Asianet Suvarna News Asianet Suvarna News

ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್

ರೈಲ್ವೆ ಸಚಿವ ಸುರೇಶ್‌ ಅಂಗಡಿ ನಗರದ ರೈಲ್ವೆ ನಿಲ್ದಾಣದ ಪರಿಶೀಲನೆ ಹಾಗೂ ಅಗತ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆಂದು ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರಚಾರ ಪಡಿಸಿದ್ದು, ಸಚಿವರು ಮಾತ್ರ ನಿಲ್ದಾಣದ ಪರಿಶೀಲನೆ ನಡೆಸಲೇ ಇಲ್ಲ. ಅಲ್ಲದೆ, ವಿಶೇಷ ರೈಲಿನಲ್ಲಿ ಆಗಮಿಸಿದ್ದ ಅವರು ರೈಲಿನ ಬೋಗಿಯ ಬಾಗಿಲಿನ ಬಳಿ ಇಳಿದು ನಿಂತಿದ್ದು ಬಿಟ್ಟರೆ ಒಂದು ಮೀಟರ್‌ ಸಹ ಆಚೀಚೆ ಬಂದು ನಿಲ್ದಾಣದ ಬಗ್ಗೆ ಗಮನ ಹರಿಸದೆ, ವೀಕ್ಷಿಸದೆ ನಿಂತಲ್ಲೇ ನಿಂತಿದ್ದರು.

railway minister Suresh Angadi did not check railway systems in tumakur during his visit
Author
Bangalore, First Published Jan 3, 2020, 7:53 AM IST

ತುಮಕೂರು(ಜ.03): ಕೇಂದ್ರ ರೈಲ್ವೆ ಮಂತ್ರಿ ಸುರೇಶ್‌ ಅಂಗಡಿ ಅವರು ರಾಜ್ಯದ ಅತ್ಯಂತ ಹಳೆಯ ನಿಲ್ದಾಣಗಳಲ್ಲೊಂದಾದ ಹಾಗೂ ಹೆಚ್ಚು ಆದಾಯ ನೀಡುವ ನಿಲ್ದಾಣಗಳ ಪಟ್ಟಿಯಲ್ಲಿರುವ ತಿಪಟೂರು ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲಿನಲ್ಲಿ ಆಗಮಿಸಿ ಸಾರ್ವಜನಿಕರಿಂದ ನಗರ ರೈಲ್ವೆ ನಿಲ್ದಾಣದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಪತ್ರ ಸ್ವೀಕರಿಸಿ ಆದಷ್ಟುಬೇಗ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ.

ನಿಂತ ಜಾಗದಿಂದ ಕದಲದ ಸಚಿವರು:

ರೈಲ್ವೆ ಸಚಿವರು ನಗರದ ರೈಲ್ವೆ ನಿಲ್ದಾಣದ ಪರಿಶೀಲನೆ ಹಾಗೂ ಅಗತ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆಂದು ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಪ್ರಚಾರ ಪಡಿಸಿದ್ದು, ಸಚಿವರು ಮಾತ್ರ ನಿಲ್ದಾಣದ ಪರಿಶೀಲನೆ ನಡೆಸಲೇ ಇಲ್ಲ. ಅಲ್ಲದೆ, ವಿಶೇಷ ರೈಲಿನಲ್ಲಿ ಆಗಮಿಸಿದ್ದ ಅವರು ರೈಲಿನ ಬೋಗಿಯ ಬಾಗಿಲಿನ ಬಳಿ ಇಳಿದು ನಿಂತಿದ್ದು ಬಿಟ್ಟರೆ ಒಂದು ಮೀಟರ್‌ ಸಹ ಆಚೀಚೆ ಬಂದು ನಿಲ್ದಾಣದ ಬಗ್ಗೆ ಗಮನ ಹರಿಸದೆ, ವೀಕ್ಷಿಸದೆ ನಿಂತಲ್ಲೇ ನಿಂತಿದ್ದರು.

ಕೃಷಿ ಸಮ್ಮಾನ್‌ಗೆ ತುಮಕೂರಿನಿಂದ 3 ಲಕ್ಷಕ್ಕೂ ಅಧಿಕ ರೈತರಿಂದ ಅರ್ಜಿ

ಸಚಿವರು ತುಮಕೂರಿನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ರೈಲಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ತಿಪಟೂರಿನಲ್ಲಿ ನಿಲುಗಡೆಗೊಳಿಸಿದ್ದ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್‌ ಸಚಿವರಿಗೆ ಬೆಂಗಳೂರು-ಬಿಜಾಪುರ ಗೋಲ್‌ಗುಂಬಜ್‌, ಬೆಂಗಳೂರು ಶಿವಮೊಗ್ಗ ಹಾಗೂ ಬೆಂಗಳೂರು-ಹುಬ್ಬಳಿ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳನ್ನು ತಿಪಟೂರು ನಿಲ್ದಾಣದಲ್ಲಿ ನಿಲುಗಡೆಗೊಳಿಸಿಕೊಡಬೇಕೆಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟು ಮನವಿ ಮಾಡಿದರು. ಅಲ್ಲದೆ, ನಗರದ ಹಾಸನ ರಸ್ತೆಯ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಮೇಲ್ಸುತುವೆ ಹಾಗೂ ಅಗತ್ಯ ಕಾಮಗಾರಿಗಳನ್ನು ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!

