ರಾಮಕೃಷ್ಣ ದಾಸರಿ

ರಾಯಚೂರು(ಮೇ.14): ನೆರೆ ರಾಜ್ಯ, ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತ ವ್ಯಕ್ತಿಗಳೊಂದಿಗೆ ಜಿಲ್ಲೆ ಜನರು ಹೊಂದಿರುವ ನಂಟಿನ ಕಗ್ಗಂಟು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಕೊರೋನಾ ಲಾಕ್‌ಡೌನ್‌ ಮೊದಲ ಹಾಗೂ ಎರಡನೇ ಹಂತದಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ವರದಿಯಾಗದೇ ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿಗೆ ಇದೀಗ ವಲಸಿಗರ ಆಗಮನ, ಸೋಂಕಿತರೊಂದಿಗೆ ಜಂಟಿನ ಮಾಹಿತಿಯು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡುತ್ತಿದೆ.

ಹಸಿರು ವಲಯದಲ್ಲಿದ್ದ ಪಕ್ಕದ ಯಾದಗಿರಿ ಜಿಲ್ಲೆ ಸುರಪುರನಲ್ಲಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು ಅವರು ನೀಡಿದ ಪ್ರಾಥಮಿಕ ಮಾಹಿತಿಯಂತೆ ಮುದಗಲ್‌ನಲ್ಲಿ ಸಂಚರಿಸಿರುವುದಾಗಿ ತಿಳಿಸಿದ್ದಾರೆ. ಈ ವಿಷಯ ದೃಢಪಡಬೇಕಾಗಿದ್ದರೂ ಸಹ ಮಾಹಿತಿ ತಿಳಿದ ಮುದಗಲ್‌ ಪಟ್ಟಣ ವಾಸಿಗಳು ಭೀತಿಗೊಂಡಿದ್ದಾರೆ. ಇನ್ನು ನೆರೆಯ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಒಂದೇ ಬಸ್ಸಿನಲ್ಲಿ ಸಿಂಧನೂರಿನ ಇಬ್ಬರು ಹಾಗೂ ಮಸ್ಕಿಯ ಒಬ್ಬರು ಸಂಚರಿಸಿರುವುದರಿಂದ ಅವರನ್ನು ಐಸೋಲೇಷನ್‌ಗೆ ಸೇರಿಸಿದ್ದು, ಅವರ ಕುಟುಂಬಸ್ಥರನ್ನು ಕ್ವಾರಂಟೈನ್‌ಗೆ ಸೇರಿಸಲಾಗಿದೆ. ಹೀಗೆ ಸೋಂಕಿತ ವ್ಯಕ್ತಿಗಳೊಂದಿಗಿನ ನಂಟನ್ನು ಜಿಲ್ಲೆಯ ಜನರು ಪಡೆದಿರುವ ವಿಷಯವು ಎಲ್ಲೆಡೆ ವೈರಲ್‌ಗೊಂಡು ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ.

ಮಾಸ್ಕ್ ಧರಿಸದ ಬೈಕ್ ಸವಾರಿಗೆ ಲಾಠಿ ಏಟುಕೊಟ್ಟ ರಾಯಚೂರು SP ವೇದಮೂರ್ತಿ

ಕ್ವಾರಂಟೈನ್‌ ಮಂದಿಯ ಓಡಾಟ:

ನೆರೆ ರಾಜ್ಯಗಳ ಕಾರ್ಮಿಕರನ್ನು ನಗರದ ಬೋಳಮಾನದೊಡ್ಡಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದ್ದರೂ, ಅಲ್ಲಿಯ ಮಂದಿ ಸುತ್ತಮುತ್ತಿನ ಪ್ರದೇಶದಲ್ಲಿ ಸಾಮಾನ್ಯರಂತೆ ಓಡಾಟ ನಡೆಸುತ್ತಿರುವುದು ನಿವಾಸಿಗಳ ನಿದ್ದೆಗೆಡಿಸುವಂತೆ ಮಾಡಿದೆ. ಕೇಂದ್ರದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಅಗತ್ಯ ಸವಲತ್ತುಗಳ ಒದಗಿಸದ ಕಾರಣಕ್ಕೆ ಕ್ವಾರಂಟೈನ್‌ನಲ್ಲಿರುವ ಕಾರ್ಮಿಕರು ಜರೂರಿ ವಸ್ತುಗಳ ಖರೀದಿಗಾಗಿ ಕೇಂದ್ರ ಬಿಟ್ಟು ಬರುತ್ತಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ಅವರು ಓಡಾಡುತ್ತಿದ್ದು ಈ ಕೂಡಲೇ ಅವರ ಮೇಲೆ ನಿಗಾ ವಹಿಸಬೇಕು, ನಿಯಮಾನುಸಾರ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆಹಾರಕ್ಕಾಗಿ ಪರದಾಟ:

ಜಿಲ್ಲೆ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ಲ್ಲಿರುವ 23 ಜನರು ಬೆಳಗ್ಗೆ ಉಪಹಾರವಿಲ್ಲದೇ ಪರದಾಡಿದ ಘಟನೆ ನಡೆದಿದೆ. 13 ಮಕ್ಕಳು, 10 ಹಿರಿಯರು ಆಹಾರವಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಜಿಲ್ಲಾಡಳಿತವು ಕೂಡಲೇ ತಹಸೀಲ್ದಾರ್‌ಗೆ ಸೂಚನೆ ನೀಡಿ ಆಹಾರದ ವ್ಯವಸ್ಥೆಯನ್ನು ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ.