ಹಾಸನ [ಮಾ.12]: ಹಾಸನ ನಗರದ ಹೊಸ ಬಸ್ ನಿಲ್ದಾಣದ ಎದುರು ನಿರ್ಮಾಣದ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು ಬಿದ್ದಿದೆ. 

"

ಇಲ್ಲಿನ ಹೊಸ ಬಸ್ ನಿಲ್ದಾಣದ ಎದುರಿನಲ್ಲೇ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತಿತ್ತು. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತಿತ್ತು. ಆದರೆ ಇಂದು ಬೆಳಗ್ಗೆ ಏಕಾ ಏಕಿ ಸೇತುವೆ ಕುಸಿದು ಬಿದ್ದಿದೆ. 

ಜೋಡಣೆ ಮಾಡಿದ್ದ ನಾಲ್ಕು ಭಾರೀ ಗಾತ್ರದ ಸಿಮೆಂಟ್ ಕಂಬಗಳು ಕುಸಿದಿದ್ದು, ಇದರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಯಾವುದೇ ಜನ ಸಂಚಾರ ಇಲ್ಲದ ಕಾರಣ ಅವಘಡವಾಗಿಲ್ಲ.

ಕೊರೋನಾ ವೈರಸ್: ಫೇಸ್ ಮಾಸ್ಕ್‌ನಿಂದ ರಕ್ಷಣೆ ಅಸಾಧ್ಯವೇ?...

ನಿತ್ಯ ಇಲ್ಲಿಯೇ ಅನೇಕ ಕ್ಯಾಂಟೀನ್ ಗಳನ್ನು ತೆರೆದು ವ್ಯಾಪಾರ ಮಾಡಲಾಗುತಿತ್ತು. ಆದರೆ ಕೊರೋನಾ ಸೋಂಕು ಆತಂಕದ ಹಿನ್ನೆಲೆಯಲ್ಲಿ ರಸ್ತೆ ಬದಿ ಆಹಾರ ವ್ಯಾಪಾರ ನಿರ್ಬಂಧಿಸಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಯಾರೂ ಇರಲಿಲ್ಲ. ಇದೇ ವೇಳೆ ಬೃಹತ್ ಗಾತ್ರದ ಕಂಬಗಳು ಕುಸಿದು ಬಿದ್ದಿವೆ. 

ಒಟ್ಟು 42 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆ ಕಾಮಗಾರಿ ನಡೆಸಲಾಗುತಿತ್ತು. 

ಹಲವು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಇಲ್ಲಿ ಕಾಮಗಾರಿ ನಡೆಸಲಾಗುತಿತ್ತು. ಆದರೆ ಇದೀಗ ಅರ್ಧದಲ್ಲೇ ಕಾಮಗಾರಿಗೆ ವಿಘ್ನ ಎದುರಾಗಿದೆ.