Asianet Suvarna News Asianet Suvarna News

ಸಿದ್ದರಾಮೋತ್ಸವದಲ್ಲಿ 7 ಲಕ್ಷ ಜನರಿಗೆ ದಾಸೋಹ: ಸಪ್ಪೆ ಎಂದ ಹೆಚ್‌ಡಿಕೆ!

ನಿನ್ನೆ ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಸಿದ್ದರಾಮೋತ್ಸವದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು  7 ಲಕ್ಷ ಜನರಿಗೆ ಇಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜೆಡಿಎಸ್‌ನ ಜನತಾ ಜಲಧಾರೆ ಸಮಾವೇಶದ ಅರ್ಧದಷ್ಟೂ ಜನರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಜೆಡಿಎಸ್ ನಾಯಕ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

7 lakh people eat food in congress siddaramotsava which held in Davangere akb
Author
Bengaluru, First Published Aug 4, 2022, 11:25 AM IST

ದಾವಣಗೆರೆ: ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬ ಸಮಾವೇಶದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ನಿರಂತರ ದಾಸೋಹ ನಡೆದಿದ್ದು, ಬರೋಬ್ಬರಿ ಏಳು ಲಕ್ಷಕ್ಕೂ ಅಧಿಕ ಜನ ಊಟ ಮಾಡಿದ್ದಾರೆ. ಮುಖ್ಯ ಅತಿಥಿ, ಗಣ್ಯ ವ್ಯಕ್ತಿಗಳಿಗೆ ಕಾರ್ಯಕ್ರಮದ ಆವರಣದಲ್ಲಿ ವಿಶೇಷ ಊಟದ ವ್ಯವಸ್ಥೆ ಮಾಡಿರಲಿಲ್ಲ. ತನ್ಮೂಲಕ ಗಣ್ಯ ವ್ಯಕ್ತಿಗಳಿಂದ ಸಾಮಾನ್ಯವರೆಗೆ ಎಲ್ಲರಿಗೂ ಒಂದೇ ರೀತಿಯ ಊಟ ಬಡಿಸುವ ಮೂಲಕ ಸಮಾನತೆ ಸಾರುವ ಪ್ರಯತ್ನ ಮಾಡಲಾಯಿತು. ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆಂದು ಮೂರು ದಿನಗಳಿಂದಲೇ 1500ಕ್ಕೂ ಅಧಿಕ ಬಾಣಸಿಗರು ಆಹಾರ ಸಿದ್ಧಪಡಿಸಿದ್ದರು. ವೇದಿಕೆ ಬಲ ಮತ್ತು ಎಡ ಭಾಗ ಎರಡೂ ಕಡೆ ಪ್ರತ್ಯೇಕ ಶಾಮಿಯಾನ ಹಾಕಿ ಊಟ ನೀಡಲಾಗುತ್ತಿತ್ತು.

ಎಲ್ಲರಿಗೂ ಬಿಸಿಬೇಳೆ ಬಾತ್‌, ಮೊಸರನ್ನ, ಪಲಾವ್‌, ಮೈಸೂರು ಪಾಕ್‌ ವಿತರಿಸಿದ್ದು, ಬೆಳಗ್ಗೆ 9 ಗಂಟೆಯಿಂದಲೇ ಊಟ ವಿತರಣೆ ಆರಂಭವಾಗಿತ್ತು. ಸಂಜೆ 4 ಗಂಟೆವರೆಗೂ ನಿರಂತರವಾಗಿ ದಾಸೋಹ ನಡೆಯಿತು. ದೂರದ ಊರಿನಿಂದ ಬಂದ ಲಕ್ಷಾಂತರ ಜನ ಹಸಿವು ನೀಗಿಸಿಕೊಂಡರು. ಕೊನೆಯ ಹಂತದಲ್ಲಿ  ಊಟ ಖಾಲಿಯಾಗಿದ್ದರಿಂದ ಪಲಾವ್‌, ಮೆಂತ್ಯೆ ಬಾತ್‌ನಂತಹ ಆಹಾರವನ್ನು ತಕ್ಷಣ ಸಿದ್ಧಪಡಿಸಿ ಪೂರೈಸಲಾಯಿತು. ಕಾರ್ಯಕ್ರಮದಲ್ಲಿ ಬರೋಬ್ಬರಿ ಏಳು ಲಕ್ಷ ಜನ ಊಟ ಮಾಡಿದ್ದು, ಅಡುಗೆಗೆ ಐದು ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂದು ಅಡುಗೆ ಉಸ್ತುವಾರಿಗಳು ಹೇಳಿದರು. ಕೊರೋನಾ ಬಳಿಕ ಅತಿ ಹೆಚ್ಚು ಜನರಿಗೆ ಮಾಡಿದ್ದ ಊಟದ ವ್ಯವಸ್ಥೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ಮಳೆ ಬಂದರೂ ಜಗ್ಗದ ಜನ

ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರಿಗೆ ವಾಟರ್‌ ಪ್ರೂಫ್‌ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿತ್ತು. ಇದರ ಹೊರತಾಗಿಯೂ ಲಕ್ಷಾಂತರ ಮಂದಿ ಬೆಳಗ್ಗೆ 11 ಗಂಟೆಯಿಂದ ಶುರುವಾದ ಮಳೆಯಲ್ಲಿ ನೆನೆಯುತ್ತಲೇ ಕಾರ್ಯಕ್ರಮ ವೀಕ್ಷಿಸಿದರು. ತನ್ಮೂಲಕ ಸಿದ್ದರಾಮಯ್ಯ ಅವರ ಮೇಲಿನ ತಮ್ಮ ಅಭಿಮಾನ ಮೆರೆದರು.

ಹುಲಿವೇಷದಲ್ಲಿ ಬಂದರು

ಮಂಗಳೂರು ಭಾಗದಿಂದ ಆಗಮಿಸಿದ ಕಾರ್ಯಕರ್ತರು ಹುಲಿ ವೇಷದಲ್ಲಿ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದರು. ಹೌದೋ ಹುಲಿಯಾ ಖ್ಯಾತಿಯ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹುಲಿ ವೇಷ ಹಾಕಿಕೊಂಡು ಬಂದವರು ವಿಶೇಷ ಆಕರ್ಷಣೆಯಾದರು.

ಜನತಾ ಜಲಧಾರೆಯ ಅರ್ಧದಷ್ಟೂ ಜನ ಇಲ್ಲ, ಸಪ್ಪೆ: ಎಚ್‌ಡಿಕೆ

ಆದರೆ ಸಿದ್ದರಾಮೋತ್ಸವದಲ್ಲಿ ಜೆಡಿಎಸ್‌ನ ಜನತಾ ಜಲಧಾರೆ ಸಮಾವೇಶದ ಅರ್ಧದಷ್ಟೂ ಜನರು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕ್ರಮದ ಮುಂದೆ ಈ ಸಮಾವೇಶ ಏನೂ ಅಲ್ಲ. ಸಪ್ಪೆಯಾಗಿದೆ ಎಂದು ಹೇಳಿದರು. ಸಿದ್ದರಾಮೋತ್ಸವದ ಬಗ್ಗೆ ನನಗೆ ಆಸಕ್ತಿ ಇಲ್ಲ. ಜೆಡಿಎಸ್‌ನಿಂದ ಜನತಾ ಜಲಧಾರೆ ಮಾಡಿದ್ದೆವು. ಅದರ ಶೇ.50ರಷ್ಟುಈ ಸಮಾವೇಶ ಇಲ್ಲ. ಅಲ್ಲಿ 7 ಲಕ್ಷ, 8 ಲಕ್ಷ, 20 ಲಕ್ಷ ಜನರು ಸೇರಿದ್ದರು ಎನ್ನುತ್ತಾರೆ. ಅವರ ಲೆಕ್ಕಕ್ಕೆ ಅರ್ಥವೇ ಇಲ್ಲ. ನಮಗೂ ಎಲ್ಲಾ ಮಾಹಿತಿ ಇದೆ. ಅಡುಗೆ ಮಾಡಿರುವುದು, ಶಾಮಿಯಾನ ಹಾಕಿರುವುದು ಎಲ್ಲದರ ಮಾಹಿತಿ ನನಗೆ ಇದೆ. ಎಷ್ಟೇ ಆರ್ಭಟ ಮಾಡಿದರೂ ನಮ್ಮ ಕಾರ್ಯಕ್ರಮಕ್ಕೆ ಅವರ ಕಾರ್ಯಕ್ರಮ ಸರಿಸಾಟಿಯಾಗುವುದಿಲ್ಲ ಎಂದು ಟೀಕಿಸಿದರು. ಸಿದ್ದರಾಮೋತ್ಸವಕ್ಕೆ ಬರುವಾಗ ಅವರ ಕ್ಷೇತ್ರದ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಆ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನಿಗಾಗಿ ಒಂದು ಶ್ರದ್ಧಾಂಜಲಿ ಸಹ ಸಲ್ಲಿಕೆ ಮಾಡಿಲ್ಲ. ಇದು ಅವರರು ಕಾರ್ಯಕರ್ತರನ್ನು ಉಳಿಸಿಕೊಳ್ಳುವ ರೀತಿ ಎಂದರು.

