ರಾಯಚೂರಿನಲ್ಲಿ ‘ದರ್ವೇಶ್ ಗ್ರೂಪ್ ಆಫ್ ಕಂಪನಿ’ ಅಧಿಕ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ನಾಪತ್ತೆಯಾಗಿದ್ದು, ಎರಡು ವರ್ಷಗಳಿಂದ ಸಿಐಡಿ ತನಿಖೆ ನಡೆದರೂ ಆತ ಸಿಕ್ಕಿಲ್ಲ. ಇದೀಗ ಹಣ ಕಳೆದುಕೊಂಡ ಸಂತ್ರಸ್ತರು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.
ರಾಯಚೂರು: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಂಚನೆ ಬಳಿಕ ಅದೇ ರೀತಿಯ ಒದೊಂದೇ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ರಾಯಚೂರಿನಲ್ಲಿ ಇದೇ ರೀತಿಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಧಿಕ ಲಾಭ ಹಾಗೂ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಇದೀಗ ‘ದರ್ವೇಶ್ ಗ್ರೂಪ್ ಆಫ್ ಕಂಪನಿ’ (Darvesh Group of Companies) ಸಾರ್ವಜನಿಕರಿಗೆ ನಾಮ ಹಾಕಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಮಾಲೀಕ ಮಹಮ್ಮದ್ ಸೂಜಾ ಎಂಬಾತ ನೂರಾರು ಹೂಡಿಕೆದಾರರ ನೂರಾರು ಕೋಟಿ ಹಣವನ್ನು ಎತ್ತುವಳಿ ಮಾಡಿಕೊಂಡು ರಾತ್ರೋರಾತ್ರಿ ನಾಪತ್ತೆಯಾಗಿದ್ದು, ಇತ್ತ ಹೂಡಿಕೆದಾರರು ಬೀದಿಗೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ, ಈ ವಂಚನೆಯ ಜಾಲ ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡ ನೂರಾರು ಹೂಡಿಕೆದಾರರು ಈಗ ಕಣ್ಣೀರು ಹಾಕುತ್ತಿದ್ದಾರೆ.
ಎರಡು ವರ್ಷಗಳಿಂದ ಸಿಐಡಿ ತನಿಖೆ, ಆದರೂ ಸಿಕ್ಕಿಲ್ಲ ಮಾಲೀಕ!
ಈ ಮಹಾಮೋಸದ ಕುರಿತು ದೂರು ದಾಖಲಾದ ಬೆನ್ನಲ್ಲೇ ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಸರ್ಕಾರ ಇದನ್ನು ಸಿಐಡಿ (CID) ತನಿಖೆಗೆ ಒಪ್ಪಿಸಿತ್ತು. ಕಳೆದ ಎರಡು ವರ್ಷಗಳಿಂದ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ, ಇದುವರೆಗೆ ದರ್ವೇಶ್ ಕಂಪನಿಯ ಮುಖ್ಯ ಸೂತ್ರಧಾರ ಮಹಮ್ಮದ್ ಸೂಜಾನನ್ನು ಬಂಧಿಸಲು ಸಾಧ್ಯವಾಗಿಲ್ಲ. ಎರಡು ವರ್ಷ ಕಳೆದರೂ ವಂಚಕ ಮಾಲೀಕ ಪತ್ತೆಯಾಗದಿರುವುದು ಹೂಡಿಕೆದಾರರಲ್ಲಿ ಆಕ್ರೋಶ ಮತ್ತು ಅಸಹಾಯಕತೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಬೇರೆ ದಾರಿ ಕಾಣದ ನೂರಾರು ಹೂಡಿಕೆದಾರರು ಇದೀಗ ನ್ಯಾಯಕ್ಕಾಗಿ ನ್ಯಾಯಾಲಯದ (Court) ಮೆಟ್ಟಿಲೇರಿದ್ದಾರೆ.
ಕಡು ಬಿಸಿಲಿನಲ್ಲಿ ಹೂಡಿಕೆದಾರರು ಹಾಗೂ ಏಜೆಂಟರ ಗೋಳಾಟ!
ದರ್ವೇಶ್ ಕಂಪನಿಯನ್ನು ನಂಬಿ ಹಣ ಹೂಡಿಕೆ ಮಾಡಿದವರು ಕಳೆದ ಎರಡು ವರ್ಷಗಳಿಂದ ತಮ್ಮ ಹಣ ವಾಪಸ್ ಪಡೆಯಲು ತೀವ್ರ ಪರದಾಟ ನಡೆಸುತ್ತಿದ್ದಾರೆ. ಈ ವಂಚನೆ ಜಾಲದಿಂದಾಗಿ ಕೇವಲ ಹೂಡಿಕೆದಾರರು ಮಾತ್ರವಲ್ಲದೆ, ಕಂಪನಿಯಲ್ಲಿದ್ದ ಸ್ಥಳೀಯ ಏಜೆಂಟರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿದ್ದ ಏಜೆಂಟರಿಗೆ ಈಗ ಹೂಡಿಕೆದಾರರು ಹಣ ಕೇಳಿ ಒತ್ತಾಯಿಸುತ್ತಿರುವುದರಿಂದ ಅವರು ಯಾರಿಗೆ ಮುಖ ತೋರಿಸಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ಬೀದಿಗಿಳಿದು ಹೋರಾಟ:
ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿರುವ ನೂರಾರು ಜನ ಸಂತ್ರಸ್ತರು, ರಾಯಚೂರಿನ ಉರಿ ಬಿಸಿಲನ್ನೂ ಲೆಕ್ಕಿಸದೆ ಸದ್ಯ ಮುಚ್ಚಿ ಹೋಗಿರುವ ದರ್ವೇಶ್ ಕಂಪನಿಯ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. "ನಮ್ಮ ರಕ್ತದ ಹಣ ನಮಗೆ ವಾಪಸ್ ಸಿಗಬೇಕು, ವಂಚಕ ಮಾಲೀಕನನ್ನು ತಕ್ಷಣ ಬಂಧಿಸಬೇಕು" ಎಂದು ಉರಿ ಬಿಸಿಲಿನಲ್ಲೇ ಹೋರಾಟ ನಡೆಸುತ್ತಾ ಹೂಡಿಕೆದಾರರು ಕಣ್ಣೀರು ಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಹಣಕಾಸು ಸಂಸ್ಥೆಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಕಂಪನಿಗಳು ಅಧಿಕ ಬಡ್ಡಿಯ ಆಮಿಷ ಒಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಹೆಚ್ಚಾಗುತ್ತಿದ್ದು, ಇಂತಹ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮುನ್ನ ಜನರು ಎಚ್ಚರದಿಂದ ಇರಬೇಕಾಗಿದೆ. ಸದ್ಯ ಸಿಐಡಿ ಮತ್ತು ನ್ಯಾಯಾಲಯದ ಮೇಲೆಯೇ ಹೂಡಿಕೆದಾರರು ತಮ್ಮ ಸಂಪೂರ್ಣ ಭರವಸೆಯನ್ನು ಇಟ್ಟಿದ್ದಾರೆ.


