Asianet Suvarna News Asianet Suvarna News

ಮಳೆ ನೀರು ರಸ್ತೆಯ ಮೇಲೆ ನಿಲ್ಲಬಾರದು: ಅಧಿಕಾರಿಗಳಿಗೆ ಡಿಕೆಶಿ ಸೂಚನೆ

ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Rainwater should not stand on the road Says DCM DK Shivakumar gvd
Author
First Published Oct 6, 2023, 7:02 AM IST

ಬೆಂಗಳೂರು (ಅ.06): ಇಲಾಖೆಗಳಿಂದ ಅನುಮತಿ ಪಡೆದು ಸ್ಥಗಿತವಾಗಿರುವ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ವಸಂತನಗರದ ಅಯ್ಯಪ್ಪಸ್ವಾಮಿ ದೇವಾಸ್ಥಾನದ ಪಕ್ಕ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಹಾಗೂ ಜಯಮಹಲ್ ಪ್ಯಾಲೇಸ್ ರಸ್ತೆಯ ಅಗಲೀಕರಣ ಹಾಗೂ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ತ್ವರಿತವಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ನಡೆದಿವೆ. ಟೆಂಡರ್ ಶ್ಯೂರ್ ರಸ್ತೆಯಲ್ಲಿ ಮುಂದೆ ಯಾರೂ ಕೂಡ ರಸ್ತೆಯನ್ನು ಅಗೆಯಬಾರದು. ಕೇಬಲ್ ಲೈನ್ ಎಳೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ. ಅವುಗಳನ್ನು ಯಾರೂ ಉಪಯೋಗಿಸುತ್ತಿಲ್ಲ. ನಾವು ಎಲ್ಲೆಲ್ಲಿ ಈ ವ್ಯವಸ್ಥೆ ಕಲ್ಪಿಸಿದ್ದೇವೆ, ಅಲ್ಲೆಲ್ಲಾ ಇದರ ಕಾನೂನುಬದ್ಧವಾಗಿ ಉಪಯೋಗ ಮಾಡಿಕೊಳ್ಳಬೇಕು. ಬೆಂಗಳೂರಿನ ಅಂದ ಹೆಚ್ಚಿಸಲು ಕೇಬಲ್‌ಗಳನ್ನು ಅಂಡರ್ ಗ್ರೌಂಡ್‌ನಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.

ಅ.10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್‌: ವಾಟಾಳ್ ನಾಗರಾಜ್‌

ಮಳೆ ನೀರು ರಸ್ತೆಯ ಮೇಲೆ ನಿಲ್ಲಬಾರದು. ಒಳಚರಂಡಿ ಮೂಲಕ ಹರಿದುಹೋಗಬೇಕು. ಅದಕ್ಕಾಗಿ ಈಗಾಗಲೇ ಅನುಮತಿ ನೀಡಲಾಗಿರುವ ಕಾಮಗಾರಿಗಳನ್ನು ಪುನರಾರಂಭಿಸಲು ಸೂಚಿಸಿದ್ದೇನೆ. ಇನ್ನು ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಕೂಡಲೇ ಅವುಗಳನ್ನು ಸರಿಪಡಿಸಲಾಗುವುದು. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಚರ್ಚೆ ಮಾಡಿದ್ದೇವೆ. ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಸೇರಿ ರಸ್ತೆಗುಂಡಿಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಆದ್ಯತೆ ಮೇರೆಗೆ ಗುಂಡಿ ಮುಚ್ಚಿ ಎಂದು ಸೂಚಿಸಿದರು. ಶನಿವಾರ ಹೊರವರ್ತುಲ ರಸ್ತೆಗೆ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚರ್ಚೆ ಮಾಡಲಾಗುವುದು ಎಂದರು.

ಬಿಬಿಎಂಪಿ ಬಿಲ್ ಬಾಕಿ ವಿಚಾರವಾಗಿ, ಅಮೃತನಗರ ಯೋಜನೆಯಲ್ಲಿ ₹5 ಸಾವಿರ ಕೋಟಿ ರುಪಾಯಿ ವೆಚ್ಚದ 352 ಪ್ಯಾಕೇಜ್ ಕಾಮಗಾರಿಗಳ ಪೂರ್ಣಗೊಳಿಸಲು ತಿಳಿಸಲಾಗಿದೆ. ಇನ್ನು ಕಾಮಗಾರಿಗಳ ತನಿಖೆ ಕೂಡ ಮುಂದುವರಿದು ವರದಿ ಸಲ್ಲಿಕೆಯಾಗಲಿದೆ. ₹675 ಕೋಟಿ ಮೊತ್ತದ ಬಿಲ್ ಪಾವತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸುಮಾರು ಶೇ.50-75ರಷ್ಟು ಬಿಲ್ ಪಾವತಿ ಮಾಡಲಾಗಿದೆ. ₹432 ಕೋಟಿ ಬಿಬಿಎಂಪಿ ಅನುದಾನ ಕೂಡ ಬಿಡುಗಡೆ ಮಾಡಲಾಗುವುದು. ಜನರಿಗೆ ತೊಂದರೆ ಆಗದಂತೆ ಕೆಲಸ ಆರಂಭಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ಎಂಜಿನಿಯರ್ ಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು. ಬಿಬಿಎಂಪಿಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೂರ್ಣಗೊಂಡ ನಂತರ ವರದಿ ಸಲ್ಲಿಕೆಯಾಗಲಿದೆ. ಅದಕ್ಕಾಗಿ ಸ್ವಲ್ಪ ಪ್ರಮಾಣದ ಬಿಲ್ ಗಳನ್ನು ಪಾವತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದ ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ತುಷಾರ್‌ ಗಿರಿನಾಥ್‌ ವರ್ಗಾವಣೆ ಇಲ್ಲ: ಚಿಲುಮೆ ಪ್ರಕರಣ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ತನಿಖೆಗೆ ಸೂಚಿಸಲಾಗಿದೆ. ಅವರು ಅವರ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗ ಏನು ಕ್ರಮ ತೆಗೆದುಕೊಳ್ಳಬೇಕು. ಅದನ್ನು ತೆಗೆದುಕೊಳ್ಳಲಿದೆ. ಸದ್ಯಕ್ಕೆ ಅಭಿವೃದ್ಧಿ ಕುರಿತು ಗಮನ ನೀಡುತ್ತಿದ್ದೇವೆ. ಮುಖ್ಯ ಆಯುಕ್ತರ ವರ್ಗಾವಣೆ ಸದ್ಯಕ್ಕೆ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Follow Us:
Download App:
  • android
  • ios