ಮಂಗಳೂರಲ್ಲಿ ಕೊರೋನಾಕ್ಕೆ 9ನೇ ಬಲಿ, ಮತ್ತೆ 8 ಪಾಸಿಟಿವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು, 70 ವರ್ಷ ವಯಸ್ಸಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಮಂಗಳೂರು(ಜೂ.24): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು, 70 ವರ್ಷ ವಯಸ್ಸಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಿಧನರಾಗಿದ್ದಾರೆ.
ಇದು ಜಿಲ್ಲೆಯಲ್ಲಿ ಕೊರೋನಾದ 9ನೇ ಬಲಿ. ಮಂಗಳವಾರ ಮತ್ತೆ 8 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾಜ್‌ರ್ ಆದವರಲ್ಲಿ ಸೋಮವಾರವಷ್ಟೇ ಹೆರಿಗೆಯಾದ ಮಹಿಳೆಯೂ ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 453 ಆಗಿದ್ದರೆ, ಅವರಲ್ಲಿ 256 ಮಂದಿ ಗುಣಮುಖರಾಗಿದ್ದಾರೆ.
ಶಿಶಿಲೇಶ್ವರ ಮತ್ಸ್ಯ ತೀರ್ಥ ಕ್ಷೇತ್ರಕ್ಕೇ ಮೀನು ಹಿಡಯಲು ಬಂದ್ರು..!
ಮಧುಮೇಹ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ 70 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾದ ಬಳಿಕ ಜೂ.10ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನೇಕ ದಿನಗಳ ಹಿಂದೆಯೇ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಅಸುನೀಗಿದ್ದಾರೆ. ಬೋಳಾರದಲ್ಲಿ ಅಂತ್ಯಸಂಸ್ಕಾರ ನಡೆಯಿತು.
ಸೋಂಕು ಮುಕ್ತೆಯಾದ ಬಾಣಂತಿ:
ಆಶಾದಾಯಕ ಬೆಳವಣಿಗೆಯೊಂದರಲ್ಲಿ ಕೊರೋನಾ ಪಾಸಿಟಿವ್ ಆಗಿದ್ದ ಗರ್ಭಿಣಿ ಹೆರಿಗೆಯ ಬಳಿಕ ಸೋಂಕಿನಿಂದ ಮುಕ್ತರಾಗಿದ್ದಾರೆ. 38 ವರ್ಷ ವಯಸ್ಸಿನ ಮಹಿಳೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.11ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಮಂಗಳವಾರ ಸ್ವೀಕೃತವಾದ ಅವರ ಗಂಟಲು ದ್ರವ ಮಾದರಿಯ ವರದಿ ನೆಗೆಟಿವ್ ಆಗಿದ್ದು, ಆಸ್ಪತ್ರೆಯಿಂದ ತಾಯಿ- ಮಗುವನ್ನು ಡಿಸ್ಚಾಜ್‌ರ್ ಮಾಡಲಾಗಿದೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದಂತೆ 45, 36, 24, 36, 26 ವರ್ಷ ವಯಸ್ಸಿನ ಪುರುಷರು ಕೂಡ ಸೋಂಕಿನಿಂದ ಗುಣಮುಖರಾಗಿದ್ದು, ಮನೆಗೆ ಕಳುಹಿಸಲಾಗಿದೆ.
ಮೂವರ ಸೋಂಕು ಮೂಲ ನಿಗೂಢ: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದೇಶದಿಂದ ಮರಳಿದವರಿಗೇ ಸೋಂಕು ಕಾಣಿಸಿಕೊಂಡಿದ್ದರೆ, ಮಂಗಳವಾರ ಹೊಸದಾಗಿ ಸೋಂಕು ತಗುಲಿದವರಲ್ಲಿ ಒಬ್ಬರು ಮಾತ್ರ ಕುವೈಟ್‌ನಿಂದ ಬಂದವರಾಗಿದ್ದರೆ, ನಾಲ್ಕು ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದೆ. ಉಳಿದ ಮೂವರ ಸೋಂಕಿನ ಮೂಲ ನಿಗೂಢವಾಗಿದ್ದು, ಆತಂಕ ಮೂಡಿಸಿದೆ. ಸೋಮವಾರವಷ್ಟೆಮೀನು ವ್ಯಾಪಾರಿ ಯುವಕನಿಗೂ ಮೂಲವಿಲ್ಲದೆ ಸೋಂಕು ಹರಡಿತ್ತು. ಅದರ ಬೆನ್ನಿಗೇ ಮೂವರಿಗೆ ಯಾವುದೇ ಮೂಲವಿಲ್ಲದೆ ಸೋಂಕು ಪಸರಿಸಿದೆ.
ರೋಗಿಗಳ ನರಳಾಟ: ಸಚಿವ ಸುಧಾಕರ್ ಕೊಟ್ಟ ವಾರ್ನಿಂಗ್ಗೆ ಆಸ್ಪತ್ರೆ ಮುಖ್ಯಸ್ಥರು ಥಂಡಾ
17, 50 ವರ್ಷದ ಪುರುಷರು, 25, 28 ವರ್ಷದ ಮಹಿಳೆಗೆ ರೋಗಿ ಸಂಖ್ಯೆ 8318ರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಂದಿದ್ದು, ಈಗಾಗಲೇ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕುವೈಟ್‌ನಿಂದ ಆಗಮಿಸಿದ 27 ವರ್ಷದ ಕ್ವಾರಂಟೈನ್‌ನಲ್ಲಿದ್ದು, ಇದೀಗ ಪಾಸಿಟಿವ್ ಬಂದಿದೆ. ಉಳಿದಂತೆ 49 ವರ್ಷದ ವ್ಯಕ್ತಿ ಹಾಗೂ 59 ವರ್ಷದ ಮಹಿಳೆ (ಇಬ್ಬರೂ ಮಂಗಳೂರು ನಿವಾಸಿಗಳು)ಗೆ ಸೋಂಕಿನ ಮೂಲ ಯಾವುದು ಎನ್ನುವುದು ತಿಳಿದಿಲ್ಲ. ಈ ಪ್ರಕರಣಗಳನ್ನು ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಇನ್ಫೆಕ್ಷನ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರು 27 ವರ್ಷದ ಮಂಗಳೂರಿನ ಮಹಿಳೆಗೂ ಪಾಸಿಟಿವ್ ಬಂದಿದ್ದು, ಇನ್ಫೂ$್ಲ್ಯಯೆನ್ಜಾ ಲೈಕ್ ಇಲ್ನೆಸ್ ಪ್ರಕರಣವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.
ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ 188 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 56 ವರ್ಷದ ವ್ಯಕ್ತಿ ಬಿಪಿ ಮತ್ತು ಮೆದೋಜೀರಕ ಗ್ರಂಥಿಯ ಉರಿಯುವಿಕೆ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಬಹುತೇಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.