ಕಾರ್ಯಕರ್ತ ಮೃತಪಟ್ಟರೂ ಯಾರೂ ಕೇಳಲಿಲ್ಲ. ಕಾರ್ಯಕರ್ತನಿಗೆ ಬೆಲೆ ಕೊಡದೆ ಸಿದ್ದರಾಮಯ್ಯ ಅವರು ವೀರಾವೇಶದಲ್ಲಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆ ಪಕ್ಷದ ಮೂಲ ನಾಯಕರು ಅಕ್ಕಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದರು. ಬೇರೆ ಪಕ್ಷಗಳಿಂದ ವಲಸೆ ಹೋಗಿರುವವರು ಮಿಂಚುತ್ತಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ತಿಂಗಳುಗಟ್ಟಲೇ ಸಿದ್ಧತೆ ನಡೆಸಿದರೂ ಸಮಾವೇಶ ವಿಫಲವಾಗಿದೆ. ಅದರ ಶಕ್ತಿ ಪ್ರದರ್ಶನ ಏನೆಂಬುದು ಜನತೆಗೆ ಚೆನ್ನಾಗಿ ಗೊತ್ತಾಗಿದೆ ಎಂದರು..

ಸಿದ್ದರಾಮೋತ್ಸವದಲ್ಲಿ ಅನ್ನರಾಮಯ್ಯ ಕಲಾಕೃತಿ

7 lakh people eat food in congress siddaramotsava which held in Davangere akb

ಇನ್ನೊಂದೆಡೆ ಸಿದ್ದರಾಮೋತ್ಸವದಲ್ಲಿ ಯಳಂದೂರು ಕಲಾವಿದನ ಕೈಯಲ್ಲಿ ಮೂಡಿಬಂದಿರುವ ಅನ್ನರಾಮಯ್ಯ(ಮಾಜಿ ಸಿಎಂ ಸಿದ್ದರಾಮಯ್ಯ) ಪ್ರತಿಮೆ ಹೆಚ್ಚು ಗಮನ ಸೆಳೆಯಿತು. ಈ ಪ್ರತಿಮೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ.ಹೊಸೂರು ಗ್ರಾಮದ ಕಲಾವಿದ ಬಿ. ಮಹೇಶ್‌ ಕೈಚಳಕದಲ್ಲಿ ಅಕ್ಕಿ ಕಾಳಿನಲ್ಲಿ ಮೂಡಿ ಬಂದಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವ ಪೂರ್ಣ ಅನ್ನಭಾಗ್ಯ ಯೋಜನೆಯ ರೂವಾರಿ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬಕ್ಕೆ ಅಕ್ಕಿಯಲ್ಲಿ ಅವರ ಪ್ರತಿಮೆ ಅರಳಿಸಿ ಕಲಾವಿದ ಶುಭ ಕೋರಿದ್ದಾರೆ.

Follow Us:
Download App:
  • android
  • ios