Asianet Suvarna News Asianet Suvarna News

ಜಿಮ್‌ನಲ್ಲಿ ಬೆವರಿಳಿಸಿದ ರಾಹುಲ್‌: ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೂ ಭೇಟಿ, ಪೊಲೀಸರ ನಡೆಗೆ ಆಕ್ರೋಶ

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಇಲ್ಲಿನ ಖಾಸಗಿ ಹೊಟೇಲ್‌ನ ಜಿಮ್‌ನಲ್ಲಿ ಬೆವರಿಳಿಸಿದರು. ಬೆಳಗ್ಗೆ ಬೇಗನೆ ಎದ್ದ ರಾಹುಲ್‌, ಹೋಟೆಲ್‌ ಲಾಂಜ್‌ನಲ್ಲೇ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಕಿಂಗ್‌ ಮಾಡಿದರು.

Rahul sweated in the gym, also visited the national flag manufacturing unit hubli akb
Author
Hubli, First Published Aug 4, 2022, 12:43 PM IST

ಹುಬ್ಬಳ್ಳಿ/ದಾವಣಗೆರೆ: ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಇಲ್ಲಿನ ಖಾಸಗಿ ಹೊಟೇಲ್‌ನ ಜಿಮ್‌ನಲ್ಲಿ ಬೆವರಿಳಿಸಿದರು. ಬೆಳಗ್ಗೆ ಬೇಗನೆ ಎದ್ದ ರಾಹುಲ್‌, ಹೋಟೆಲ್‌ ಲಾಂಜ್‌ನಲ್ಲೇ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ವಾಕಿಂಗ್‌ ಮಾಡಿದರು. ಬಳಿಕ ಜಿಮ್‌ನಲ್ಲಿ ವರ್ಕೌಟ್‌ ಮಾಡಿದರು. ಕೆಲ ಕಾಲ ‘ವಿಪ್ಸಾನಾ ಧ್ಯಾನ’ ಕೂಡ ಮಾಡಿದರು ಎಂದು ಮೂಲಗಳು ತಿಳಿಸಿದರು. ಬಳಿಕ ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ ಚರಕಾ ನೀಡಿ ಗೌರವಿಸಿದರು. ಇದೇ ವೇಳೆ ಕೆಲ ಕಾಂಗ್ರೆಸ್‌ ಮುಖಂಡರು ರಾಹುಲ್‌ ಗಾಂಧಿ ಅವರನ್ನು ಸನ್ಮಾನಿಸಿದರು. 


ದಿನ್‌ ಮೇ ಕಿತನೆ ಫ್ಲ್ಯಾಗ್‌ ಬನಾತೆ ಹೋ

ಇಲ್ಲಿನ ರಾಷ್ಟ್ರಧ್ವಜ ತಯಾರಿಕಾ ಘಟಕವಾದ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್‌ ಗಾಂಧಿ ಅಲ್ಲಿನ ಕಾರ್ಮಿಕರೊಂದಿಗೆ ಬೆರೆತರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ನೇರವಾಗಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬಂದ ರಾಹುಲ್‌, ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಅಲ್ಲಿನ ಕಾರ್ಮಿಕರೊಂದಿಗೆ ಕಳೆದರು. ಕೇಂದ್ರದ ಸಂಸ್ಥಾಪಕರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ರಾಷ್ಟ್ರಧ್ವಜ ತಯಾರಿಸುವ ಕೊಠಡಿಗೆ ತೆರಳಿದರು.

ರಾಷ್ಟ್ರಧ್ವಜ ತಯಾರಿಸುವ ಬಗೆಯನ್ನು ಅಲ್ಲಿನ ಕಾರ್ಮಿಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಅಲ್ಲದೇ, ಬಿಳಿ ಬಣ್ಣದ ಬಟ್ಟೆಮೇಲಿನ ‘ಚಕ್ರ’ದ ಗುರುತನ್ನು ಯಾವ ರೀತಿ ಮಾಡಲಾಗುತ್ತಿದೆ ಎಂಬುದನ್ನು ಅರಿತು ತಾವೂ ಆ ರೀತಿ ಸ್ಕ್ರೀನ್‌ ಪ್ರಿಂಟ್‌ ಮಾಡಿ ಖುಷಿ ಪಟ್ಟರು. ಒಂದು ಧ್ವಜವನ್ನು ಇಸ್ತ್ರೀ ಮಾಡಿದರು. ಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ, ‘ಏಕ್‌ ದಿನ್‌ ಮೇ ಕಿತನೇ ಫ್ಲ್ಯಾಗ್‌ ಬನಾತೆ ಹೋ.. ಕಿನ್‌ ಕಿನ್‌ ಸೈಜ್‌ ಕೆ ಫ್ಲ್ಯಾಗ್‌ ಕೋ ಕಿತನಾ ರೇಟ್‌ ಪಡ್ತಾ ಹೈ. ಎಂದೆಲ್ಲ ಪ್ರಶ್ನೆ ಕೇಳಿದರು.

ಸಿದ್ದರಾಮೋತ್ಸವ ಬಳಿಕ ಸಂಚಲನ, ಪಕ್ಷ ಅಧಿಕಾರಕ್ಕೆ ತರಲು 'ಕೈ' ಸಂಕಲ್ಪ

ಈ ವೇಳೆ ಅಲ್ಲಿನ ಮಹಿಳಾ ಕಾರ್ಮಿಕರು, ಒಂದು ದಿನಕ್ಕೆ ಸಣ್ಣ ಧ್ವಜಗಳಾದರೆ 10-12 ಮಾಡುತ್ತೇವೆ. ದೊಡ್ಡ ಧ್ವಜಗಳಾದರೆ ಇಬ್ಬರು ಸೇರಿಕೊಂಡು ಒಂದು ಧ್ವಜ ಮಾಡುತ್ತೇವೆ ಎಂದು ವಿವರಿಸಿದರು. ಯಾವ್ಯಾವ ಸೈಜಿನ ಧ್ವಜಗಳಿರುತ್ತವೆ ಎಂಬುದನ್ನು ತೋರಿಸಿದರು. ಈ ವೇಳೆ ರಾಹುಲ್‌ ಗಾಂಧಿ ಧ್ವಜ ಹಿಡಿದು ಸಂತಸ ಪಟ್ಟರು. ಧ್ವಜ ತಯಾರಿಸುವ ಪ್ರತಿ ವಿಭಾಗಕ್ಕೆ ತೆರಳಿ ಅಲ್ಲಿನ ಕೆಲಸಗಳನ್ನು ಅತ್ಯಂತ ಮುತುವರ್ಜಿಯಿಂದ ವೀಕ್ಷಿಸಿದರು. ಇದೇ ವೇಳೆ ಕಾರ್ಮಿಕರು, ಅಲ್ಲಿನ ಸಿಬ್ಬಂದಿ ರಾಹುಲ್‌ ಗಾಂಧಿ ಅವರಿಗೆ ಚರಕ ನೀಡಿ ಸನ್ಮಾನಿಸಿದರು. ಸುಮಾರು 20 ನಿಮಿಷಗಳ ಕಾಲ ಎಲ್ಲ ಕಾರ್ಮಿಕರೊಂದಿಗೆ ಸಾಮಾನ್ಯರಂತೆ ಬೆರತರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದೆ ಬಂದ ಕಾರ್ಮಿಕರಿಗೂ ಫೋಸ್‌ ಕೊಟ್ಟರು. ಕೊನೆಗೆ ಕಾರ್ಮಿಕರೊಂದಿಗೆ ಗ್ರೂಪ್‌ ಫೋಟೋ ತೆಗೆಸಿಕೊಂಡರು.

ಬಳಿಕ ಅಲ್ಲಿಂದ ಹೊರ ಬಂದು ಕಾರ್ಮಿಕರು, ಕಾಂಗ್ರೆಸ್‌ ಕಾರ್ಯಕರ್ತರತ್ತ ಕೈ ಬೀಸುತ್ತಾ ಕಾರನ್ನೇರಿ ತೆರಳಿದರು. ರಾಹುಲ್‌ ಜತೆ ಕೆ.ಸಿ.ವೇಣುಗೋಪಾಲ್‌, ಡಿ.ಕೆ.ಶಿವಕುಮಾರ, ಸಲೀಂ ಅಹ್ಮದ ಸೇರಿದಂತೆ ಹಲವರು ಸಾಥ್‌ ನೀಡಿದರು.

