Monsoon Failure: ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ.
ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜೂ.30): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಪೂರ್ವ ಮುಂಗಾರು ಹಾಗೂ ನೈಋತ್ಯ ಮುಂಗಾರು ಎರಡೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಖಾಲಿ ಬಿದ್ದಿದೆ. ಇನ್ನೊಂದೆಡೆ ಮಳೆ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುತ್ತಿರುವ ಆತಂಕಕಾರಿ ಸ್ಥಿತಿಯ ಕುರಿತಾದ ಒಂದು ವರದಿ ಇಲ್ಲಿದೆ.
ಹೌದು... ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ. ಮಳೆಯ ನಿರೀಕ್ಷೆಯಲ್ಲಿ ರೈತರು ಭೂಮಿ ಉಳುಮೆ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆರಂಭದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಕೆಲ ರೈತರು ಜೋಳ, ರಾಗಿ, ಸೂರ್ಯಕಾಂತಿ, ಅಲಸಂದೆ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದರು.
ಆದರೆ ಬಳಿಕ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆ ಕೊರತೆಯ ಪರಿಣಾಮ ಕೇವಲ ಬೆಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಕೃಷಿ ಪಂಪ್ಸೆಟ್ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೆಲವೆಡೆ ಸಂಪೂರ್ಣವಾಗಿ ನೀರು ನಿಂತಿದೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗುತ್ತಿವೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಡೆ ಬೆಳೆ ಉಳಿಸಿಕೊಳ್ಳುವ ಚಿಂತೆ, ಮತ್ತೊಂದು ಕಡೆ ಜಾನುವಾರುಗಳ ಪೋಷಣೆಯ ಆತಂಕ ರೈತರನ್ನು ಕಂಗೆಡಿಸಿದೆ ಎಂದು ರೈತ ನಾಗರಾಜು ಅಳಲು ತೊಡಿಕೊಂಡಿದ್ದಾರೆ.
ಜಿಲ್ಲೆಯ ಬಿತ್ತನೆ ಅಂಕಿ-ಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತವೆ. ಈ ವೇಳೆಗೆ ಜಿಲ್ಲೆಯಲ್ಲಿ ಸುಮಾರು 95 ಸಾವಿರ 779 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಕೊರತೆಯಿಂದ ಕೇವಲ 25 ಸಾವಿರ 951 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶ ಇನ್ನೂ ಖಾಲಿ ಬಿದ್ದಿದೆ. ರೈತರು ಮಳೆಯ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.
ಭಾರೀ ಹಾನಿಯಾಗುವ ಸಾಧ್ಯತೆ
ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ಭಾನುಪ್ರಕಾಶ್ ತಿಳಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಮುಂದಿನ ಒಂದು ವಾರದೊಳಗೆ ಉತ್ತಮ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೂ ಭಾರೀ ಹಾನಿಯಾಗುವ ಸಾಧ್ಯತೆ ಇದೆ. ಮಳೆ ತಡವಾಗಿ ಬಂದರೂ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಕೂಡಲೇ ಚಾಮರಾಜನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು. ಜೊತೆಗೆ ಮೇವು ಬ್ಯಾಂಕ್ ತೆರೆಯುವುದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.


