ರಾಯಚೂರು[ನ.17]: ಹಾಡಹಗಲೇ ಅಪರಿಚಿತ ನಾಲ್ಕು ಜನರ ತಂಡವೊಂದು ಸಾರ್ವಜನಿಕರಿಗೆ ಮಚ್ಚು ಮತ್ತು ಪಿಸ್ತೂಲ್‌ ತೋರಿ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿರುವ ಸಿನಿಮೀಯ ಮತ್ತು ಜನರನ್ನು ಬೆಚ್ಚಿ ಬೀಳಿಸುವ ಘಟನೆ ಲಿಂಗಸೂಗುರು ಪಟ್ಟಣದ ಬಸ್‌ ನಿಲ್ದಾಣ ಬಳಿ ನಡೆದಿದೆ.

ಇಲ್ಲಿನ ಬಸ್‌ ನಿಲ್ದಾಣಕ್ಕೆ ಬಿಳಿ ಬಣ್ಣದ ಮಾರುತಿ ಸಿಯಾಜ್‌ ಕಾರಲ್ಲಿ ಬಂದ ನಾಲ್ವರು, ವ್ಯಕ್ತಿಯೊಬ್ಬರನ್ನು ತಮ್ಮ ಕಾರಿನಲ್ಲಿ ಎಳೆದೊಯ್ಯಲು ಯತ್ನಿಸಿದರು. ಈ ವೇಳೆ ವ್ಯಕ್ತಿಯ ಸಹಾಯಕ್ಕೆ ಮುಂದಾದ ಸಾರ್ವಜನಿಕರನ್ನು ಮಚ್ಚು ಮತ್ತು ಪಿಸ್ತೂಲ್‌ ತೋರಿಸಿ ಬೆದರಿಸಿದ್ದಾರೆ.

ಹಣದ ವಿಚಾರಕ್ಕಾಗಿ ವ್ಯಕ್ತಿಯನ್ನು ಅಪಹರಣಗೈದಿದ್ದಾರೆ ಎಂದು ಕೆಲವರು ದೂರಿದ್ದಾರೆ. ವ್ಯಕ್ತಿಯ ಅಪಹರಣ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಹರಣವಾದ ವ್ಯಕ್ತಿಯ ಮಾಹಿತಿ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲಿಂಗಸೂಗುರು ಠಾಣಾ ಪೊಲೀಸರು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಸೆರೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ.