ವಿಜಯಪುರ: 1,322 ಕೋಟಿ ವೆಚ್ಚದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿ, ಸಂಸದ ರಮೇಶ ಜಿಗಜಿಣಗಿ
ಕಳೆದ ಹಲವಾರು ವರ್ಷಗಳಿಂದ ವಿಜಯಪುರ ರೈಲೆ ವಲಯ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಕಳೆದ 9 ವರ್ಷಗಳ ಅವಧಿಯಲ್ಲಿ ರೈಲ್ವೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ: ಸಂಸದ ರಮೇಶ ಜಿಗಜಿಣಗಿ
ವಿಜಯಪುರ(ಆ.20): ಕಳೆದ 9 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರೈಲ್ವೆ ಜಾಲ ವಿಸ್ತರಣೆ, ರೈಲ್ವೆ ಮೇಲ್ಸೇತುವೆ ಸೇರಿದಂತೆ ಒಟ್ಟು 1322 ಕೋಟಿಗಳನ್ನು ವೆಚ್ಚ ಮಾಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ವಿಜಯಪುರ ರೈಲೆ ವಲಯ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಕಳೆದ 9 ವರ್ಷಗಳ ಅವಧಿಯಲ್ಲಿ ರೈಲ್ವೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸೊಲ್ಲಾಪುರ ಮತ್ತು ವಂದಾಲ ನಿಲ್ದಾಣಗಳ ನಡುವೆ ವಿದ್ಯುದ್ದೀಕರಣದೊಂದಿಗೆ ಡಬ್ಲಿಂಗ್ ಪೂರ್ಣಗೊಳಿಸಲಾಗಿದೆ. ವಂದಾಲ ಮತ್ತು ಗದಗ ನಿಲ್ದಾಣಗಳ ನಡುವಿನ ಕಾಮಗಾರಿ ಭರದಿಂದ ಸಾಗಿದ್ದು, ಮಾರ್ಚ್-2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ಪೂರ್ಣಗೊಂಡ ನಂತರ ವಿಜಯಪುರ ಹಾಗೂ ಬೆಂಗಳೂರು ಮತ್ತು ಇತರೆ ಎಲ್ಲ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳು ಓಡಲು ಸಾಧ್ಯವಾಗುತ್ತದೆ. ಈ ಕಾರ್ಯ ಪೂರ್ಣಗೊಳ್ಳುವುದರಿಂದ ಸಮಯದ ಮಿತವ್ಯಯ ಹಾಗೂ ಪರಿಸರ ಸ್ನೇಹಿ ಸಂಚಾರ ಸಾಧ್ಯವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಎಂಪಿ ಚುನಾವಣೆಗೆ ವಿಜಯಪುರದಿಂದ ಕಾರಜೋಳ ಸ್ಪರ್ಧಿಸಲ್ಲ: ಸಂಸದ ಜಿಗಜಿಣಗಿ
ವಿಜಯಪುರ-ಹೈದರಾಬಾದ್ (ರೈಲು ಸಂಖ್ಯೆ 17029/17030) ಮತ್ತು ರಾಜಯಪುರ-ರಾಯಚೂರು (ರೈಲು ಸಂಖ್ಯೆ 07663/07654) ನಡುವೆ ಈಗಾಗಲೇ ಎಲೆಕ್ಟ್ರಿಕ್ ರೈಲುಗಳು ಸಂಚರಿಸುತ್ತಿವೆ. ಕೂಡಗಿ ಉಷ್ಣಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸುವ ಗೂಡ್ಸ್ ರೈಲುಗಳು ವಿದ್ಯುತ್ ಲೋಕೋದಿಂದ ಚಲಿಸುತ್ತಿವೆ. ಬಾಗಲಕೋಟೆ ರಸ್ತೆಯ ವಜ್ರ ಹನುಮಾನ್ ನಗರ ಮತ್ತು ಬಾಗೇವಾಡಿ ರಸ್ತೆಯ ಇಬ್ರಾಹಿಂಪುರದಲ್ಲಿ ರೈಲ್ವೆ ಮೇಲೆ ಮೇಲ್ಸೆತುವೆ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಮೇಲ್ಸೇತುವೆ ಕಾಮಗಾರಿ ಸಹ ಭರದಿಂದ ಸಾಗಿದ್ದು, ಇಂಡಿ ರಸ್ತೆಯಲ್ಲಿರುವ ಕಿರಾಣಾ ಮಾರುಕಟ್ಟೆಯ ಬಳಿ ಆರ್‌ಓಬಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಸಿಮೆಂಟ್, ರಸಗೊಬ್ಬರಗಳು, ಆಹಾರ ಧಾನ್ಯಗಳು ಮತ್ತು ಇತರೆ ಸರಕುಗಳನ್ನು ಸಾಗಿಸುವ ರೈಲುಗಳ ಎಲ್ಲ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮೊದಲಾದ ಕಾರ್ಯಗಳನ್ನು ನಿರ್ವಹಿಸಲು .20 ಕೋಟಿ ವೆಚ್ಚದಲ್ಲಿ ಅಲಿಯಾಬಾದ್ ಬಳಿ ಸುಸಜ್ಜಿತ ಹಾಗೂ ಅತ್ಯಾಧುನಿಕ ಗೂಡ್‌್ಸ ಶೆಡ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ವಿಜಯಪುರದಿಂದ ಫಂಡರಪುರಕ್ಕೆ ರೈಲು:
ಮೈಸೂರು-ಸೊಲ್ಲಾಪುರ ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಶೀಘ್ರವೇ ಸುಕ್ಷೇತ್ರ ಫಂಡರಪುರಕ್ಕೆ ವಿಸ್ತರಣೆ ಮಾಡಲಾಗುವುದು. ಆ ಮೂಲಕ ಸುಲಭವಾಗಿ ಫಂಡರಪುರಕ್ಕೆ ತೆರಳಿ ಪಾಂಡುರಂಗ ವಿಠ್ಠಲನ ದರ್ಶನ ಪಡೆಯುವುದು ಸುಲಭವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಫಂಡರಪುರಕ್ಕೆ ರೈಲ್ವೆ ಸೌಲಭ್ಯ ಕಲ್ಪಿಸುವುದು ಜನರ ಬಹುದಿನಗಳ ಬೇಡಿಕೆಯಾಗಿತ್ತು. ಈಗ ಭಕ್ತರ ಬೇಡಿಕೆ ಈಡೇರಲಿದ್ದು, ಪಾಂಡುರಂಗ ವಿಠ್ಠಲನ ದರ್ಶನ ಪಡೆಯುವುದು ಸುಲಭವಾಗುತ್ತದೆ. ಮುಖ್ಯವಾಗಿ ವಿಜಯಪುರ ಸೊಲ್ಲಾಪುರ ನಡುವೆ ಈ ರೈಲಿನ ಪ್ರಯಾಣದ ಅವಧಿ ಈಗಿರುವ 3 ತಾಸಿನ ಬದಲಾಗಿ ಕೇವಲ ಗಂಟೆಯಾಗಲಿದೆ. ಈ ರೈಲು ಬೆಳಗ್ಗೆ 8.30ಕ್ಕೆ ವಿಜಯಪುರದಿಂದ ಹೊರಟು ಸೊಲ್ಲಾಪುರ 12.10ಕ್ಕೆ ಬದಲಾಗಿ 10.15ಕ್ಕೆ ತಲುಪಿ ನಂತರ ಮಧ್ಯಾಹ್ನ 12.25ಕ್ಕೆ ಫಂಡರಪುರ ತಲುಪಲಿದೆ. ಪುನಃ ಅದೇ ರೈಲು ಮಧ್ಯಾಹ್ನ 1ಕ್ಕೆ ಹೊರಟು ಸೊಲ್ಲಾಪುರ 13.30ಕ್ಕೆ ಹಾಗೂ ವಿಜಯಪುರಕ್ಕೆ ಸಂಜೆ 5.45 ಎಂದಿನಂತೆ ಬೆಂಗಳೂರ ಕಡೆ ಹೊರಡುತ್ತಿದೆ ಎಂದು ವಿವರಿಸಿದರು.
ವಿಜಯಪುರ-ಮಂಗಳೂರು ಎಕ್ಸಪ್ರೆಸ್ ದೈನಂದಿನ ರೈಲು (ರೈಲು ಸಂಖ್ಯೆ 07377/07378) ಉತ್ತರ ಕರ್ನಾಟಕದಿಂದ ಕರಾವಳಿ ಕರ್ನಾಟಕವನ್ನು ಸಂಪರ್ಕಿಸುವ ಮೊದಲ ರೈಲು ಈ ರೈಲನ್ನು ಸಾಮಾನ್ಯ ರೈಲಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ರೈಲು ವಿಜಯಪುರ ಪ್ರದೇಶದ ಪ್ರಯಾಣಿಕರಿಗೆ ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮತ್ತು ಸುತ್ತಮುತ್ತಲಿನ ಇತರೆ ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಮಂಗಳೂರು ಶ್ರೇಣಿ ಮತ್ತು ವಾಣಿಜ್ಯ ಕೇಂದ್ರವಾಗಿರುವುದರಿಂದ ಜನರು ಆರಾಮದಾಯಕ ರೈಲು ಪ್ರಯಾಣದೊಂದಿಗೆ ಈ ಸ್ಥಳವನ್ನು ತಲುಪಲು ಉಪಯುಕ್ತವಾಗಿದೆ ಎಂದರು.
ವಿಜಯಪುರ- ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 0732/07330) ಹೊಸಪೇಟೆ ಕೊಟ್ಟೂರು ಮಾರ್ಗವಾಗಿ ವಿಜಯಪುರ-ಯಶವಂತಪುರ ಎಕ್ಸಪ್ರೆಸ್ ದೈನಂದಿನ ರೈಲು (ರೈಲು ಸಂಖ್ಯೆ 05515/06546) ಈ ರೈಲನ್ನು ಸಹ ಸಾಮಾನ್ಯ ರೈಲು ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ವಿಜಯಪುರ ಸೊಲ್ಲಾಪುರ ಮೂಲಕ ಹುಬ್ಬಳ್ಳಿ ವಾರಣಾಸಿ ಸಾಪ್ತಾಹಿಕ ಎಕ್ಸಪ್ರೆಸ್ ರೈಲು (ರೈಲು ಸಂಖ್ಯೆ 17323/17324) ವಿಶ್ವ ಪ್ರಸಿದ್ದ ಕಾಶಿ ವಿಶ್ವನಾಥ ದರ್ಶನ ಪಡೆಯಲು ಅಥವಾ ಪ್ರಯಾಗ ರಾಜ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಈ ರೈಲು ಸೇವೆ ಅನುಕೂಲ ಒದಗಿಸಲಿದೆ ಎಂದರು. ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ, ರಾಕೇಶ ಕುಲಕರ್ಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸೂಪರ್ ಫಾಸ್ಟ್ ರೈಲು ವಿಸ್ತರಣೆ:
ಮುಂಬೈ-ಗದಗ ದೈನಂದಿನ ಸೂಪರ್-ಫಾಸ್ಟ್ ರೈಲು (ರೈಲು ಸಂಖ್ಯೆ 11139/11140) ವಿಜಯಪುರ ಮೂಲಕ ಹೊಸಪೇಟೆವರೆಗೆ ಶೀಘ್ರದಲ್ಲೇ ವಿಸ್ತರಿಸಲಾಗುವುದು. ಈ ರೈಲಿನ ಸೇವೆ ವಿಸ್ತರಣೆಯಿಂದ ವಿಜಯಪುರವನ್ನು ವಿಶ್ವ ಪರಂಪರೆಯ ನಗರಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಈ ರೈಲು ಬೆಳಗ್ಗೆ 5.30ಕ್ಕೆ ವಿಜಯಪುರ ಬಿಟ್ಟು 10.40ಕ್ಕೆ ಗದಗ ತಲುಪಲಿದೆ. ಅಲ್ಲಿಂದ 10.45ಕ್ಕೆ ಹೊರಟು ಮಧ್ಯಾನ 12.45ಕ್ಕೆ ಹೊಸಪೇಟೆ ತಲುವಲಿದ ಪುನಃ ಅದೇ ರೈಲು ಮಧ್ಯಾಹ್ನ 2 ಗಂಟೆಗೆ ಹೊರಟು ಗದಗ ತಲುಪಿ, ಮಧ್ಯಾಹ್ನ 3.25ಕ್ಕೆ ವಿಜಯಪುರಕ್ಕೆ, ಅಂದಾಜು ಸಂಜೆ 6.30 ಬಂದು ನಂತರ ಸೊಲ್ಲಾಪುರ ಮಾರ್ಗವಾಗಿ ಬೆಳಗ್ಗೆ 5.10ಕ್ಕೆ ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್ ತಲುಪುತ್ತದೆ. ಇದರಿಂದ ವಿಜಯಪುರ ಮುಂಬೈ ನಡುವಣ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಸೊಲ್ಲಾಪುರ -ಗದಗ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 11305/11306) ಶೀಘ್ರದಲ್ಲೇ ಹೊಸಪೇಟೆವರೆಗೆ ವಿಸ್ತರಿಸಲಾಗುವುದು ಎಂದರು.
ಅಕ್ಕಮಹಾದೇವಿ ವಿವಿ: ಅನುದಾನ ಇಲ್ಲದಿದ್ರೂ 6ಕೋಟಿ ರೂ. ಖರ್ಚು ಮಾಡಿ ವಸ್ತುಸಂಗ್ರಹಾಲಯ ನಿರ್ಮಾಣ!
ವಿಜಯಪುರ ಅಮೃತ್ ನಿಲ್ದಾಣಕ್ಕೆ ಸೇರ್ಪಡೆ
ಅಮೃತ ನಿಲ್ದಾಣ ಯೋಜನೆಯಡಿಯಲ್ಲಿ ವಿಜಯಪು ರೈಲ್ವೆ ನಿಲ್ದಾಣ ಸೇರ್ಪಡೆಯಾಗಿದೆ. ಈ ನಿಟ್ಟಿನಲ್ಲಿ .28 ಕೋಟಿಗೂ ಅಧಿಕ ಹಣದಲ್ಲಿ ನಿಲ್ದಾಣದ ಯಾರ್ಡ್ ಆಧುನೀಕರಿಸುವ ಕೆಲಸ ಪ್ರಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿ ಡಿಸೆಂಬರ್-2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಿಜಯಪುರದಲ್ಲಿಯೇ ರೈಲುಗಳ ನಿರ್ವಹಣೆಗಾಗಿ ನಿಲ್ದಾಣವು 4 ಪ್ಲಾಟ್‌ಫಾಮ್‌ರ್ ಮತ್ತು ಫಿಟ್ಲೈನ್‌ನ್ನು ನಿರ್ಮಿಸಲಾಗುತ್ತಿದೆ. ಇದರಿಂದ ವಿಜಯಪುರದಿಂದ ತಿರುಪತಿ, ವಿಜಯವಾಡ ಅಥವಾ ಕನ್ಯಾಕುಮಾರಿ ಮುಂತಾದ ವಿಜಯಪುರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರದ ಅನೇಕ ನಿಲ್ದಾಣಗಳಿಗೆ ನೇರವಾಗಿ ಹೊಸ ರೈಲುಗಳನ್ನು ಪ್ರಾರಂಭಕ್ಕೆ ದಾರಿಯಾಗಲಿದೆ ಎಂದು ತಿಳಿಸಿದರು.
ವಿಜಯಪುರ ಮತ್ತು ಸೊಲ್ಲಾಪುರ ಮೂಲಕ ಹುಬ್ಬಳ್ಳಿ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20657/20658) ನಮ್ಮ ಕರ್ನಾಟಕದ ಭಾಗದೊಂದಿಗೆ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕವನ್ನು ಹೊಂದಲು ಈ ಹಿಂದಿನಿಂದಲೂ ಪ್ರಯತ್ನ ನಡೆದಿದೆ. ವಿಜಯಪುರದ ಜನರಿಗೆ ಅತ್ಯಂತ ಅನುಕೂಲಕರ ಸಮಯದೊಂದಿಗೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ. ಈ ರೈಲಿನ ಫ್ರಿಕ್ವೆನ್ಸಿ ಹೆಚ್ಚಿಸಲು ಈಗಾಗಲೇ ರೈಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದು, ಈ ರೈಲಿನ ಸಂಚಾರ ವಾರಕ್ಕೆ 2 ಅಥವಾ 3 ಬಾರಿ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವ ನಿರೀಕ್ಷೆ ಇದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.