Asianet Suvarna News Asianet Suvarna News

ಅ.10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್‌: ವಾಟಾಳ್ ನಾಗರಾಜ್‌

ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಅ.10ರಂದು ಕರ್ನಾಟಕ- ತಮಿಳುನಾಡು ಗಡಿ ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಹೇಳಿದರು.

Karnataka Tamil Nadu border bandh on 10th Says Vatal Nagaraj gvd
Author
First Published Oct 6, 2023, 5:23 AM IST

ಮಂಡ್ಯ/ಮದ್ದೂರು (ಅ.06): ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಅ.10ರಂದು ಕರ್ನಾಟಕ- ತಮಿಳುನಾಡು ಗಡಿ ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಹೇಳಿದರು. ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ನೀರು ಬಿಡದಂತೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಿಂದ ಕೆಆರ್‌ಎಸ್‌ ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದೇ ಹೋದರೆ ರೈತರು ಮತ್ತು ಕನ್ನಡಪರ ಹೋರಾಟಗಾರರು ಕರ್ನಾಟಕ- ತಮಿಳುನಾಡು ಸಂಪರ್ಕಿಸುವ ಹೊಸೂರು, ಚಾಮರಾಜನಗರ ಹಾಗೂ ಕನಕಪುರ ಗಡಿ ಭಾಗಗಳಲ್ಲಿ ಅ.10ರಂದು ಬಂದ್ ಮಾಡುವ ಮೂಲಕ ಚಳವಳಿ ನಡೆಸುತ್ತೇವೆ. ಈ ಬಗ್ಗೆ ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿದರು. ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕಾರಣಿಗಳು ಕರ್ನಾಟಕದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಕನ್ನಡಿಗರಿಂದ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Mandya: ತಿಂಗಳ ಬಳಿಕ 100 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ!

ಕೆಆರ್‌ಎಸ್‌ ಜಲಾಶಯ ಮುತ್ತಿಗೆ ಕಾರ್ಯಕ್ರಮಕ್ಕೆ ರೈತರು ಮತ್ತು ಕನ್ನಡ ಸಂಘಟನೆಗಳ ಹೋರಾಟಗಾರರು ಬೆಂಬಲ ನೀಡುತ್ತಿರುವುದು ನಮ್ಮ ಹೋರಾಟಕ್ಕೆ ಸ್ಪೂರ್ತಿ ತಂದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ನರಸತ್ತ ಹೇಡಿಗಳಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನೀರಿನ ವಿಚಾರದಲ್ಲಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯ ಎಂದರು.

ರೌಡಿಗಳ ರಾಜ್ಯಭಾರ: ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ರೌಡಿಗಳ ಕೈಸೇರಲಿದೆ. ರೌಡಿಗಳೇ ಚುನಾವಣೆಗೆ ಸ್ಪರ್ಧಿಸುವರು. ಅವರ ಗುರುತು ಲಾಂಗ್‌. ಲಾಂಗ್‌ ಗುರುತಿಗೆ ಮತ ಹಾಕಬೇಕು ಎಂದು ಜನರನ್ನು ಹೆದರಿಸುತ್ತಾರೆ. ಪೊಲೀಸ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಕಮಿಷನರ್‌ವರೆಗೆ ರೌಡಿಗಳಿಗೆ ಸೆಲ್ಯೂಟ್‌ ಹೊಡೆಯಬೇಕು. ಐಎಎಸ್‌, ಐಪಿಎಸ್‌ ಅಧಿಕಾರಿಗಳು ಅವರೆದುರು ಕೈಕಟ್ಟಿ ನಿಲ್ಲಬೇಕು ಎಂದು ಭವಿಷ್ಯ ನುಡಿದರು.

ನೀರು ಬಿಡದೆ ಇತಿಹಾಸ ನಿರ್ಮಿಸಿ: ಪ್ರಾಧಿಕಾರ, ಸುಪ್ರೀಂ ಕೋರ್ಟ್‌ ಹೇಳಿದರೂ ತಮಿಳುನಾಡಿಗೆ ನೀರು ಹರಿಸಬೇಡಿ. ನೀರು ಹರಿಸುವುದಿಲ್ಲವೆಂಬ ಕಠಿಣ ನಿರ್ಧಾರ ಕೈಗೊಳ್ಳಿ. ಸರ್ಕಾರ ವಜಾ ಆಗಬಹುದು, ರಾಜ್ಯಪಾಲರ ಆಳ್ವಿಕೆ ಜಾರಿಯಾಗಬಹುದು. ಮಿಲಿಟರಿಯವರನ್ನು ಕರೆತಂದು ನೀರು ಬಿಡಿಸಿಕೊಳ್ಳುವರೇ. ಅದು ಸಾಧ್ಯನಾ. ನಿಮ್ಮ ಕಾಲದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿ. ನೀವಾಗಲೇ ಮುಖ್ಯಮಂತ್ರಿಯಾಗಿದ್ದೀರಿ. ಈಗ ಅಧಿಕಾರದ ಆಸೆ ಬಿಟ್ಟು ಬಡವರು, ಜನ ಸಾಮಾನ್ಯರು, ರೈತರ ಬದುಕಿನ ರಕ್ಷಣೆಗೆ ನಿಲ್ಲಲು ಸಂಕಲ್ಪ ಮಾಡುವಂತೆ ಮನವಿ ಮಾಡಿದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್, ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಕುಮಾರ್‌ ಶೆಟ್ಟಿ, ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಜಿ.ಬಿ.ಶಿವಕುಮಾರ್‌, ಕೆ.ಬೋರಯ್ಯ, ಮಂಜುನಾಥ್‌ ಇತರರಿದ್ದರು.

ಕನ್ನಡ ಚಳವಳಿ ವಾಟಳ್ ಗೆ ‘ಭುವನೇಶ್ವರಿ ವರಪುತ್ರ’ ಬಿರುದು ಪ್ರದಾನ: ನ್ನಡ ಚಳವಳಿಯ ಧೀಮಂತ ನಾಯಕ ವಾಟಾಳ್ ನಾಗರಾಜ್ ಅರ್ಧ ಶತಮಾನ ನಾಡು-ನುಡಿ, ನೆಲ-ಜಲ ದ ರಕ್ಷಣೆಗೆ ಅರ್ಹನಿಶಿ ಸೇವೆ ಸಲ್ಲಿಸಿದ ಸ್ಮರಣಾರ್ಥ ‘ಭುವನೇಶ್ವರಿಯ ವರಪುತ್ರ’ ಬಿರುದು ನೀಡಿ ಮದ್ದೂರಿನ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಆಭಿನಂದಿಸಿತು. ಮದ್ದೂರಿನ ರಾಜಕೀಯ ಶಕ್ತಿ ಕೇಂದ್ರ ಆಲದ ಮರದ ಬಳಿ ನಡೆದ ಕಾರ್ಯಕ್ರಮದಲ್ಲಿ ಬಿರುದು ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ನಿಡಘಟ್ಟ ಗಡಿಯಿಂದ ವಾಟಾಳ್ ನಾಗರಾಜ್ ಮತ್ತವರ ಕನ್ನಡದ ಸೈನಿಕರನ್ನ ಸ್ವಾಗತಿಸಿ ಪ್ರಗತಿಪರ ಸಂಘಟನೆಯವರು ಬೈಕ್ ಜಾಥಾ ಮೂಲಕ ಮೆರವಣಿಗೆಯಲ್ಲಿ ಕಾವೇರಿ ಪರ ಘೋಷಣೆ ಕೂಗುತ್ತಾ ಆಲದ ಮರದ ಬಳಿಗೆ ಕರೆತಂದರು.

ಕಾವೇರಿ ಸಂಕಷ್ಟ ಸೂತ್ರದ ಬಗ್ಗೆ ನಿಖರ ಅಂಕಿ-ಅಂಶಗಳಿಲ್ಲ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ವಾಟಾಳ್ ಅವರು ಪಟ್ಟಣ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಜನರು ಹರ್ಷೋದ್ಘಾರ ಮೊಳಗಿಸಿದರು. ನಂತರ ಅವರಿಗೆ ಬಿರುದು ಪ್ರದಾನ ಮಾಡಲಾಯಿತು. ಸುಮುಖ ಟ್ರಸ್ಟ್ ಕುಮಾರ್, ಶಂಕರಪುರ ಅವಿನಾಶ್, ದಲಿತ ಸಂಘರ್ಷ ಸಮಿತಿ ಶಿವರಾಜ್, ಮರಳಿಗ ರಘು, ವೆಂಕಟೇಗೌಡ, ಒಕ್ಕಲಿಗರಸಂಘದ ನಾರಾಯಣ್‌, ಛಲವಾದಿ ಮಹಾಸಭಾದ ಮಹದೇವ್, ಹುಲಿಗೆರೆಪುರ ಸೊ.ಶಿ.ಪ್ರಕಾಶ್, ಬಿ.ವಿ. ಉಮಾಶಂಕರ್, ಶಂಕರೇಗೌಡ, ದಯಾನಂದ್, ಉಮೇಶ್, ಚಂದ್ರಹಾಸ್, ಕೆಂಪೇಗೌಡ, ತಿಪ್ಪೂರು ಮಹೇಶ್, ಗೊರವನಹಳ್ಳಿ ಪ್ರಸನ್ನ, ನ.ಲಿ.ಕೃಷ್ಣ, ರಾಮಲಿಂಗೇಗೌಡ, ಉಮೇಶ್ ರೈತಸಂಘ ಕೊತ್ತನಹಳ್ಳಿ ಉಮೇಶ್, ಶಿವು, ವಿಶ್ವ ಕರ್ಮ ಸಂಘಟನೆ ಮಹೇಶ್, ಹುಲಿಗೆರೆಪುರ ಕುಮಾರ್, ಕುಳುವ ಸಮಾಜದ ಮಹೇಶ್ ಮತ್ತಿತರರಿದ್ದರು.

Follow Us:
Download App:
  • android
  • ios