ಸಿದ್ದರಾಮೋತ್ಸವದಲ್ಲಿ 7 ಲಕ್ಷ ಜನರಿಗೆ ದಾಸೋಹ: ಸಪ್ಪೆ ಎಂದ ಹೆಚ್‌ಡಿಕೆ!
ಖುಷಿ ಆಯ್ತು

ರಾಹುಲ್‌ ಭೇಟಿ ಕೊಟ್ಟು ಖಾದಿ ಕೇಂದ್ರದಿಂದ ತೆರಳಿದ ಬಳಿಕ ಕಾರ್ಮಿಕರೆಲ್ಲರೂ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಮಿಕೆ ರುಕ್ಸನಾ, ರಾಹುಲ್‌ ಗಾಂಧಿ ಅವರು ನಮ್ಮ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದು ಖುಷಿ ನೀಡಿತು. ಎಲ್ಲರೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತು ಮಾತನಾಡಿದರು. ಧ್ವಜ ಎಷ್ಟು ತಯಾರಿಸುತ್ತೇವೆ. ಯಾವ್ಯಾವ ಸೈಜಿನ ಧ್ವಜಗಳಿರುತ್ತವೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು ಎಂದು ಹೇಳಿದರು.

ಬೂಟು ಧರಿಸಿಕೊಂಡು ಧ್ವಜ ತಯಾರಿಕಾ ಘಟಕಕ್ಕೆ ಹೋದ ಪೊಲೀಸರು?

ಇನ್ನು ರಾಹುಲ್ ಭೇಟಿ ವೇಳೆ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಮೂವರು ಪೊಲೀಸ್‌ ಅಧಿಕಾರಿಗಳು ಬೂಟು ಧರಿಸಿಕೊಂಡು ಒಳಗೆ ಹೋದ ಘಟನೆ ನಡೆದಿದೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನುಂಟು ಮಾಡಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹುಬ್ಬಳ್ಳಿ ಬೆಂಗೇರಿಯ ಧ್ವಜ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡುವ ನಿಟ್ಟಿನಲ್ಲಿ ಘಟಕದಲ್ಲಿ ಪೊಲೀಸರು ಭದ್ರತಾ ಕಾರ್ಯನಿರ್ವಹಿಸಲು ಆಗಮಿಸಿದ್ದರು. ಈ ವೇಳೆ ರಾಷ್ಟ್ರಧ್ವಜ ತಯಾರಿಕಾ ಘಟಕದೊಳಗೆ ಮೂವರು ಪೊಲೀಸ್‌ ಅಧಿಕಾರಿಗಳು ಬೂಟು ಧರಿಸಿಕೊಂಡು ಹೋದರು. ಅದರ ಬಳಿಕ ಬಂದ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಮುಖಂಡರೆಲ್ಲ ಬೂಟುಗಳನ್ನು ಹೊರಗೆ ಕಳಚಿಟ್ಟು ಒಳಹೋದರು.

ಈ ಕುರಿತು ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಕೆ.ಎಚ್‌. ಪತ್ತಾರ ಮಾತನಾಡಿ, ಪೊಲೀಸ್‌ ಅಧಿಕಾರಿಗಳು ಗೊತ್ತಿಲ್ಲದೇ ಪರಿಶೀಲನೆ ವೇಳೆ ಬೂಟು ಧರಿಸಿ ಬಂದಿರಬಹುದು. ಆದರೆ ನಾವ್ಯಾರು ಚಪ್ಪಲಿ ಹಾಗೂ ಬೂಟು ಧರಿಸಿಕೊಂಡು ಈವರೆಗೂ ಒಳಗೆ ಹೋಗಿಲ್ಲ ಎಂದರು.
 

Follow Us:
Download App:
  • android
  • ios