ಶಿವಾನಂದ ಗೊಂಬಿ

ಹುಬ್ಬಳ್ಳಿ[ನ.20]: ಮಳೆ ನಿಂತು ಒಂದೂವರೆ ತಿಂಗಳಿಗೂ ಅಧಿಕ ಕಾಲವೇ ಗತಿಸಿದೆ. ಆದರೆ, ಹಳ್ಳಿಗೇರಿ ಕೆರೆಯ ನೀರಿನಿಂದ ಆವೃತ್ತವಾಗಿದ್ದ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನೀರು ಇನ್ನೂ ಇಳಿದಿಲ್ಲ. ಇದರ ಪರಿಣಾಮ 12 ಕುಟುಂಬಗಳಿಗೆ ಜಿಲ್ಲಾಡಳಿತ ತೆರೆದಿರುವ ಕಾಳಜಿ ಕೇಂದ್ರವೇ ಆಸರೆಯಾಗಿದೆ.

ಸಂಶಿ ಗ್ರಾಮದಲ್ಲಿರುವ ಹಳ್ಳಿಗೇರಿ ಕೆರೆ ಅಷ್ಟೊಂದು ದೊಡ್ಡ ಕೆರೆಯಲ್ಲ. ಸುಮಾರು 2 ಎಕರೆ ಪ್ರದೇಶದ ವ್ಯಾಪ್ತಿಯನ್ನೊಳಗೊಂಡ ಕೆರೆ. ಇಡೀ ಗ್ರಾಮದ ಚರಂಡಿ ನೀರೆಲ್ಲ ಶೇಖರಣೆಯಾಗುವುದು ಇದೇ ಕೆರೆಯಲ್ಲಿ. ಈ ಕೆರೆ ಸುತ್ತ 35ಕ್ಕೂ ಹೆಚ್ಚು ಮನೆಗಳಿವೆ. ಇವೆಲ್ಲ ಅಕ್ರಮ ಮನೆಗಳು. ಕಳೆದ 30-35 ವರ್ಷಗಳಿಂದ 35ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಮಾಡಿಕೊಂಡು ವಾಸವಾಗಿವೆ. ಕೂಲಿ ಕಾರ್ಮಿಕರೇ ಹೆಚ್ಚಾಗಿ ಇಲ್ಲಿ ವಾಸವಾಗಿರುವುದು. ತಾಲೂಕಾಡಳಿತ, ಗ್ರಾಮ ಪಂಚಾಯಿತಿ ಈ ಮನೆಗಳಿಗೆ ನೀರು, ವಿದ್ಯುತ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ.

ಭಾರೀ ಮಳೆಗೆ ತತ್ತರಿಸಿದ ಕರುನಾಡು: ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಹಲವು ಸುದ್ದಿಗಳು

ಈಗ ಏನಾಗಿದೆ?:

ಆಗಸ್ಟ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಈ ಕೆರೆ ಕೊಂಚ ಭರ್ತಿಯಾಗಿತ್ತು. ಇನ್ನು ಅಕ್ಟೋಬರ್‌ ಆರಂಭದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಸಂಪೂರ್ಣ ಭರ್ತಿಯಾಗಿ 35 ಮನೆಗಳ ಪೈಕಿ 12 ಮನೆಗಳು ಜಲದಿಗ್ಬಂಧನಕ್ಕೆ ಒಳಗಾದವು. ಆಗಿನಿಂದ ಈವರೆಗೂ ಈ ಮನೆಗಳು ಜಲಾವೃತವಾಗಿವೆ. ಸೆಪ್ಟೆಂಬರ್‌ ಕೊನೆಯಿಂದಲೂ ಈ ಕುಟುಂಬಗಳನ್ನು ಗ್ರಾಮದ ಎಪಿಎಂಸಿಯ ನಾಲ್ಕು ಮಳಿಗೆಗಳಿಗೆ ತಾಲೂಕಾಡಳಿತ ಸ್ಥಳಾಂತರ ಮಾಡಿದೆ. ಒಂದೊಂದು ಮಳಿಗೆಗಳಲ್ಲಿ 3 ಕುಟುಂಬಗಳಂತೆ ಇಲ್ಲಿ ವಾಸವಾಗಿವೆ. ಚಿಕ್ಕದಾದ ಮಳಿಗೆಯಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬದುಕು ಸಾಗಿಸಬೇಕಿದೆ. ಇಲ್ಲಿಂದಲೇ ದೊಡ್ಡವರು ಕೂಲಿ ಕೆಲಸಕ್ಕೆ ಹೋದರೆ, ಸಣ್ಣ ಮಕ್ಕಳು ಶಾಲೆಗೆ ಹೋಗಿ ಬರುತ್ತಿದ್ದಾರೆ. ಸೂರು ಎಂಬುದೇ ಇಲ್ಲದಂತಾಗಿದೆ.

ಜಾಗ ಕೊಟ್ಟು ಪುಣ್ಯ ಕಟ್ಕೊಳ್ಳಿ:

ಹಸಿರುಗಟ್ಟಿರುವ ತ್ಯಾಜ್ಯದ ನೀರು ಇರುವ ಈ ಕೆರೆಯ ಸುತ್ತ ಮತ್ತೆ ಹೋಗಿ ವಾಸಿಸಲು ಈ ಕುಟುಂಬಗಳು ಇಚ್ಛಿಸುತ್ತಿಲ್ಲ. ಅತ್ತ ಮನೆ ಸುತ್ತುವರಿದಿದ್ದ ನೀರು ಕೊಂಚ ಕಡಿಮೆಯಾಗಿದೆ. ಆದರೆ, ಅಲ್ಲಿಗೆ ಹೋಗುವುದು ಅಸಾಧ್ಯದ ಮಾತಾಗಿದೆ. ಬೇರೆಡೆ ನಮಗೆ ಜಾಗ ಕೊಡಿ ಎಂಬ ಬೇಡಿಕೆ ಈ ಕುಟುಂಬಗಳದ್ದು. ಅದಕ್ಕೆ ಗ್ರಾಮ ಪಂಚಾಯಿತಿ ಒಪ್ಪಿಗೆ ಸೂಚಿಸಿದೆ. ಆದರೆ, ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅದು ಮುಗಿದ ಮೇಲೆ ಜಾಗ ಕೊಡುತ್ತೇವೆ ಎಂದು ಪಂಚಾಯಿತಿ ಹೇಳುತ್ತಿದೆ. ಆದಷ್ಟುಬೇಗನೆ ಜಾಗ ಕೊಟ್ಟು ಪುಣ್ಯಕಟ್ಕೊಳ್ಳಿ ಎಂದು ಮನವಿ ಮಾಡುತ್ತಿವೆ ಇಲ್ಲಿನ ಕುಟುಂಬಗಳು. ಇನ್ನಾದರೂ ಇವರತ್ತ ಜಿಲ್ಲಾಡಳಿತ ಗಮನ ಹರಿಸಿ ನಿವೇಶನ ನೀಡಿ, ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಡಬೇಕೆಂಬುದು ನಾಗರಿಕರ ಆಗ್ರಹ.