಿ ದರದ ಸಮಸ್ಯೆಗೆ ತಾತ್ಕಾಲಿಕ ಮತ್ತು ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಕೋರ್‌ ಕಮಿಟಿ ಮತ್ತು ಸಮನ್ವಯ ಸಮಿತಿಗಳು ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸಲಿದೆ. ಇದರ ಅಂಗವಾಗಿ ಆಗಸ್ಟ್‌ 25ರಂದು ಮತ್ತೊಂದು ಪೂರ್ವಭಾವಿ ಸಭೆಯನ್ನು ತಿಪಟೂರಿನಲ್ಲಿ ನಡೆಸಲಾಗುವುದು ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಕೃಷಿ ಕೂಲಿ ಕಾರ್ಮಿಕರ ಸಂಘದ ಸ್ವಾಮಿ, ಎಂ.ಶಶಿಧರ್‌, ಸಿಪಿಐನ ಗಿರೀಶ್‌, ಜಿ.ಗೋಪಾಲ ಪಾಪೇಗೌಡ, ಸಿದ್ದವೀರಪ್ಪ, ಕೆ.ಪಿ.ಆರ್‌.ಎಸ್‌.ನ ಎಚ್‌.ಆರ್‌.ನವೀನ್‌ಕುಮಾರ್‌, ಬಿ.ಉಮೇಶ್‌, ಜಿ.ಸಿ.ಶಂಕರಪ್ಪ, ಲಕ್ಷ್ಮಣಗೌಡ, ಮೂಡ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

‘ತೆಂಗು ಉತ್ಪನ್ನ ಆಮದಿಗೆ ಕಡಿವಾಣ ಹಾಕಿ’

ತೆಂಗು ಮತ್ತು ಕೊಬ್ಬರಿ ಬೆಲೆ ಹೆಚ್ಚಳಕ್ಕೆ ತಾತ್ಕಾಲಿಕ ಪರಿಹಾರವಾಗಿ ಕೇಂದ್ರ ಸರ್ಕಾರ ಕೂಡಲೇ ವಿದೇಶಗಳಿಂದ ಶೂನ್ಯ ತೆರಿಗೆ ಅಡಿಯಲ್ಲಿ ಆಮದಾಗುತ್ತಿರುವ ತೆಂಗು ಉತ್ಪನ್ನಗಳು ಹಾಗೂ ತಾಳೆ ಮತ್ತು ಇನ್ನಿತರ ಖಾದ್ಯ ತೈಲಗಳಿಗೆ ಕಡಿವಾಣ ಹಾಕಬೇಕು. ದೀರ್ಘಾವಧಿ ಪರಿಹಾರವಾಗಿ ತೆಂಗಿಗೆ ಬರುವ ರೋಗಗಳ ನಿಯಂತ್ರಣ, ಇಳುವರಿ ಕುಸಿತ ತಡೆಯಲು ಕ್ರಮ ಕೈಗೊಳ್ಳುವುದರ ಜೊತೆಗೆ, ನೀರಾ ಮುಕ್ತ ಮಾರಾಟಕ್ಕೆ ಅವಕಾಶ, ಕೊಬ್ಬರಿಗೆ 11750ರ ಬದಲು 20000 ರು. ಬೆಂಬಲ ಬೆಲೆ ಕೇಂದ್ರ ಘೋಷಿಸಬೇಕು. ಹಾಗೆಯೇ ರಾಜ್ಯ ಸರ್ಕಾರ 1250ರ ಬದಲು 5000 ರು. ಪೋ›ತ್ಸಾಹ ಧನ, ತೆಂಗು ಉತ್ಪನ್ನಗಳನ್ನು ಸರ್ಕಾರದ ಉತ್ಪಾಧನಾ ಸಂಸ್ಥೆಗಳಲ್ಲಿ ಬಳಸಲು ಉತ್ತೇಜಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಬಡಗಲಪುರ ನಾಗೇಂದ್ರು ತಿಳಿಸಿದರು.