ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಇಳಿಮುಖ: ಮತ್ತೆ ಭಾರಿ ಮಳೆ ಎಚ್ಚರಿಕೆ
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮತ್ತೆ ಒಣಹವೆ ಮುಂದುವರಿದಿದೆ. ಹವಾಮಾನ ಇಲಾಖೆಯ ಭಾರಿ ಮಳೆ ಮುನ್ಸೂಚನೆಯ ಹೊರತಾಗಿಯೂ ಮಂಗಳವಾರ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆ ಒಂದೆರೆಡು ಬಾರಿ ಸಾಧಾರಣ ಮಳೆಯಾಗಿದೆ.
ಮಂಗಳೂರು/ಉಡುಪಿ(ಜೂ.24): ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮತ್ತೆ ಒಣಹವೆ ಮುಂದುವರಿದಿದೆ. ಹವಾಮಾನ ಇಲಾಖೆಯ ಭಾರಿ ಮಳೆ ಮುನ್ಸೂಚನೆಯ ಹೊರತಾಗಿಯೂ ಮಂಗಳವಾರ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆ ಒಂದೆರೆಡು ಬಾರಿ ಸಾಧಾರಣ ಮಳೆಯಾಗಿದೆ.
ಮಂಗಳವಾರ ಮುಂಜಾನೆವರೆಗೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 27.67 ಮಿ.ಮೀ. ಮಳೆಯಾಗಿತ್ತು. ಆದರೆ ಈ ಮಳೆ ಜಿಲ್ಲೆಯಾದ್ಯಂತ ಸುಮಾರು 2 ಲಕ್ಷ ರು.ಗಳಷ್ಟುಹಾನಿಗೆ ಕಾರಣವಾಗಿದೆ.
ಮಂಗಳೂರಲ್ಲಿ ಕೊರೋನಾಕ್ಕೆ 9ನೇ ಬಲಿ, ಮತ್ತೆ 8 ಪಾಸಿಟಿವ್
ಕಾಪು ತಾಲೂಕಿನ ಕುತ್ಯಾರು ಗ್ರಾಮದ ಕರುಣಾಕರ ಮೇಲಂಟ ಅವರ ಮನೆಗೆ ಸಿಡಿಲು ಬಡಿದು ಸುಮಾರು 25,000 ರು. ಹಾನಿಯಾಗಿದೆ. ಇಲ್ಲಿನ ಪಡು ಗ್ರಾಮದ ಭಾರತಿ ಅವರ ಮನೆ ಮೇಲೆ ಮರ ಬಿದ್ದು ಸುಮಾರು 5,000 ರು., ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಆಶಾ ಸುಧಾಕರ ಪೂಜಾರಿ ಅವರ ಮನೆಗೆ ಸಿಡಿಲು ಬಡಿದು 10,000 ರು., ಬೈಂದೂರು ತಾಲೂಕಿನ ಬೈಂದೂರು ಗ್ರಾಮದ ಸೀತು ರಾಮ ಮೊಗವೀರ ಅವರ ಮನೆಗೆ ಮಳೆಯಿಂದ 50,000 ರು. ಮತ್ತು ಶಿರೂರು ಗ್ರಾಮದ ಹಡವಿನಕೋಣೆಯ ಸಾವಿತ್ರಿ ಸಾಕು ಮೇಸ್ತ ಅವರ ಮನೆಗೆ ಮಳೆಯಿಂದ 50,000 ರು.ಗಳಷ್ಟುನಷ್ಟವಾಗಿದೆ. ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮಳೆಯಿಲ್ಲದೆ ಮಂಗಳೂರು ನಗರದಲ್ಲಂತೂ ಸೆಕೆಯ ವಾತಾವರಣವಿತ್ತು.
ಮತ್ತೆ ಭಾರಿ ಮಳೆ ಎಚ್ಚರಿಕೆ:
ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಜೂನ್ 28ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದಿನಿಂದ 3 ದಿನಗಳ ಕಾಲ ಕರಾವಳಿಯಲ್ಲಿ ಸರಾಸರಿ 65 ಮಿ.ಮೀ. ಮಳೆಯಾಗುವ ಹಾಗೂ ಜೂನ್ 27 ಮತ್ತು 28ರಂದು 125.ಮಿ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.