ತಿಪಟೂರು ರೈಲ್ವೆ ಹೋರಾಟ ಸಮಿತಿಯ ಕಾರ್ಯದರ್ಶಿ ಬಿ.ಭವರಲಾಲ್‌ ಸಚಿವರಿಗೆ ಹಾಗೂ ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣ ಗರ್ಗ, ಪಿಆರ್‌ ಅಜಯಕುಮಾರ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿ, ಬೆಂಗಳೂರು-ಬಿಜಾಪುರ ಗೋಲ್‌ಗುಂಬಜ್‌, ಬೆಂಗಳೂರು ಶಿವಮೊಗ್ಗ ಹಾಗೂ ಬೆಂಗಳೂರು-ಹುಬ್ಬಳಿ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಲ್ಲದೆ ಇತರೆ ಆರು ರೈಲುಗಳು ತಿಪಟೂರು ನಿಲ್ದಾಣದಲ್ಲಿ ನಿಲುಗಡೆ ಮಾಡಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಪತ್ರ ಸಲ್ಲಿಸಿದರು.

ಇಬ್ಬರು ಅಧಿಕಾರಿಗಳು ಮಾತ್ರ ಜನರ ಸಮಸ್ಯೆಗಳ ಬಗ್ಗೆ ನಿಂತಲ್ಲೇ ಕೇಳಿಸಿಕೊಂಡಿದ್ದು ಬಿಟ್ಟರೆ ಸಾರ್ವಜನಿಕವಾಗಿ ಸಚಿವರಾದಿಯಾಗಿ ಅಧಿಕಾರಿಗಳು ಏನೂ ಉತ್ತರ ನೀಡಲಿಲ್ಲ. ತಿಪಟೂರಿನ ರೈಲ್ವೆ ನಿಲ್ದಾಣದಲ್ಲಿನ ಜ್ವಲಂತ ಸಮಸ್ಯೆಗಳು ಹಾಗೂ ನಗರದ 3-4 ಕಡೆ ರೈಲ್ವೆ ಗೇಟ್‌ಗಳಲ್ಲಿ ಹಳಿ ದಾಟಲು ಹಲವಾರು ವರ್ಷಗಳಿಂದ ಸಾರ್ವಜನಿಕರು ಗಂಟೆಗಟ್ಟಲೆ ಕಾಯುತ್ತಿದ್ದು, ಈ ಬಗ್ಗೆ ಸಚಿವರ ಗಮನದಲ್ಲಿದ್ದರೂ ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಯಾವುದೇ ರೀತಿಯ ಭರವಸೆ ನೀಡದೆ ಸಚಿವರು ಹೋಗಿದ್ದು ತಾಲೂಕಿನ ಜನತೆಯಲ್ಲಿ ಬೇಸರ ಮೂಡಿಸಿದೆ. ಒಟ್ಟಾರೆ ಹಳ್ಳಿಯಲ್ಲಿನ ಗಾದೆ ತರಹ ಬಂದ ಪುಟ್ಟಹೋದ ಪುಟ್ಟಅನ್ನುವಂತಿತ್ತು ಮಂತ್ರಿಗಳ ಭೇಟಿ.

ಅಪರೂಪಕ್ಕೆ ಸ್ವಚ್ಛತೆ:

ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಯಾವತ್ತೂ ಸ್ವಚ್ಛತೆ ಇರುವುದಿಲ್ಲ. ಕುಡಿಯುವ ನೀರು ಸೇರಿದಂತೆ ಶೌಚಾಲಯಗಳು ಬೀಗ ಜಡಿದುಕೊಂಡಿರುತ್ತವೆ. ಕುಳಿತುಕೊಳ್ಳಲು ನಿರ್ಮಿಸಿರುವ ಆಸನಗಳಂತೂ ಕುಳಿತುಕೊಳ್ಳಲು ಸಾಧ್ಯವಿಲ್ಲದಂತೆ ಗಬ್ಬೆದ್ದಿರುತ್ತವೆ. ನಿಲ್ದಾಣದ ಮುಂಭಾಗವಂತೂ ಕಸದ ರಾಶಿಯಂತೆ ಕಾಣುತ್ತಿರುತ್ತದೆ. ನಿಲ್ದಾಣದ ಒಳಗಡೆ ಹಳಿಭಾಗಗಳನ್ನು ಸ್ವಚ್ಛಗೊಳಿಸುವ ಗೋಜಿಗೆ ಅಧಿಕಾರಿಗಳು ಹೋಗುವುದಿಲ್ಲ. ಆದರೆ, ಗುರುವಾರ ಸಚಿವರು ಬರುತ್ತಾರೆಂಬ ಮಾಹಿತಿ ತಿಳಿದ ಇಲ್ಲಿನ ಅಧಿಕಾರಿಗಳು ನಿಲ್ದಾಣದ ಮೂಲೆಮೂಲೆಯನ್ನು ಸ್ವಚ್ಛಗೊಳಿಸಿದ್ದರು.

ಪೊಲೀಸ್‌ ಮಯ:

ಪ್ರತಿ ದಿನ ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಈ ನಿಲ್ದಾಣದಲ್ಲಿ ಇತರ ದಿನ ಒಬ್ಬ ಪೊಲೀಸ್‌ ಪೇದೆಯೂ ಕಾಣುದಿಲ್ಲ. ಸಚಿವರು ಬರುತ್ತಾರೆಂಬ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಪೊಲೀಸರು ರೈಲ್ವೆ ನಿಲ್ದಾಣದಲ್ಲಿ ಇದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಂಗರಾಜು, ಮಾಜಿ ನಗರಸಭಾ ಸದಸ್ಯರಾದ ಸ್ಟುಡಿಯೋ ಲೋಕೇಶ್‌, ಹರಿಬಾಬು, ಫೋಟೋ ಬಾಬು, ಯೋಗೀಶ್‌, ಮೂರ್ತಿ, ನಗರಸಭಾ ಸದಸ್ಯ ಫೋಟೋ ಪ್ರಭಾಕರ್‌, ಜಯರಾಮ್‌ ಮತ್ತಿತತರಿದ್ದರು.

Follow Us:
Download App:
  • android
  • ios